ಇಟಾನಗರ: ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ವಾರಗಳ ನಂತರ ಪೆಮಾ ಖಂಡು ಇಂದು ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಜೊತೆ ಸಂಪುಟದ ಹನ್ನೊಂದು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಇಟಾನಗರದಲ್ಲಿ ನಡೆದ ಸಮಾರಂಭದಲ್ಲಿ ಅರುಣಾಚಲ ಪ್ರದೇಶದ ರಾಜ್ಯಪಾಲ ಕೆಟಿ ಪರ್ನಾಯಕ್ ಅವರು ಖಂಡು ಮತ್ತು ಇತರ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವರಾದ ಜೆಪಿ ನಡ್ಡಾ ಮತ್ತು ಕಿರಣ್ ರಿಜಿಜು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅರುಣಾಚಲ ಪ್ರದೇಶದ ನೂತನ ಸಂಪುಟದಲ್ಲಿ ಚೌನಾ ಮೇ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಇತರ ಸಂಪುಟ ಸದಸ್ಯರಾದ ಬಿಯುರಾಮ್ ವಾಘೆ, ನ್ಯಾಟೊ ಡುಕಾಮ್, ಗ್ಯಾನ್ರಿಯಲ್ ಡೆನ್ವಾಂಗ್ ವಾಂಗ್ಸು, ವಾಂಕಿ ಲೋವಾಂಗ್, ಪಸಾಂಗ್ ದೋರ್ಜಿ ಸೋನಾ, ಮಾಮಾ ನಟುಂಗ್, ದಸಾಂಗ್ಲು ಪುಲ್, ಬಾಲೋ ರಾಜಾ, ಕೆಂಟೋ ಜಿನಿ ಮತ್ತು ಓಜಿಂಗ್ ಟೇಸಿಂಗ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ಸಾರ್ವತ್ರಿಕ ಚುನಾವಣೆಯ ಜೊತೆಗೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಅರುಣಾಚಲ ವಿಧಾನಸಭೆಯ 60 ಸ್ಥಾನಗಳಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದುಕೊಂಡಿದೆ.
ಪೆಮಾ ಖಂಡು 2016 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು ಅಲ್ಲಿಂದ ಇಂದು ಮೂರನೇ ಅವಧಿಗೆ ಮುಖ್ಯಮಂತ್ರಿ ಗಾದಿಯನ್ನು ಏರಿದ್ದಾರೆ.