ಲಕ್ಷ್ಮೇಶ್ವರ: ಸರ್ವಧರ್ಮ ಸಹಿಷ್ಣು, ವಿಶ್ವ ಸಂತ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೂ ಲಕ್ಷ್ಮೇಶ್ವರಕ್ಕೂ ಅವಿನಾಭಾವ ಸಂಬಂಧವಿತ್ತು.
60 ವರ್ಷಗಳ ಹಿಂದೆಯೇ ಪಟ್ಟಣದಲ್ಲಿ ಸಂಘಟಿತವಾದ ಶ್ರೀ ಮಂತ್ರಾಲಯ ಪಾದಯಾತ್ರೆ ಸಂಘದೊಂದಿಗೆ ಪೂಜ್ಯರು ಕಳೆದ 30 ವರ್ಷಗಳಿಂದ ಒಡನಾಟ ಹೊಂದಿದ್ದರು. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಪಾದಯಾತ್ರಿಕರೊಂದಿಗೆ ಪಾಲ್ಗೊಂಡು ಯಾತ್ರಿಕರಿಗೆ ಧರ್ಮ ಸಂದೇಶ ನೀಡುತ್ತಿದ್ದರು.
ಲಕ್ಷ್ಮೇಶ್ವರದ ವೈದ್ಯ ಬಾಬುರಾವ್ ಪ್ರತಿವರ್ಷ ಮೃಗಶಿರ ನಕ್ಷತ್ರದ ದಿನ ಅಸ್ತಮಾಕ್ಕೆ ನೀಡುತ್ತಿದ್ದ ಉಚಿತ ಮಂತ್ರೌಷಧಿ ಕಾರ್ಯಕ್ರಮಕ್ಕೂ ಬಂದು ಸ್ವತಃ ಔಷಧಿ ವಿತರಿಸಿದ್ದರು. 2013ರಲ್ಲಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನದ ಕಾರ್ಯಕ್ರಮ ಮುಗಿಸಿ ಉಡುಪಿಗೆ ತೆರಳಿ ಮಾರನೇ ದಿನವೂ ಯತಿಗಳು ಲಕ್ಷ್ಮೇಶ್ವರಕ್ಕೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳ ಭಕ್ತರ ಮನೆಗೆ ತೆರಳಿ ಪಾದಪೂಜೆಯಲ್ಲಿ ಪಾಲ್ಗೊಂಡಿರುವುದು ಲಕ್ಷ್ಮೇಶ್ವರದ ಮೇಲೆ ಶ್ರೀಗಳಿಗಿದ್ದ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಪಟ್ಟಣದ ದಿ. ವೈದ್ಯ ಬಾಬುರಾವ್ ಕುಲಕರ್ಣಿ ನಿಧನರಾದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 25ರಂದು ಕುಲಕರ್ಣಿಯವರ ಮನೆಗೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಭೂಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರ ದೊಂದಿಗೆ ಪೇಜಾವರ ಶ್ರೀಗಳಿಗೆ 50 ವರ್ಷಗಳ ಹಿಂದೆಯೇ ಸಂಪರ್ಕವಿತ್ತು. 1967ರಲ್ಲಿ ಲಿಂ.ಜಗದ್ಗುರು ವೀರಗಂಗಾಧರ ಶ್ರೀಗಳು ಸಂಘಟಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ವೀರಶೈವ ಲಿಂಗಾಯತ ಮತ್ತು ಬ್ರಾಹ್ಮಣ ಸಮಾಜದ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಿದ್ದರು.