Advertisement

ಪರೀಕ್ಷೆಗೆ ಬಾಕಿಯಿದೆ 500ಕ್ಕೂ ಹೆಚ್ಚು ಗಂಟಲ ದ್ರವ ಮಾದರಿ

08:33 AM Apr 28, 2020 | Sriram |

ಮಂಗಳೂರು: ಪಡೀಲಿನಲ್ಲಿರುವ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿನ ಕೋವಿಡ್ 19 ಸೋಂಕು ಪ್ರಕರಣವು ಜಿಲ್ಲಾಡಳಿತಕ್ಕೂ ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದರಿಂದಾಗಿ ಸೋಂಕು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವ ವೆನ್ಲಾಕ್ ನ ಪ್ರಯೋಗಾಲಯದಲ್ಲಿರುವ ವೈದ್ಯರ ಕೆಲಸದ ಒತ್ತಡವೂ ಜಾಸ್ತಿಯಾಗಿದ್ದು, ಶಂಕಿತರ ಗಂಟಲು ಮಾದರಿಗಳನ್ನು ಮತ್ತೆ ಬೆಂಗಳೂರಿಗೆ ಕಳುಹಿಸಿ ಕೊಡಬೇಕಾದ ಅನಿವಾರ್ಯತೆಯೂ ಎದುರಾಗಿದೆ.

Advertisement

ದಕ್ಷಿಣ ಕನ್ನಡದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಅವರೊಂದಿಗಿನ ಪ್ರಥಮ-ದ್ವಿತೀಯ ಹಂತದ ಸಂಪರ್ಕದ ವ್ಯಕ್ತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿರುವುದರಿಂದ ದಿನೇ ದಿನೇ ವೆನ್ಲಾಕ್ ‌ನ ಪ್ರಯೋಗಾಲಯಕ್ಕೆ ತಪಾಸಣೆಗೆ ಬರುತ್ತಿರುವ ಗಂಟಲು ದ್ರವ ಮಾದರಿಗಳ ಸಂಖ್ಯೆಯೂ ಏರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಫಸ್ಟ್‌ ನ್ಯೂರೋ ಆಸ್ಪತ್ರೆ ಪ್ರಕರಣದಿಂದಾಗಿ ಒಂದೆಡೆಯಿಂದಲೇ ಏಕಾಏಕಿ 300ಕ್ಕೂ ಹೆಚ್ಚು ಸ್ಯಾಂಪಲ್‌ಗ‌ಳು ಬಂದಿರುವುದರಿಂದ ವೈದ್ಯರು, ಸಿಬಂದಿ ಹಗಲಿರುಳು ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇನ್ನೊಂದೆಡೆ ಉಡುಪಿ, ಕಾರವಾರ, ದ.ಕ. ಜಿಲ್ಲೆಯ ಇತರೆಡೆಗಳಿಂದ ಬಂದು ವೆನ್ಲಾಕ್ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾದ ಕೊರೊನಾ ಶಂಕಿತ ರೋಗಿಗಳ ಗಂಟಲ ದ್ರವ ಮಾದರಿ ಸಹಿತ ಒಟ್ಟು 500ಕ್ಕೂ ಹೆಚ್ಚು ಜನರ ಮಾದರಿಗಳು ಇನ್ನೂ ಪರೀಕ್ಷೆಗೆ ಬಾಕಿ ಇವೆ. ಇವೆಲ್ಲದರ ಪರೀಕ್ಷೆಗೆ ಹೆಚ್ಚಿನ ಕಾಲಾವಕಾಶವೂ ಅನಿವಾರ್ಯ.

ವರದಿ ತಡವಾದರೂ ಅಪಾಯ
ವೆನ್ಲಾಕ್ ‌ನಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿರುವ 50ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಸ್ಯಾಂಪಲ್‌ಗ‌ಳ ಪರೀಕ್ಷೆಗೆ ಬಾಕಿ ಇರುವುದರಿಂದ ಅವರಿಗೆ ಕೋವಿಡ್ 19 ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲಾಗುವುದಿಲ್ಲ. ಅತೀ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವವರು ಅಥವಾ ದೀರ್ಘ‌ಕಾಲಿಕ ಸಮಸ್ಯೆಗಳಿಂದ ಬಳಲುತ್ತಿರುವ ಯಾರಾದರೂ ಈ 500 ಮಂದಿಯಲ್ಲಿ
ಇದ್ದರೆ, ಅವರ ವರದಿ ತಡವಾದರೆ ಅಪಾಯ ವಾಗುತ್ತದೆ. ಆದರೆ ಒಬ್ಬರ ವರದಿ ಬರಲು ಕನಿಷ್ಠ ಒಂದು ಗಂಟೆ ಸಮಯ ಅಗತ್ಯವಿರುವುದರಿಂದ ಈ ಎಲ್ಲರ ವರದಿಯನ್ನು ವೈದ್ಯರಿಗೆ ತತ್‌ಕ್ಷಣಕ್ಕೇ ನೀಡುವುದೂ ಸಾಧ್ಯವಾಗುವುದಿಲ್ಲ. ಒಟ್ಟು ಪ್ರಕರಣಗಳ ಸಂಖ್ಯೆ ದಿನೇದಿನೆ ಏರುತ್ತಿರುವುದರಿಂದ ಜಿಲ್ಲಾಡಳಿತಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.

ಕೋವಿಡ್ 19 ಸೋಂಕಿನ ಸರಣಿ
ಗುರುವಾರ ಮೃತಪಟ್ಟ 75 ವರ್ಷದ ವೃದ್ಧೆ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಎ. 19ರಂದು ಮೃತಪಟ್ಟ ಆಕೆಯ ಸೊಸೆಯೂ ಅದೇ ಆಸ್ಪತ್ರೆಗೆ ಬಂದು ಹೋಗಿದ್ದವರು. ಕೋವಿಡ್ 19 ದೃಢಪಟ್ಟು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 67 ವರ್ಷದ ವೃದ್ಧೆ ಈ ಇಬ್ಬರು ಮೃತರ ನೆರೆ ಮನೆಯವರು. 67 ವರ್ಷದ ವೃದ್ಧೆಯ ಪುತ್ರಿಗೆ ತಾಯಿಯಿಂದಲೇ ಸೋಂಕು ತಗಲಿದೆ. ಸೋಮವಾರ ಪತ್ತೆಯಾದ ಪ್ರಕರಣದಲ್ಲಿ 80 ವರ್ಷದ ವೃದ್ಧೆಯೂ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಕೋವಿಡ್ 19 ದೃಢಪಟ್ಟ ಆಕೆಯ ಪುತ್ರ ತಾಯಿಯನ್ನು ನೋಡಿಕೊಳ್ಳಲೆಂದು ಅದೇ ಆಸ್ಪತ್ರೆಯಲ್ಲಿದ್ದವರು. ಆ ಮೂಲಕ ಒಂದೇ ಆಸ್ಪತ್ರೆಯ ಮುಖಾಂತರ ಮೂರು ಕುಟುಂಬಗಳ ತಲಾ ಇಬ್ಬರಿಗೆ ಸೋಂಕು ತಗಲಿದಂತಾಗಿದೆ.

Advertisement

ಬೆಂಗಳೂರಿಗೆ ಕಳುಹಿಸಲು ಚಿಂತನೆ
ಕೋವಿಡ್ 19 ಪರೀಕ್ಷೆ ಪ್ರಯೋಗಾಲಯದಲ್ಲಿ ಒತ್ತಡ ತೀರಾ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಪರೀಕ್ಷೆಗೆ ಬರುವ ಗಂಟಲ ದ್ರವ ಮಾದರಿಯ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಗೂ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲು ಚಿಂತಿಸಲಾಗುತ್ತಿದೆ.
– ಡಾ| ರಾಮಚಂದ್ರ ಬಾಯರಿ,
ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next