Advertisement

ಹುಬ್ಬಳ್ಳಿ ಜತೆ ಆರು ದಶಕಗಳ ನಂಟು

10:54 AM Dec 30, 2019 | Team Udayavani |

ಹುಬ್ಬಳ್ಳಿ: ದೇಶ ಕಂಡ ಅಪರೂಪದ ಸಂತ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಹುಬ್ಬಳ್ಳಿಯ ನಂಟು ಸರಿಸುಮಾರು ಆರು ದಶಕಗಳಿಗಿಂತಲೂ ಹೆಚ್ಚಿನದಾಗಿದೆ. ಈ ಭಾಗದ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವರ ಕಾರ್ಯ ಅವಿಸ್ಮರಣೀಯ.

Advertisement

ಶ್ರೀಗಳು ಉಡುಪಿ, ಬೆಂಗಳೂರಿನ ಬಗ್ಗೆ ಎಷ್ಟು ಪ್ರೀತಿ ಹೊಂದಿದ್ದರೋ ಅದೇ ರೀತಿ ಹುಬ್ಬಳ್ಳಿ ಬಗ್ಗೆಯೂ ಅಷ್ಟೇ ಪ್ರೀತಿ ಹೊಂದಿದ್ದರು. ಹುಬ್ಬಳ್ಳಿಗೆ ಬಂದಾಗಲೊಮ್ಮೆ ಶ್ರೀಗಳು ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಸುಮಾರು ಆರು ದಶಕಗಳ ಹಿಂದೆಯೇ ವಿದ್ಯಾರ್ಥಿಗಳ ಅನುಕೂಲಕ್ಕೆಂದು ವಸತಿ ನಿಲಯ ಆರಂಭಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಮಹತ್ವದ ಕೊಡುಗೆ ನೀಡಿದ್ದರು.

ಶೈಕ್ಷಣಿಕ –ಧಾರ್ಮಿಕ ಸೇವೆ: ಈ ಭಾಗದ ಬ್ರಾಹ್ಮಣ ಸಮಾಜ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂಬ ಉದ್ದೇಶದೊಂದಿಗೆ 1957ರ ಸುಮಾರಿಗೆ ಹುಬ್ಬಳ್ಳಿಯಲ್ಲಿ ಅಖೀಲ ಭಾರತ ಮಾಧ್ವ ಮಹಾಮಂಡಲ ರಚಿಸಿ, ಅದರ ಅಡಿಯಲ್ಲಿಯೇ ವಿದ್ಯಾರ್ಥಿ ನಿಲಯ ಆರಂಭಿಸಿದ್ದರು. ಶಿಕ್ಷಣಕ್ಕೆಂದು ಹುಬ್ಬಳ್ಳಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ವಸತಿ-ಊಟದ ವ್ಯವಸ್ಥೆ ಉದ್ದೇಶದಿಂದ ಇದನ್ನು ಆರಂಭಿಸಲಾಗಿತ್ತು. ಕೇವಲ 8 ಕೋಣೆಗಳೊಂದಿಗೆ ಆರಂಭವಾಗಿದ್ದ ವಸತಿ ನಿಲಯ ಇದೀಗ 56 ಕೋಣೆಗಳನ್ನು ಹೊಂದಿದ್ದು, ಪ್ರಸ್ತುತ ಸುಮಾರು 230ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ. 2014ರಲ್ಲಿ ಇಲ್ಲಿನ ಬುಡರಸಿಂಗಿಯಲ್ಲಿ ಕರ್ನಾಟಕ ಶಿಕ್ಷಣ ಸೇವಾ ಸಂಸ್ಥೆ ವಾಣಿಜ್ಯ ಕಲಾ ಮತ್ತು ವಿಜ್ಞಾನ ಕಾಲೇಜು ಆರಂಭಿಸುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘದ ಅಡಿಯಲ್ಲಿ ಹುಬ್ಬಳ್ಳಿಯಲ್ಲಿ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಗಳ ಹಿಂದೆ ಶ್ರೀಗಳ ಪ್ರೇರಣೆ, ಆಶೀರ್ವಾದ ಪ್ರಮುಖವಾಗಿತ್ತು. 60ರ ದಶಕದಲ್ಲೇ ಹುಬ್ಬಳ್ಳಿಯಲ್ಲಿ ಶ್ರೀಕೃಷ್ಣ ಕಲ್ಯಾಣ ಮಂಟಪ ನಿರ್ಮಿಸಲಾಗಿದ್ದು, ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಂತೆ ಶ್ರೀಕೃಷ್ಣ ಮಂದಿರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ವೃಂದಾವನವಿದೆ.

1974ರಲ್ಲಿ ಶ್ರೀಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಹಾಗೂ 1979ರಲ್ಲಿ ರಾಯರ ವೃಂದಾವನ ಸ್ಥಾಪನೆ ಶ್ರೀಗಳ ಮಾರ್ಗದರ್ಶನದಲ್ಲೇ ನಡೆದಿತ್ತು. ಈ ಭಾಗದ ಅನೇಕ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸ್ವಾಮೀಜಿಯವರ ಮಾರ್ಗದರ್ಶನ, ಆಶೀರ್ವಾದ ಇತ್ತು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ರಂಗಮಿತ್ರರು ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದೇ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಹುಬ್ಬಳ್ಳಿ ಭೇಟಿ ಕೊನೆಯದಾಯಿತು.

ಬಾರಿ ಮಾತನಾಡಿಲ್ಲ ಆಶೀರ್ವದಿಸಿದ್ದರಷ್ಟೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಉಡುಪಿ ಮಠದಲ್ಲಿ ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ್ವಾಮೀಜಿಯವರ ಸೂಚನೆ ಮೇರೆಗೆ 1979ರಲ್ಲಿ ಹುಬ್ಬಳ್ಳಿಯ ಶ್ರೀಕೃಷ್ಣ ಕಲ್ಯಾಣ ಮಂಟಪದ ಆವರಣದಲ್ಲಿನ ಶ್ರೀ ರಾಘವೇಂದ್ರ ವೃಂದಾವನಕ್ಕೆ ಪೌರೋಹಿತ್ಯಕ್ಕೆ ಆಗಮಿಸಿದ್ದ ಕೃಷ್ಣಮೂರ್ತಿ ತೆಂಕಿಲಾಯ ಅವರು, ಗುರುಗಳ ಪ್ರೇರಣೆಯೊಂದಿಗೆ ನಾನು ಇಲ್ಲಿಗೆ ಬಂದು ಪೌರೋಹಿತ್ಯ ಮಾಡಿಕೊಂಡಿದ್ದೇನೆ. ಸ್ವಾಮೀಜಿ ಹುಬ್ಬಳ್ಳಿಗೆ ಬಂದಾಗಲೊಮ್ಮೆ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲೇ ತಂಗುತ್ತಿದ್ದರು. ಬಂದಾಗಲೊಮ್ಮೆ ನಮ್ಮನ್ನು ಮಾತನಾಡಿಸಿ, ನಮ್ಮ ಕಷ್ಟ-ಸುಖ ಕೇಳುತ್ತಿದ್ದರು. ಆದರೆ, ನವೆಂಬರ್‌ 3ರಂದು ರಂಗಮಿತ್ರರು ದಶಮಾನೋತ್ಸವ ಕಾರ್ಯಕ್ರಮಕ್ಕೆ ಬಂದಾಗಲೂ ಇಲ್ಲಿಗೆ ಆಗಮಿಸಿದ್ದರಾದರೂ ಪ್ರತಿ ಬಾರಿಯೂ ಮಾತನಾಡಿಸುತ್ತಿದ್ದವರು ಈ ಬಾರಿ ಮಾತ್ರ ಮಾತನಾಡಿಸಲಿಲ್ಲ. ಕಲ್ಯಾಣ ಮಂಟಪದಿಂದ ತೆರಳುವಾಗ ಅವರನ್ನು ನೋಡಿ ಕೈ ಮುಗಿದು ನಿಂತಾಗ ಅಲ್ಲಿಂದಲೇ ನಗುತ್ತಲೇ ಆಶೀರ್ವದಿಸಿ ಹೋದರು. ಅದೇ ಕೊನೆ ಭೇಟಿಯಾಗುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂಬುದು ಕೃಷ್ಣಮೂರ್ತಿ ಅವರ ಅನಿಸಿಕೆ.

Advertisement

60ರ ದಶಕದಲ್ಲಿ ಶ್ರೀಗಳು ತಮ್ಮ ಪೂರ್ವಾಶ್ರಮದ ತಂದೆ-ತಾಯಿಗಳೊಂದಿಗೆ ಬದ್ರಿನಾಥ ಪ್ರವಾಸ ಕೈಗೊಂಡಿದ್ದಾಗ ಅವರೊಟ್ಟಿಗೆ ತಾವು ಹೋಗಿದ್ದು, ಅಖೀಲ ಭಾರತ ಮಾಧ್ವ ಮಹಾಮಂಡಲದಿಂದ ಹೈದರಾಬಾದ್‌ ನಲ್ಲಿ ನಡೆದ ಕಾರ್ಯಕ್ರಮಕ್ಕೆ ದೇಶದ ಮೊದಲ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ ಅವರು ಆಗಮಿಸಿದ್ದರು. ಆ ಕಾರ್ಯಕ್ರಮಕ್ಕೂ ನಾನು ಗುರುಗಳ ಸೇವೆಗೆಂದು ಅಲ್ಲಿಗೆ ಹೋಗಿದ್ದೆ ಎಂದು ಕೃಷ್ಣಮೂರ್ತಿ ಸ್ಮರಿಸುತ್ತಾರೆ. ರಂಗಮಿತ್ರರು ದಶಮಾನೋತ್ಸವ ಸಮಾರಂಭಕ್ಕೆಂದು ನವೆಂಬರ್‌ 3ರಂದು ಹುಬ್ಬಳ್ಳಿಗೆ ಆಗಮಿಸಿದ್ದಾಗ ನಾವು ಕೈಗೊಂಡ ತುಳಸಿ ಸಂಕೀರ್ತನದಲ್ಲಿ ಗುರುಗಳು ಭಾಗಿಯಾಗಿದ್ದರು ಎಂದು ಶ್ರೀಕೃಷ್ಣ ಮಂದಿರ ಪುರೋಹಿತರಾದ ಲಕ್ಷ್ಮೀನಾರಾಯಣ ಭಟ್‌ ಅವರು ನೆನಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next