Advertisement
ಮೈಸೂರು ಮೂಲದ ಕುಮಾರ್ (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ದೂರು ಮಾನ್ಯ ಮಾಡಿರುವ ನಗರದ ಗ್ರಾಹಕ ವೇದಿಕೆ, ಕೊಟ್ಟ ಭರವಸೆ ತಪ್ಪಿದ್ದಕ್ಕೆ ಕುಮಾರ್ ನೀಡಿದ್ದ 4.75 ಲಕ್ಷ ರೂ.ಗಳಿಗೆ ಆತ ಪಾವತಿಸಿದ್ದ ದಿನದಿಂದ ಶೇ. 10 ರಷ್ಟು ಬಡ್ಡಿ ಸಮೇತ ಹಿಂದಿರುಗಿಸಬೇಕು. ಜತೆಗೆ, ಮೂರು ಲಕ್ಷ ರೂ. ಪರಿಹಾರ, 5 ಸಾವಿರ ರೂ. ದಂಡದ ಮೊತ್ತವನ್ನು ಪಾವತಿಸುವಂತೆ ಡಾ.ರಾಮ್ಸ್ ಫರ್ಟಿಲಿಟಿ ಅಂಡ್ ಐವಿಎಫ್ ಸಂಸ್ಥೆಯ ಸಿಇಓ, ವೈದ್ಯೆ, ಆಪ್ತ ಸಮಾಲೋಚಕಿಗೆ ಆದೇಶಿಸಿದೆ.ಈ ಕುರಿತು ಅಕೊºàಬರ್ 30ರಂದು ಗ್ರಾಹಕ ವೇದಿಕೆ ಆದೇಶ ಹೊರಡಿಸಿದೆ. ಮುಂದಿನ ಆರು ವಾರಗಳಲ್ಲಿ ಆದೇಶ ಪಾಲಿಸಬೇಕು ಎಂದೂ ಸೂಚಿಸಿದೆ. ವಿಶೇಷವೆಂದರೆ, ಒಂದೂವರೆ ವರ್ಷದ ವರೆಗೆ ಸತಾಯಿಸುತ್ತಿದ್ದ ಸಂಸ್ಥೆ ವಿರುದ್ಧ ಸ್ವತಃ ವಾದಿಸಿ, ತಾವು ಕಟ್ಟಿದ್ದ ಹಣದ ಜತೆಗೆ ಪರಿಹಾರ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಮೈಸೂರು ಮೂಲದ ಖಾಸಗಿ ಕಂಪೆನಿ ಉದ್ಯೋಗಿ ಕುಮಾರ್ (41),ಆತನಿಗೆ ಬಾಡಿಗೆ ತಾಯ್ತನದಲ್ಲಿ ಮಗು ಪಡೆಯುವ ಹಂಬಲವಾಗಿತ್ತು. ಹೀಗಾಗಿ ಜಾಹೀರಾತುಗಳನ್ನು ನೋಡಿ ಇಂದಿರಾನಗರದಲ್ಲಿರುವ ಡಾ. ರಾಮ್ಸ್ ಫರ್ಟಿಲಿಟಿ ಸೆಂಟರ್‌ನ್ನು 2016ರ ಆಗಸ್ಟ್ ತಿಂಗಳಿನಲ್ಲಿ ಸಂಪರ್ಕಿಸಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು 7 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿದ್ದರು. ಒಂದು ವೇಳೆ ಅವಳಿ- ಜವಳಿ ಮಕ್ಕಳು ಜನಿಸಿದರೆ ಹೆಚ್ಚುವರಿಯಾಗಿ 1.5 ಲಕ್ಷ ರೂ. ನೀಡಬೇಕು ಎಂದು ಸೂಚಿಸಿದ್ದರು. ಈ ಷರತ್ತನ್ನು ಕೂಡ ಕುಮಾರ್ ಒಪ್ಪಿಕೊಂಡಿದ್ದರು. ತನ್ನ ಇಳಿವಯಸ್ಸಿನ ತಾಯಿ ಜತೆ ವಾಸಿಸುತ್ತಿರುವ ಕುಮಾರ್, ಗಂಡು ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆಯ ಬೇಕು, ವಂಶೋದ್ಧಾರಕ ಆಗಬೇಕು ಎಂದು ಅಭಿಪ್ರಾಯ ನೀಡಿದ್ದರು. ಆದರೆ, ಸಿಬ್ಬಂದಿ ಗಂಡು ಮಗು ಎಂದೇ ಹೇಳಲು ಆಗುವುದಿಲ್ಲ. ಹೆಣ್ಣಾಗಲಿ-ಗಂಡಾಗಲಿ ಆರೋಗ್ಯವಂತ ಮಗು ನೀಡುವುದಾಗಿ ತಿಳಿಸಿದ್ದರು.
Related Articles
ಒಪ್ಪಂದದ ಮೇರೆಗೆ ಕುಮಾರ್ ಅವರು 2.25 ಲಕ್ಷ ರೂ.ಗಳನ್ನು ಅಡ್ವಾನ್ಸ್ ರೂಪದಲ್ಲಿ ಪಾವತಿಸಿದ್ದರು, ಅದೇ ದಿನ ಆತ ತನ್ನ ಬಾಡಿಗೆ ತಾಯ್ತನಕ್ಕೆ ಅಗತ್ಯವಾದ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿ, ವೀರ್ಯ ಕೂಡ ನೀಡಿ ಬಂದಿದ್ದರು. ಇದಾದ ಬಳಿಕ 2017ರ ಏಪ್ರಿಲ್ 25ರಂದು 2.50 ಲಕ್ಷ ರೂ ಪಾವತಿಸಿದ್ದರು.ಇಷ್ಟಾದರೂ, ಆಸ್ಪತ್ರೆ ಸಿಬ್ಬಂದಿ ಮಾತ್ರ ಬಾಡಿಗೆ ತಾಯ್ತನದ ಮೂಲಕ ಮಗು ನೀಡುವ ಪ್ರಕ್ರಿಯೆಗಳನ್ನು ಪಾಲಿಸಿರಲಿಲ್ಲ. ದಿನಗಳು ಕಳೆದಂತೆ ಚಿಂತೆಗೀಡಾದ ಕುಮಾರ್, ಆಸ್ಪತ್ರೆಯವರನ್ನು ಈ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಅಲ್ಲಿನವರು, ನಿಮಗೆ ಮಗು ಹೆತ್ತುಕೊಡಬೇಕಾದ ಮಹಿಳೆ ಅಪಘಾತಕ್ಕೊಳಗಾಗಿದ್ದಾರೆ.
Advertisement
ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಆಕೆ ಓಡಿಹೋಗಿರಬಹುದು ಎಂಬ ಸಬೂಬು ಹೇಳಿದ್ದಾರೆ. ಇದರಿಂದ ಅಘಾತಗೊಂಡ ಕುಮಾರ್, ಹಣ ವಾಪಸ್ ನೀಡುವಂತೆ ಕೋರಿದ್ದಾರೆ. ಆದರೆ, ಸಂಸ್ಥೆಯವರು ಈಗಾಗಲೇ ಬಾಡಿಗೆ ತಾಯ್ತನದಲ್ಲಿ ಮಗು ನೀಡುವ ಕೆಲವೊಂದು ಪ್ರಯೋಗಗಳನ್ನು ಮಾಡಲಾಗಿದೆ ಹೀಗಾಗಿ ಪೂರ್ತಿ ಹಣ ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಆದರೆ ಪಟ್ಟು ಬಿಡದೇ ಕುಮಾರ್ ಸಂಸ್ಥೆಯವರನ್ನು ಒತ್ತಾಯಿಸಿದಾಗ, ಅವರು ಒಂದು ತಿಂಗಳ ಕಾಲ ಔಷಧಿಗಳನ್ನು ತೆಗೆದುಕೊಳ್ಳಿ ಎಂದು ಕೆಲವು ಔಷಧಿಗಳನ್ನು ಸಲಹೆ ನೀಡಿದ್ದರು. ಅದನ್ನೂ ಪಾಲಿಸಿ ಮತ್ತೂಮ್ಮೆ ವೀರ್ಯ ನೀಡಿ ಬಂದಿದ್ದ ಕುಮಾರ್‌ಗೆ ಹಲವು ತಿಂಗಳು ಕಳೆದರೂ ಸಂಸ್ಥೆ ವತಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ, ಹಣ ವಾಪಸ್ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಒಪ್ಪಿರಲಿಲ್ಲ. ಹೀಗಾಗಿ ನ್ಯಾಯ ದೊರಕಿಸಿಕೊಡುವಂತೆ ಕೋರಿ ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದರು.
– ಮಂಜುನಾಥ್ ಲಘುಮೇನಹಳ್ಳಿ