Advertisement

ಬೀದಿದೀಪ ಆರಿಸದ ಗುತ್ತಿಗೆದಾರರಿಗೆ ದಂಡ ಹಾಕುವ ಶಾಕ್‌!

05:39 PM Jun 03, 2018 | Team Udayavani |

ಕಾರವಾರ: ನಗರದ ಒಳಚರಂಡಿ ದುರಸ್ತಿ ಕುರಿತಂತೆ ನಗರಸಭೆಯಲ್ಲಿ 2 ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಯಿತು. ಅದರ ದುರಸ್ತಿಗೆ 4 ಕೋಟಿ ರೂ. ಬೇಕಾಗಿದ್ದು, ಸರ್ಕಾರ ಅನುದಾನ ಕೊಟ್ಟರೆ ಮಾಡಿಸಿ. ಮೊದಲು ಒಳ ಚರಂಡಿ ವ್ಯವಸ್ಥೆ ಸರಿಯಿಲ್ಲ ಎಂಬ ಬಗ್ಗೆ ಸಂಬಂಧಿತರಿಂದ ಲಿಖೀತ ಹೇಳಿಕೆ ಪಡೆಯಿರಿ ಎಂಬ ನಿರ್ಣಯವನ್ನು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾಡಲಾಯಿತು.

Advertisement

ನಗರದ ಮುಖ್ಯ ರಸ್ತೆಗಳು ಸೇರಿದಂತೆ 7 ವಾರ್ಡ್ಗೆ ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಯುಜಿಡಿ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಹೀಗಾಗಿ ಅದನ್ನು ಸರಿಪಡಿಸುವ ತನಕ ಯುಜಿಡಿಗೆ ವಿವಿಧ ಅಪಾರ್ಟಮೆಂಟ್‌, ಹೊಟೆಲ್‌ ಗಳಿಗೆ ನೀಡಲಾಗಿರುವ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಬಾರದು ಎಂದು ಅಧ್ಯಕ್ಷ ಗಣಪತಿ ವಿ.ನಾಯ್ಕ ಅಧಿ ಕಾರಿಗಳಿಗೆ ಸೂಚಿಸಿದರು.

ಯುಜಿಡಿ ಬಗ್ಗೆ ನಗರಸಭೆ ಸದಸ್ಯ ಸಂದೀಪ್‌ ತಳೇಕರ, ದೇವಿದಾಸ್‌ ನಾಯ್ಕ, ಮಹೇಶ ಥಾಮ್ಸೆ ಪ್ರಸ್ತಾಪಿಸಿದರು. ಕಳೆದ 6 ವರ್ಷಗಳಿಂದ ಯುಜಿಡಿ ವಿಫಲತೆ ಬಗ್ಗೆ ವಿರೋಧ ವ್ಯಕ್ತಮಾಡುತ್ತಿದ್ದೇನೆ. ಯುಜಿಡಿ ಮೂಲಕ ಮಲೀನ ನೀರು ಸರಿಯಾಗಿ ಹರಿಯುತ್ತಿಲ್ಲ. ಕೊಳಚೆ ಸಂಗ್ರಹ ಮ್ಯಾನ್‌ ಹೋಲ್‌ ಮತ್ತು ಕೊಳಚೆ ಸಾಗುವ ಪೈಪ್‌ಲೈನ್‌ ಸಂಪರ್ಕದಲ್ಲಿ ವ್ಯತ್ಯಾಸವಿದೆ. ಮಾರುತಿಗಲ್ಲಿ ಮ್ಯಾನ್‌ಹೋಲ್‌ ಹಲವು ಅಡಿ ಕೆಳಗೆ ಇಳಿದಿದೆ ಎಂದು ಸದಸ್ಯರು ಆಪಾದಿಸಿದರು. ಓವರ್‌ ಫ್ಲೋ ಆಗುವಲ್ಲಿ ನಗರಸಭೆ ಶೌಚಾಲಯದ ಟ್ಯಾಂಕ್‌ ಕೊಳಚೆ ಖಾಲಿ ಮಾಡುವ ವಾಹನದಿಂದ ಮಲೀನ ನೀರು ಹೀರಿಕೊಂಡು ಶುದ್ಧೀಕರಣ ಘಟಕಕ್ಕೆ ಸಾಗಿಸಲಾಗುತ್ತದೆ. ಇದಲ್ಲದೇ ಒಳಚರಂಡಿ ಬ್ಲಾಕೇಜ್‌ ಸರಿಪಡಿಸಲು ಹೋದ ಇಬ್ಬರು ಪೌರ ಕಾರ್ಮಿಕರು ಐದು ವರ್ಷದ ಹಿಂದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಸದಸ್ಯ ದೇವಿದಾಸ ಪೌರಾಯುಕ್ತ ಅಭಿಜಿನ್‌ ಅವರ ಗಮನಸೆಳೆದರು. ಯೋಜನೆ ನಿರ್ವಹಣೆ ಮಾಡದ ಕಾರಣ ಸಂಬಂಧ ಕೆಯುಐಡಿಎಫ್‌ಸಿಯಿಂದ 75 ಲಕ್ಷ ರೂ.ವನ್ನು ನಗರಸಭೆ ಮುಟ್ಟುಗೋಲು ಹಾಕಿಕೊಂಡಿದೆ. ಹೀಗಿರುವಾಗ ಯುಜಿಡಿಗೆ ಅಕ್ರಮ ಸಂಪರ್ಕ ನೀಡಿರುವ 11 ಬಹುಮಹಡಿ ಕಟ್ಟಡಗಳ ಸಂಪರ್ಕ ಸಕ್ರಮಗೊಳಿಸಬಾರದು ಎಂದು ಒತ್ತಾಯಿಸಿದರು.

ಪ್ರಭಾರ ಪೌರಾಯುಕ್ತ ಅಭಿಜಿನ್‌ ಮಾತನಾಡಿ, ಯುಜಿಡಿಗೆ ಅಕ್ರಮವಾಗಿ ಸಂಪರ್ಕ ಪಡೆದ ಬಹುಮಹಡಿ ಕಟ್ಟಡಗಳ ಮಾಲೀಕರಿಗೆ 15000 ರೂ.ದಂಡ ವಿಧಿಸಿ ಸಕ್ರಮ ಮಾಡಲು ಅವಕಾಶವಿದೆ. ಇದರಿಂದ ನಗರಸಭೆಗೆ ಆದಾಯವೂ ಹರಿದು ಬರುತ್ತದೆ. ಎಲ್ಲ ನಾಗರಿಕರಿಗೂ ಸಮಾನ ಮೂಲಭೂತ ಸೇವೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಒಂದು ವೇಳೆ ನಾವು ಸಕ್ರಮ ಮಾಡಿಕೊಡದಿದ್ದರೆ, ಕಟ್ಟಡ ಮಾಲೀಕರು ಕೋರ್ಟ್‌ ಮೊರೆ ಹೋಗಬಹುದು. ಆದರೂ ನಾಲ್ವರು ಸದಸ್ಯರು ಯುಜಿಡಿ ಸಂಪರ್ಕ ಸಕ್ರಮಗೊಳಿಸುವುದು ಬೇಡ ಎಂದಾಗ ಅವರ ಅಭಿಪ್ರಾಯಗಳನ್ನು ಬರೆದುಕೊಳ್ಳುವಂತೆ ಪೌರಾಯುಕ್ತರು ಸೂಚಿಸಿದರು.

ವಸತಿ ಯೋಜನೆ: ಸಭೆಯ ಆರಂಭದಲ್ಲಿಯೇ ವಾಜಪೇಯಿ ವಸತಿ ಯೋಜನೆಯಡಿ ಮನೆ ಮಂಜೂರಾದ 152 ಫಲಾನುಭವಿಗಳಿಗೆ ಇನ್ನೂತನಕ ಹಣ ಬಿಡುಗಡೆ ಮಾಡಿಲ್ಲ ಯಾಕೆ? ಎಂದು ಸದಸ್ಯ ದೇವಿದಾಸ್‌ ನಾಯ್ಕ ಪ್ರಶ್ನಿಸಿದರು. ಫಲಾನುಭವಿಗಳಿಗೆ ಹಣದ ಕಂತು ತಡೆಹಿಡಿಯಲು ಕಾರಣ ಏನೆಂಬುದನ್ನು ಪರಿಶೀಲಿಸಿ ಎರಡು ದಿನದೊಳಗೆ ಉತ್ತರ ನೀಡುತ್ತೇನೆ ಎಂದು ಪ್ರಭಾರ ಆಯುಕ್ತರು ತಿಳಿಸಿದರು.

Advertisement

ಬಳಿಕ ನಗರೋತ್ಥಾನ ಯೋಜನೆಯಡಿ 31 ವಾರ್ಡ್‌ಗಳಲ್ಲಿ ಯಾವ್ಯಾವ ರಸ್ತೆಗಳ ಕಾಮಗಾರಿ ನಡೆಸಲಾಗುತ್ತದೆ ಎಂದು ಬಹುತೇಕ ಸದಸ್ಯರು ಕೇಳಿದ ಪ್ರಶ್ನೆಗೆ ಸಹಾಯಕ ಎಂಜಿನೀಯರ್‌ ಮೋಹನ್‌ರಾಜ್‌ ಮಾತನಾಡಿ,33 ರಸ್ತೆಗಳಿಗೆ ಡಾಂಬರೀಕರಣಗೊಳಿಸಲು 29.39 ಕೋಟಿ ರೂ.ವೆಚ್ಚದ ಯೋಜನೆಗಳು ಪ್ರಗತಿಯಲ್ಲಿವೆ. ಅದರಲ್ಲಿ 7 ಕಾಮಗಾರಿಗಳು ಮುಗಿದಿವೆ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಹುತೇಕ ಸದಸ್ಯರು ನಮ್ಮ ವಾರ್ಡಿನಲ್ಲಿ ರಸ್ತೆಗಳಿಗೆ ಡಾಂಬರೀಕರಣ ಯಾಕೆ ಮಾಡಿಲ್ಲ ಎಂದು ಕೂಗಿ ಮೇಜು ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪೌರಾಯುಕ್ತ ಅಭಿಜಿನ್‌ ಉತ್ತರಿಸಿ, ಮಳೆಗಾಲದಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ,ಕಳಪೆ ಕಾಮಗಾರಿಗೆ ಅವಕಾಶ ನೀಡಿದಂತಾಗುತ್ತದೆ. ಕೆಲವು ಕಡೆ ತಾನು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ರಸ್ತೆಯ ಅಗಲ ಕಡಿಮೆಗೊಳಿಸಿ ಡಾಂಬರೀಕರಣ ಮಾಡಲಾಗಿದೆ. ಈ ಬಗ್ಗೆ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಸದ್ಯ ಮಳೆಗಾಲ ಮುಗಿಯುವವರೆಗೂ ಡಾಂಬರೀಕರಣ ಬೇಡ. ಅವಶ್ಯಕತೆ ಇದ್ದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಆದ್ಯತೆ ನೀಡೋಣ. ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರನಿಗೆ ಹಣ ಪಾವತಿ ಮಾಡುವುದಿಲ್ಲ ಎಂದರು. ಬೀದಿ ದೀಪವನ್ನು ಸಮಯಕ್ಕೆ ಸರಿಯಾಗಿ ಆರಿಸದ ಕಾರಣ ವಿದ್ಯುತ್‌ ಬಿಲ್‌ ಹೆಚ್ಚಿಗೆ ಬಂದಿದೆ. ಅದಕ್ಕಾಗಿ ಗುತ್ತಿಗೆದಾರರಿಗೆ ದಂಡ ಹಾಕಲು ನಗಸಭೆ ನಿರ್ಣಯಿಸಿತು. ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ,ನಗರಸಭೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next