ಬೆಂಗಳೂರು: ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಆಹಾರವನ್ನು ನಿಗದಿತ ಸಮಯದ ಮಿತಿಯೊಳಗೆ ರದ್ದು ಮಾಡಿದರೂ, ಬಿಲ್ ಮೊತ್ತವನ್ನು ಮರುಪಾವತಿಸಲು ಹಿಂದೇಟು ಹಾಕಿದ ಸ್ವಿಗ್ಗಿ ಸಂಸ್ಥೆಗೆ ಬೆಂಗಳೂರು 4ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ 4768 ರೂ. ದಂಡ ವಿಧಿಸಿದೆ.
ಬೆಂಗಳೂರಿನ ಚೇತನ್ ಎಂ. ಎಂಬುವರು 2023ರ ಅಕ್ಟೋಬರ್ 11ರಂದು ಸ್ವಿಗ್ಗಿಯಲ್ಲಿ 768 ರೂ. ಮೊತ್ತ ಆಹಾರವನ್ನು ಬುಕ್ ಮಾಡಿ, ಆನ್‌ಲೈನ್ ಬಿಲ್ ಪಾವತಿಸಿದ್ದರು. ಈ ವೇಳೆ ಆಹಾರ ನಿಗದಿತ ವಿಳಾಸ ತಲುಪಲು 2 ಗಂಟೆ ಬೇಕಾಗುತ್ತದೆ ಎನ್ನುವ ಸಂದೇಶ ತೋರಿಸಿದೆ.
ಈ ಹಿನ್ನೆಲೆಯಲ್ಲಿ 3 ನಿಮಿಷದೊಳಗೆ ಬುಕಿಂಗ್ ರದ್ದುಗೊಳಿಸಿ, ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಸಿಬ್ಬಂದಿ ಹಣ ಮರುಪಾವತಿ ಮಾಡಲು ಸಾಧ್ಯವಿಲ್ಲ ಹಾಗೂ ಆಹಾರವನ್ನು ಡೆಲಿವರಿ ಮಾಡಲು ಸಾಧ್ಯವಿಲ್ಲ ಎನ್ನುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೂರುದಾರರು 2023ರ ಅ. 18ರಂದು ಆಹಾರವನ್ನು ಆನ್‌ಲೈನ್ ಮೂಲಕ ಬುಕ್ ಮಾಡುವ ಸಂದರ್ಭದಲ್ಲಿ ಪಾವತಿಸಿದ ಹಣ ಮರುಪಾವತಿ ಮಾಡುವಂತೆ ಸ್ವಿಗ್ಗಿಗೆ ಲೀಗಲ್ ನೋಟಿಸ್ ನೀಡಿದ್ದು, ಇದಕ್ಕೆ ಅವರಿಂದ ಪ್ರತಿಕ್ರಿಯೆ ಸಿಗದ ಕಾರಣ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ದೂರುದಾರರು ಅಂದು ನಾನು ತುಂಬಾ ಹಸಿವಿನಿಂದ ಬಳಲುತ್ತಿದ್ದೆ. ಆಹಾರ ನಿಗದಿತ ವಿಳಾಸ ತಲುಪುವುದಕ್ಕೆ 2 ಗಂಟೆ ಹಿಡಿಯಲಿದೆ ಎನ್ನುವ ಕಾರಣಕ್ಕೆ ಬುಕ್ಕಿಂಗ್ ಅನ್ನು ನಿಗದಿತ ಸಮಯದ ಮಿತಿಯೊಳಗೆ ರದ್ದು ಮಾಡಿದ್ದೇನೆ. ಆದರೂ ಸ್ವಿಗ್ಗಿ ಆಹಾರದ ಮೊತ್ತ ಮರುಪಾವತಿಸಲು ಹಿಂದೇಟು ಹಾಕಿದ್ದಾರೆಂದು ಉಲ್ಲೇಖೀಸಿದ್ದಾರೆ. ವಾದವನ್ನು ಆಲಿಸಿದ ನ್ಯಾಯಾಲಯದ ಸ್ವಿಗ್ಗಿಯ ಗ್ರಾಹಕ ಸೇವೆಯಲ್ಲಿ ವ್ಯತ್ಯಯವಾಗಿದೆ.
ಈ ಹಿನ್ನೆಲೆಯಲ್ಲಿ ದೂರುದಾರರು ಪಾವತಿ ಮಾಡಿದ 768 ರೂ., 2 ಸಾವಿರ ಪರಿಹಾರ, 2 ಸಾವಿರ ಕೋರ್ಟ್ ವ್ಯಾಜ್ಯ ಬಾಬ್ತು ಸೇರಿ ಟ್ಟು 4,768 ರೂ.ವನ್ನು ಆ.30ರೊಳಗೆ ಪಾವತಿ ಮಾಡುವಂತೆ ತೀರ್ಪು ನೀಡಿದೆ.