Advertisement

4 ಸಾವಿರ ಮನೆಗಳಿಗೆ ‘ಬೆಳಕು’ನೀಡಲು ಬಾಕಿ

01:32 PM Jul 30, 2022 | Team Udayavani |

ಉಡುಪಿ: ಬಡತನ ರೇಖೆಗಿಂತ ಕೆಳಗಿ ರುವ ಕುಟುಂಬಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್‌ ಒದಗಿಸುವ ರಾಜ್ಯಸರಕಾರದ ಮಹತ್ವಾಕಾಂಕ್ಷೆ “ಬೆಳಕು’ ಯೋಜನೆ ಮೂಲಕ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 3,500 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದ್ದು, ಇನ್ನೂ 4 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲು ಬಾಕಿ ಉಳಿದಿದೆ.

Advertisement

ಪ್ರಾರಂಭಿಕ ಹಂತದಲ್ಲಿ ಗ್ರಾ.ಪಂ. ನಿರಾಕ್ಷೇಪಣ ಪತ್ರಗಳನ್ನು ಕಡ್ಡಾಯ ಮಾಡಲಾಗಿತ್ತು. ಇದರಿಂದ ಗ್ರಾಮಾಂತರ ಭಾಗದ ನಿವಾಸಿಗಳಿಗೆ ತೊಂದರೆ ಉಂಟಾಗಿತ್ತು. ಬಳಿಕ ಯಾವುದೇ ದಾಖಲೆಗಳು ಬೇಡ. ಆಧಾರ್‌ ಕಾರ್ಡ್‌ ಅಥವಾ ವಾಸವಾಗಿರುವ ಮನೆಗೆ ಸಂಬಂಧಿಸಿದ ದಾಖಲೆ ನೀಡಿದರೆ ಸಾಕು ಎಂದು ಸಚಿವರು ಸೂಚಿಸಿದ್ದರು. ಅದರಂತೆ ಈಗ ಎನ್‌ಒಸಿ ಇಲ್ಲದೆಯೇ ಅರ್ಹರಿಗೆ ವಿದ್ಯುತ್‌ ಸಂಪರ್ಕ ನೀಡಲಾಗುತ್ತಿದೆ.

ನೀಡಲಾಗಿರುವ ಸಂಪರ್ಕ

ಜಿಲ್ಲೆಯ ಉಡುಪಿ ವಿಭಾಗದಲ್ಲಿ 593, ಕಾರ್ಕಳ ವಿಭಾಗದಲ್ಲಿ 1139, ಕುಂದಾಪುರ ವಿಭಾಗದಲ್ಲಿ 1,817 ಸಹಿತ ಒಟ್ಟು 3,549 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ 4 ಸಾವಿರಕ್ಕೂ ಅಧಿಕ ಅರ್ಜಿಗಳು ಫ‌ಲಾನುಭವಿಗಳಿಂದ ಬಂದಿತ್ತು.

ಬಾಕಿ ಉಳಿಕೆಗೆ ಕಾರಣ

Advertisement

ಜಿಲ್ಲೆಯ ಕುಂದಾಪುರ, ಬೈಂದೂರು ಭಾಗದಲ್ಲಿ ಹೆಚ್ಚಿನ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬಾಕಿ ಇದೆ. ಕೆಲವೊಂದು ಮನೆಗಳಿಗೆ ಸಂಪರ್ಕ ಒದಗಿಸಲು ಹಲವಾರು ತಂತಿಕಂಬಗಳನ್ನು ಹಾಕಬೇಕಾಗುತ್ತದೆ. ಹಾಗೆಯೇ ಈ ಯೋಜನೆ ಬಂದ ಬಳಿಕ ಹಲವಾರು ಮಂದಿ ಸಣ್ಣ-ಪುಟ್ಟ ಮನೆಗಳನ್ನು ಮಾಡಿಕೊಂಡು ವಾಸ್ತವ್ಯ ಹೂಡಿ ಅವರೂ ಬೆಳಕು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಕಾರಣ ಗಳಿಂದಾಗಿ 4 ಸಾವಿರದಷ್ಟು ಹೊಸ ಸಂಪರ್ಕ ನೀಡಲು ಬಾಕಿ ಉಳಿದಿದೆ.

ಸೂಕ್ತ ಪರಿಶೀಲನೆ

ಬೆಳಕು ಯೋಜನೆಗೆ ನೋಂದಣಿ ಮಾಡಿರುವ ಪ್ರತಿಯೊಬ್ಬ ಫ‌ಲಾನುಭವಿಗಳ ವಿವರಗಳನ್ನು ನೋಡಿ ಮನೆಗಳನ್ನು ಪರಿಶೀಲಿಸುವ ಕೆಲಸ ಮೆಸ್ಕಾಂನಿಂದ ನಡೆಯುತ್ತಿದೆ. ಒಂದೇ ಊರಿನಲ್ಲಿ ವಿದ್ಯುತ್‌ ಸಂಪರ್ಕವಿಲ್ಲದ ಹಲವಾರು ಮನೆಗಳಿದ್ದರೆ ಅವುಗಳನ್ನು ಗುರುತಿಸಿ ಹೆಚ್ಚುವರಿ ಟ್ರಾನ್ಸ್‌ ಫಾರ್ಮರ್‌ಗಳು ಬೇಕಿದ್ದರೆ ಅಳವಡಿಸುವ ಪ್ರಕ್ರಿಯೆ ಹಾಗೂ ಹೆಚ್ಚುವರಿ ವಿದ್ಯುತ್‌ ಕಂಬಗಳು, ತಂತಿಗಳ ಅಳವಡಿಕೆ ಪ್ರಕ್ರಿಯೆಗಳೂ ನಡೆಯಲಿವೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರ ವಿದ್ಯುತ್‌ ಸಂಪರ್ಕ: ಜಿಲ್ಲೆಯಲ್ಲಿ ಈಗಾಗಲೇ 3 ಸಾವಿರಕ್ಕೂ ಅಧಿಕ ಫ‌ಲಾನುಭವಿಗಳು ಬೆಳಕು ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ವಿದ್ಯುತ್‌ ಸಂಪರ್ಕ ಇಲ್ಲದ 4 ಸಾವಿರದಷ್ಟು ಮನೆಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ಇವರಿಗೆ ವಿದ್ಯುತ್‌ ಸಂಪರ್ಕ ನೀಡುವ ಕೆಲಸವಾಗಲಿದೆ. -ನರಸಿಂಹ ಪಂಡಿತ್‌, ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next