ಬೆಂಗಳೂರು: ಗ್ರಾಹಕರೊಬ್ಬರ ಮ್ಯೂಚುವಲ್ ಫಂಡ್ ಖಾತೆಯ ಬ್ಯಾಲೆನ್ಸ್ ತೋರಿಸುವಲ್ಲಿ ನಿರ್ಲಕ್ಷ ವಹಿಸಿ, ಸೇವಾ ನ್ಯೂನತೆ ಎಸಗಿದ ಮ್ಯೂಚುವಲ್ ಫಂಡ್ ಸಂಸ್ಥೆಗೆ 20 ಸಾವಿರ ರೂ. ದಂಡ ವಿಧಿಸಿ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರಿನ ನಿವಾಸಿಯೊಬ್ಬರು ಪ್ರಸಿದ್ಧ ಮ್ಯೂಚುವಲ್ ಫಂಡ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ, ಗೆಲುವು ಸಾಧಿಸಿದ್ದಾರೆ.
ದೂರುದಾರರು: ಬೆಂಗಳೂರಿನ ನಿವಾಸಿಯೊಬ್ಬರು ಪ್ರಸಿದ್ಧ ಮ್ಯೂಚುವಲ್ ಫಂಡ್ ಕಂಪನಿಯಲ್ಲಿ 2012ರಿಂದ ಹೂಡಿಕೆಯನ್ನು ಮಾಡಿದ್ದು, ಯಾವುದೇ ಯೂನಿಟ್ ರಿಡೀಮ್ ಮಾಡಿರಲಿಲ್ಲ. 2013ರ ಫೆಬ್ರವರಿಯಲ್ಲಿ ಗ್ರಾಹಕರ ಖಾತೆಯು 18.75 ಲಕ್ಷ ಮೌಲ್ಯದ 56,454 ಯೂನಿಟ್ ಹೊಂದಿತ್ತು. ಈ ನಡುವೆ ಗ್ರಾಹಕರು ಮ್ಯೂಚುವಲ್ ಫಂಡ್ ಖಾತೆಯ ಬ್ಯಾಲೆನ್ಸ್ ವಿವರ ನೀಡುವಂತೆ ಸಂಸ್ಥೆಗೆ ಇ ಮೇಲ್ ಕಳುಹಿಸಿದ್ದರು. ಈ ವೇಳೆ ಸಂಸ್ಥೆಯು ಖಾತೆಯು ಶೂನ್ಯ ಮೌಲ್ಯವನ್ನು ಹೊಂದಿದ್ದಾರೆ ಎನ್ನುವುದಾಗಿ ಕಂಪನಿಯು ಒಂದು ದಿನದ ನಂತರ ಉತ್ತರಿಸಿದೆ.
ಮ್ಯೂಚುವಲ್ ಫಂಡ್ ಖಾತೆಯ ಮೊತ್ತ ಶೂನ್ಯ ಎನ್ನುವುದಾಗಿ ಕಳುಹಿಸಿರುವ ಮೇಲ್‌ಗೆ ಸ್ಪಷ್ಟನೆಯನ್ನು ಕೋರಿ ಸಂಸ್ಥೆಗೆ ಮತ್ತೆ ಮೇಲ್ ಕಳುಹಿಸಿದ್ದಾರೆ. ತಕ್ಷಣ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಂಪನಿಯ ಅಧ್ಯಕ್ಷ ಮತ್ತು ಸಿಇಒಗೆ ದೂರು ಸಲ್ಲಿಸಿದ್ದರು. ಇದಾಗಿ ಸುಮಾರು 45 ದಿನಗಳ ಬಳಿಕ ಗ್ರಾಹಕರ ಖಾತೆಯ ಸಂಪೂರ್ಣ ವಿವರ ಹಾಗೂ ಮೊತ್ತದ ವಿವರ ಇ-ಮೇಲ್ ಮೂಲಕ ಕಳುಹಿಸಿದ್ದಾರೆ. ಸೇವೆಯ ವಿಳಂಬ ನೀತಿ ವಿರುದ್ಧ ಬೇಸತ್ತು, ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಎರಡು ಕಡೆಯ ವಾದವನ್ನು ಪರಿಶೀಲನೆ ನಡೆಸಿದ ನ್ಯಾಯಾಲಯವು ಸರಿಯಾದ ಖಾತೆ ವಿವರ ತೋರಿಸದೆ ಗ್ರಾಹಕ ಸೇವೆಯಲ್ಲಿ ವ್ಯತ್ಯಯ ಮಾಡಿರುವ ಹಿನ್ನೆಲೆಯಲ್ಲಿ 15 ಸಾವಿರ ರೂ. ಪರಿಹಾರ ಹಾಗೂ ಕೋರ್ಟ್ ವ್ಯಾಜ್ಯದ ವೆಚ್ಚ 5 ಸಾವಿರ ರೂ. ಸೇರಿದಂತೆ ಒಟ್ಟು 20 ಸಾವಿರ ರೂ. ದಂಡ ವಿಧಿಸಿ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.