ರವಿಚಂದ್ರನ್ ಅವರ ಪುತ್ರ ವಿಕ್ರಮ್ ನಾಯಕರಾಗಿ ನಟಿಸಿರುವ ತ್ರಿವಿಕ್ರಮ ಬಹುತೇಕ ಪೂರ್ಣಗೊಂಡಿದ್ದು, ಎರಡು ಹಾಡು ಚಿತ್ರೀಕರಿಸಿದರೆ ಚಿತ್ರ ಪ್ರೇಕ್ಷಕರ ಮುಂದೆ ಬರಲು ರೆಡಿ. ತಮ್ಮ ಚಿತ್ರದ ಬಗ್ಗೆ ನಿರ್ದೇಶಕ ಸಹನಾಮೂರ್ತಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ದೇಶಕ ಸಹನಾಮೂರ್ತಿ ಹೇಳುವಂತೆ “ತ್ರಿವಿಕ್ರಮ’.. ಇದು ತುಂಬಾ ನಂಬಿಕೆಯ ಸಿನಿಮಾ. ದೊಡ್ಡ ಖುಷಿ ಕೊಟ್ಟಿರುವ ಚಿತ್ರ. ಕಾರಣ, ರವಿಚಂದ್ರನ್ ಅವರ ಎರಡನೇ ಮಗನನ್ನು ಈ ಚಿತ್ರದ ಮೂಲಕ ವಿಭಿನ್ನವಾಗಿ ಪರಿಚಯಿಸುತ್ತಿರೋದು.
ಇನ್ನು, ದೊಡ್ಡ ಬಜೆಟ್ ಪ್ಲಾನ್‌ನಲ್ಲಿ ಚಿತ್ರ ನಿರ್ಮಾಣ ಮಾಡಿರೋದು.ಇವೆಲ್ಲದರ ಜೊತೆಯಲ್ಲಿ ಇದು ನನ್ನ ಮೂರನೇ ಸಿನಿಮಾ. ಸಹಜವಾಗಿಯೇ ನನಗಿದು ಚಾಲೆಂಜ್. ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ ಒಂದೊಳ್ಳೆಯ ಸಿನಿಮಾ ಕಟ್ಟಿಕೊಟ್ಟಿದ್ದೇನೆ. ಬೆಂಗಳೂರು, ಕೊಡಚಾದ್ರಿ, ಉಡುಪಿ, ರಾಜಸ್ಥಾನ್ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಹಾಡಿನ ಚಿತ್ರೀಕರಣಕ್ಕೆ ಆಸ್ಟ್ರೇಲಿಯಾ ಹೋಗಬೇಕಿತ್ತು.
ಆದರೆ, ಕೋವಿಡ್ 19 ಸಮಸ್ಯೆ ಎದುರಾಗಿ, ಇದೀಗ ಕಾಶ್ಮೀರದಲ್ಲಿ ಪ್ಲಾನ್ ಮಾಡಲಿದ್ದೇವೆ. ಇನ್ನು, ಲಡಾಕ್‌ನಲ್ಲೂ ಪ್ಲಾನ್ ಇತ್ತು. ಅಲ್ಲಿ ವಾರ್ ಸುದ್ದಿ ಇರುವುದರಿಂದ ಅಲ್ಲೂ ಕೈ ಬಿಟ್ಟಿದ್ದೇವೆ. ನಾವು ಬ್ಯಾಂಕಾಕ್‌ನಿಂದ ಬಂದ ಎರಡನೇ ದಿನಕ್ಕೆ ಎಂಟೈರ್ ಕೋವಿಡ್ 19 ಹರಡಿತು. ನಮ್ಮ ಅದೃಷ್ಟ ಅಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಬಂದೆವು. ಸುಮಾರು 30 ಜನರ ತಂಡ ಅಲ್ಲಿಗೆ ತೆರಳಿತ್ತು.ಅಲ್ಲಿ 10 ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು.
ಕೆಲವರು ಸಾಂಗ್‌ಗಾಗಿ ಮಾತ್ರ ಬ್ಯಾಂಕಾಕ್‌ಗೆ ಹೋಗುತ್ತಾರೆ. ನಾವು ಮಾತಿನ ಭಾಗವನ್ನೂ ಚಿತ್ರೀಕರಿಸಿಕೊಂಡು ಬಂದಿದ್ದೇವೆ. ಚಿತ್ರದಲ್ಲಿ ಹುಲಿಯ ಪಾತ್ರವೂ ಇದೆ. ಗ್ರಾಫಿಕ್ಸ್‌ನಲ್ಲಿ ಹುಲಿ ತೋರಿಸಲು ಇಷ್ಟ ಇರಲಿಲ್ಲ. ಎಷ್ಟೇ ಮಾಡಿದರೂ, ಅದು ಗ್ರಾಫಿಕ್ಸ್ ಆಗುತ್ತೆ. ಅದು ಬೇಡ ಎಂಬ ಕಾರಣಕ್ಕೆ ಎರಡು ದಿನಗಳ ಕಾಲ ಹುಲಿ ಭಾಗದ ಚಿತ್ರೀಕರಣ ಮಾಡಿದ್ದೇವೆ ಎಂಬುದು ಹೆಮ್ಮೆ ಎನ್ನುತ್ತಾರೆ ಸಹನಾಮೂರ್ತಿ.
ಹಾಡುಗಳ ಬಗ್ಗೆ ಮಾತನಾಡುವ ಸಹಾನ, ಚಿತ್ರದ ಮತ್ತೂಂದು ಹೆಲೈಟ್ ಅಂದರೆ ಅದು ಅರ್ಜುನ್ ಜನ್ಯಾ ಅವರ ಸಂಗೀತ. ಚಿತ್ರಕ್ಕೆ ಅವರು 6 ಹಾಡುಗಳನ್ನು ಕೊಟ್ಟಿದ್ದಾರೆ. ಆ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗುತ್ತವೆ ಎಂಬ ನಂಬಿಕೆ ನಮ್ಮದು. ಚಿತ್ರದಲ್ಲಿ ಮೂರು ಮೆಲೋಡಿ, ಡ್ಯಾನ್ಸ್ ನಂಬರ್, ಇಂಟ್ರಡಕ್ಷನ್ ಸಾಂಗ್ ಇದೆ. ಇಲ್ಲಿ ಇಂಟ್ರಡಕ್ಷನ್ ಸಾಂಗ್ ವಿಭಿನ್ನವಾಗಿದೆ. ತಾಯಿ ಮಗ ನಡುವೆ ನಡೆಯೋ ಜುಗಲ್‌ಬಂದಿ ರೀತಿಯಲ್ಲೆ ಹಾಡನ್ನು ಕಟ್ಟಿಕೊಡಲಾಗಿದೆ.
ಹೀರೋ ವಿಕ್ರಮ್ ಅವರ ತಾಯಿಯಾಗಿ ತುಳಸಿ ಅವರು ನಟಿಸಿದ್ದಾರೆ. ಅವರಿಲ್ಲಿ ಮಧ್ಯಮ ಕುಟುಂಬದವರಾಗಿ ನಟಿಸಿದ್ದು, ಸದಾ ಆಚಾರ, ವಿಚಾರ, ಸಂಪ್ರದಾಯ ಎಂಬಂತಹ ತಾಯಿ. ಮಗನಿಗೆ ಅರೇಂಜ್ ಮ್ಯಾರೇಜ್ ಮಾಡಬೇಕೆಂಬ ಆಸೆ ಅವರದಾದರೆ, ಮಗನಿಗೆ ತಾನು ಪ್ರೀತಿಸಿ ಮದುವೆ ಆಗಬೇಕು ಎಂಬ ಉದ್ದೇಶ. ಈಗಿನ ಜನರೇಷನ್ ಹುಡುಗನೊಂದಿಗೆ ಬೆರೆತು ಹಾಡುವ ಹಾಡು ಇಲ್ಲಿ ಹೈಲೈಟ್ ಎನ್ನುವುದು ಸಹನಾ ಮಾತು. ಗೌರಿ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ಸೋಮಣ್ಣ (ರಾಮ್ಕೋ) ಚಿತ್ರವನ್ನು ನಿರ್ಮಿಸಿದ್ದಾರೆ.