Advertisement

ಪೇಜಾವರ ಶ್ರೀ ಚೇತರಿಕೆ: ಆಸ್ಪತ್ರೆಗೆ ಗಣ್ಯರ ದಂಡು

10:20 AM Dec 23, 2019 | mahesh |

ಉಡುಪಿ: ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದಿದೆ ಎಂದು ಮಣಿಪಾಲ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಶುಕ್ರವಾರದಿಂದ ಅವರಿಗೆ 48 ಗಂಟೆಗಳ ಕಾಲ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿ ಆ್ಯಂಟಿಬಯೋಟಿಕ್‌ ನೀಡಲಾಗುತ್ತಿದೆ. ನ್ಯುಮೋನಿಯಾ ಸಮಸ್ಯೆಯಿಂದ ಅವರು ಚಿಕಿತ್ಸೆಗೆ ದಾಖಲಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

Advertisement

ಮುಂದುವರಿದ ಗಣ್ಯರ ದಂಡು
ಶ್ರೀಗಳನ್ನು ಕ್ಷೇಮ ವಿಚಾರಣೆಗೆ ಶುಕ್ರವಾರ ದಿಂದಲೇ ಗಣ್ಯರ ದಂಡು ಆಗಮಿಸುತ್ತಿದ್ದು ಶನಿವಾರವೂ ಮುಂದುವರಿಯಿತು. ಶುಕ್ರ ವಾರ ರಾತ್ರಿ ಪರ್ಯಾಯ ಸಂಚಾರದಲ್ಲಿರುವ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶಿರಸಿ ಸ್ವರ್ಣ ವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಭೇಟಿ ನೀಡಿದ್ದರು.

ಕಿರಿಯ ಶ್ರೀಗಳಿಂದ ಪಾರಾಯಣ
ಪೇಜಾವರ ಕಿರಿಯ ಶ್ರೀಪಾದರು ಬೆಳಗ್ಗೆ ಬೇಗ ಮಠದಲ್ಲಿ ಪೂಜೆ ಮುಗಿಸಿ ಆಸ್ಪತ್ರೆಗೆ ಬಂದರೆ ಅಲ್ಲಿಯೇ ಇದ್ದು ರಾತ್ರಿ ಪೂಜೆಗೆ ಮಠಕ್ಕೆ ತೆರಳುತ್ತಿದ್ದಾರೆ. ಚಿಕಿತ್ಸೆ ಪಡೆಯುವ ಕೊಠಡಿ ಹೊರಭಾಗದಲ್ಲಿದ್ದು ಪಾರಾಯಣಾದಿಗಳನ್ನು ನಡೆಸುತ್ತಿದ್ದಾರೆ.

ಶನಿವಾರ ಭಂಡಾರಕೇರಿ ಮಠಾಧೀಶರು, ರಾಮಚಂದ್ರಾಪುರ ಮಠದ, ಶ್ರೀಗಳು, ಸೋದೆ ಶ್ರೀಗಳು, ಗುರುಪುರ ವಜ್ರದೇಹಿ ಶ್ರೀಗಳು, ಶ್ರೀ ವಿಶ್ವ ಸಂತೋಷ ಭಾರತೀ ಸ್ವಾಮೀಜಿ, ಭೀಮನಕಟ್ಟೆ ಸ್ವಾಮಿಗಳು, ಡಾ| ಡಿ. ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಯಡಿಯೂರಪ್ಪ, ನಾಯಕರಾದ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಕೆ.ಎಸ್‌. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಸುನಿಲ್‌ ಕುಮಾರ್‌, ಸುಕುಮಾರ ಶೆಟ್ಟಿ, ಇಬ್ರಾಹಿಂ, ಐವನ್‌ ಡಿ’ಸೋಜಾ, ಹರೀಶ ಕುಮಾರ್‌, ವಿನಯಕುಮಾರ್‌ ಸೊರಕೆ, ಆಸ್ಕರ್‌ ಫೆರ್ನಾಂಡಿಸ್‌, ಕೃಷ್ಣ ಪಾಲೆಮಾರ್‌, ಯು.ಟಿ. ಖಾದರ್‌, ಮಟ್ಟಾರು ರತ್ನಾಕರ ಹೆಗ್ಡೆ, ಅಶೋಕ್‌ ಕುಮಾರ್‌ಕೊಡವೂರು, ಉದ್ಯಮಿ ನೀರಾ ರಾಡಿಯ ಭೇಟಿ ನೀಡಿದರು.

ಬಿಗಿ ಭದ್ರತೆ
ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ನೇತೃತ್ವದಲ್ಲಿ ಆಸ್ಪತ್ರೆ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಿರ್ಮಲಾ ದೂರವಾಣಿ ಕರೆ ಪೇಜಾವರ ಶ್ರೀಗಳ ಆಪ್ತಕಾರ್ಯದರ್ಶಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ದೂರವಾಣಿ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿ ತುರ್ತು ನೆರವು ಅಗತ್ಯ ವಿದ್ದಲ್ಲಿ ನೀಡುವುದಾಗಿ ತಿಳಿಸಿದ್ದಾರೆ.

Advertisement

ಜೈನಮಠದಲ್ಲಿ ಕ್ಷೀರಾಭಿಷೇಕ
ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ಹಾರೈಸಿ ಮೂಡುಬಿದಿರೆಯ ಜೈನಮಠದಲ್ಲಿ ಭಗವಾನ್‌ ಪಾರ್ಶ್ವನಾಥ ಸ್ವಾಮಿಗೆ ಕ್ಷೀರ ಅಭಿಷೇಕ ನೆರವೇರಿಸಲಾಯಿತು. ಕಾಪು ಲಕ್ಷ್ಮೀಜನಾರ್ದನ, ಮಟ್ಟು ವಿಷ್ಣುಮೂರ್ತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಉಡುಪಿ ಸಂಸ್ಕೃತ ಕಾಲೇಜು, ಬೆಂಗ ಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಮೊದಲಾದೆಡೆ ವಿಷ್ಣುಸಹಸ್ರನಾಮ ಪಾರಾಯಣ ನಡೆಯುತ್ತಿದೆ. ಕಾಂಚಿ ಕಾಮಕೋಟಿ ಪೀಠದ ಶ್ರೀ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಅವರು ದೇಶದ ಎಲ್ಲ ಶಾಖೆಗಳಲ್ಲಿ ವೇದ ಪಾರಾಯಣ ಸಹಿತ ಪ್ರಾರ್ಥನೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಉತ್ತರಾದಿ ಮಠದ ಎಲ್ಲ ಶಾಖೆಗಳಲ್ಲಿ ವಿಶೇಷ ಪೂಜೆ ನಡೆಸುತ್ತಿರುವುದಾಗಿ ಶ್ರೀ ಸತ್ಯಾತ್ಮತೀರ್ಥರು ತಿಳಿಸಿದರು.

ಆಡ್ವಾಣಿ ಕಳವಳ
ಶ್ರೀಗಳ ಜತೆಗೆ ಸುದೀರ್ಘ‌ ಕಾಲದ ಸಂಪರ್ಕವಿರುವ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಅವರು ಶ್ರೀಗಳ ಅನಾರೋಗ್ಯದಿಂದ ಕಳವಳಕ್ಕೀಡಾಗಿ ಶನಿವಾರ ಪುತ್ರಿ ಪ್ರತಿಭಾ ಆಡ್ವಾಣಿಯವರ ಮೂಲಕ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಕಿಣಿ ಅವರಿಗೆ ಕರೆ ಮಾಡಿಸಿ ವಿಚಾರಿಸಿದರು. ಶ್ರೀಗಳ ಆರೋಗ್ಯದ ಸ್ಥಿತಿಗತಿ ವಿಚಾರಿಸಿ ತಂದೆಯವರು ಎರಡೆರಡು ಬಾರಿ ಕೇಳಿದರು. ಅವರು ತುಂಬಾ ಕಳವಳಗೊಂಡಿದ್ದಾರೆ. ನಾವೂ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ನೀಡುತ್ತಾ ಇರಿ ಎಂದರು.

ಭಾವುಕರಾದ ರಾಮ್‌ದೇವ್‌
ಪೇಜಾವರ ಶ್ರೀಗಳು ನನಗೆ ತಂದೆ, ತಾಯಿ, ಗುರು ಎಲ್ಲವೂ. ಅವರು ಬಹುಕಾಲ ಚೆನ್ನಾಗಿರಬೇಕು ಎಂದು ಯೋಗಗುರು ಬಾಬಾರಾಮ್‌ದೇವ್‌ ಅವರು ಕಿರಿಯ ಶ್ರೀಗಳಿಗೆ ದೂರವಾಣಿ ಕರೆ ಮಾಡಿ ಭಾವುಕರಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next