ವೇಣೂರು : ಕಾವಳಕಟ್ಟೆಯಲ್ಲಿ ಜರಗುತ್ತಿದ್ದ ಮುಡೂರು- ಪಡೂರು ಕಂಬಳವನ್ನು ಜಾಗದ ಸಮಸ್ಯೆಯಿಂದ ಕಳೆದ 5 ವರ್ಷಗಳಿಂದ ನಿಲ್ಲಿಸಲಾಗಿತ್ತು. ಕಂಬಳ ನಡೆಸಲು ಇದೀಗ ಹೊಸ ಜಾಗ ಸಿದ್ಧಪಡಿಸಲಾಗಿದೆ. ಮುಂದಿನ ವರ್ಷದಿಂದ ಬಂಟ್ವಾಳ ತಾಲೂಕಿನಲ್ಲಿ ಮತ್ತೆ ಮುಡೂರು- ಪಡೂರು ಕಂಬಳದ ವೈಭವ ಮರುಕಳಿಸಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ವೇಣೂರು ಪೆರ್ಮುಡದಲ್ಲಿ ನಡೆದ 26ನೇ ವರ್ಷದ ಸೂರ್ಯ- ಚಂದ್ರ ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ, ಇಂದಿಗೂ ಕಂಬಳ ಕ್ರೀಡೆ ಜೀವಂತವಾಗಿದೆ ಎಂದರೆ ಅದಕ್ಕೆ ಕಂಬಳಾಭಿಮಾನಿಗಳ ಹೋರಾಟವೇ ಕಾರಣ ಎಂದರು.
ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ, 141 ಜತೆ ಕೋಣಗಳು ಪಾಲ್ಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಮಾಜಿ ಶಾಸಕ ವಸಂತ ಬಂಗೇರ ಮತ್ತು ಸಮಿತಿ ಅಧ್ಯಕ್ಷ ನಿತೀಶ್ ಎಚ್. ಅವರ ಅವಿರತ ಶ್ರಮದ ಫಲ ಇದಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಿ.ಪಂ. ಸದಸ್ಯರಾದ ಪದ್ಮಶೇಖರ ಜೈನ್, ಪಿ. ಧರಣೇಂದ್ರ ಕುಮಾರ್, ಬೆಳ್ತಂಗಡಿ ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್ ಇಂದಬೆಟ್ಟು, ಬೇಬಿ ಕುಂದರ್ ಬಂಟ್ವಾಳ, ಮಾಯಿಲಪ್ಪ ಸಾಲ್ಯಾನ್ ಬಂಟ್ವಾಳ, ಬಂಟ್ವಾಳ ಕೆಡಿಪಿ ಸದಸ್ಯೆ ಜಯಂತಿ ಪೂಜಾರಿ, ಕಂಬಳ ಸಮಿತಿ ಮಾಜಿ ಅಧ್ಯಕ್ಷ ಜೀವಂಧರ ಕುಮಾರ್, ತಾ.ಪಂ. ಸದಸ್ಯರಾದ ಕೆ. ವಿಜಯ ಗೌಡ, ಪ್ರವೀಣ್ ಗೌಡ, ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು, ಬೆಳ್ತಂಗಡಿ ವಕೀಲರ ಸಂಘದ ಕಾರ್ಯದರ್ಶಿ ಮನೋಹರ ಕುಮಾರ್, ಪತ್ರಕರ್ತರಾದ ದೇವಿಪ್ರಸಾದ್, ಮನೋಹರ ಬಳಂಜ, ಪ್ರಮುಖರಾದ ಸೋಮಯ್ಯ ಹನೈನಡೆ, ಡೆನ್ಸಿಲ್ ಬಂಟ್ವಾಳ, ಕರುಣಾಕರ ಸಾಲ್ಯಾನ್ ಪೆರ್ಮುಡ ಹಾಗೂ ಮತ್ತಿತರರಿದ್ದರು.
ಸಮ್ಮಾನ
ಕಂಬಳ ಕೋಣಗಳ ಹಿರಿಯ ಯಜಮಾನ ಬಾಡು ಪೂಜಾರಿ, ಕಳೆದೆರಡು ವರ್ಷದಿಂದ ಕಂಬಳವನ್ನು ಅದ್ದೂರಿಯಾಗಿ ನಿರ್ವಹಿಸಿದ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಹಾಗೂ ಕಂಟ್ರಾಕ್ಟರ್ ರಫಿಕ್ ಅವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಸ್ವಾಗತಿಸಿದರು. ಕಂಬಳ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರ್ವಹಿಸಿದರು. ಅನೂಪ್ ಜೆ. ಪಾಯಸ್ ಮೂಡುಕೋಡಿ ವಂದಿಸಿದರು.
ತರಬೇತಿ ನೀಡುವ ಕೆಲಸವಾಗಲಿ
ಕೋಣಗಳನ್ನು ಓಡಿಸುವವರಿಗೆ ತರಬೇತಿ ನೀಡುವ ಕೆಲಸ ಆಗಬೇಕು. ಅದು ಮುಂದಿನ ಪೀಳಿಗೆಗೆ ಕಂಬಳ ಉಳಿಯಲು ಸಹಕಾರಿ ಆಗಲಿದೆ. ಬುದ್ಧಿವಂತರು, ಜ್ಞಾನವಂತರಿರುವ ದ.ಕ. ಜಿಲ್ಲೆಯಲ್ಲಿ ಪೇಟಾದಿಂದ ಕಂಬಳ ನಿಲ್ಲಿಸಲು ಅಸಾಧ್ಯ. ಈ ಬಗ್ಗೆ ಯಾವುದೇ ಹೋರಾಟಕ್ಕೂ ಸಿದ್ಧ.
– ಕೆ. ವಸಂತ ಬಂಗೇರ
ಗೌರವಾಧ್ಯಕ್ಷರು,
ವೇಣೂರು-ಪೆರ್ಮುಡ ಕಂಬಳ ಸಮಿತಿ