ಕೋಲಾರ: ದಲಿತರ ಮನೆಗೆ ಉಡುಪಿ ಸ್ವಾಮೀಜಿಗಳು ಬರಲು ಸಾಧ್ಯವೇ ಇದೆಲ್ಲಾ ಗಿಮಿಕ್ ಎಂದೆಲ್ಲಾ ಕೂಗು ಎಬ್ಬಿಸಿದ್ದವರ ಬಾಯಿ ಮುಚ್ಚಿಸಿದ್ದ ಪೇಜಾವರ ಶ್ರೀಗಳು, 2014 ರ ನವೆಂಬರ್ ನಲ್ಲಿ ಕೋಲಾರದ ದಲಿತರ ಮನೆಗಳಿಗೆ ಭೇಟಿ ನೀಡಿ, ಅಲ್ಲಿ ಪೂಜೆ ಸಲ್ಲಿಸಿ ಹಾಲು ಸೇವಿಸಿ ಅಸ್ಪೃಶ್ಯತೆ ವಿರುದ್ಧ ಸಂದೇಶ ನೀಡಿದ್ದರು.
ನಗರದ ಗಾಂಧಿನಗರ, ಮೋಚಿಪಾಳ್ಯದ ದಲಿತರ ಮನೆಗೆ ನೇರವಾಗಿ ಪ್ರವೇಶಿಸಿದ ಸ್ವಾಮೀಜಿ, ಜನತೆ ಆಶ್ಚರ್ಯಪಡುವಂತೆ ಮಾಡಿದ್ದರು. ಹಿಂದೂ ಧರ್ಮಕ್ಕೆ ಶಾಪವಾಗಿದ್ದ ಅಸ್ಪೃಶ್ಯತೆ ವಿರುದ್ಧ ಸ್ವತಃ ಹೋರಾಟಕ್ಕಿಳಿದಿದ್ದ ವಿಶ್ವೇಶತೀರ್ಥರು, ಕೋಲಾರದ ಹಲವು ದಲಿತರ ಮನೆಗಳಿಗೆ ಹೋಗಿ ಪೂಜೆ ಸಲ್ಲಿಸಿ ಆತ್ಮಸ್ಥೈರ್ಯ ತುಂಬಿ, ನೀವು ಹಿಂದೂ ಧರ್ಮದ ಪ್ರಮುಖ ಭಾಗ ಎಂಬ ಸಂದೇಶ ರವಾನಿಸಿದ್ದರು. ಶ್ರೀಗಳು ದಲಿತರ ಮನೆಗಳಿಗೆ ಭೇಟಿ ನೀಡಿ ಹೋದ ನಂತರ ಇಲ್ಲಿನ ದಲಿತ ಮುಖಂಡರ ಮನಸ್ಥಿತಿ ಬದಲಾಯಿತು, ಶ್ರೀಗಳ ವಿರುದ್ಧದ ಟೀಕೆ ನಿಲ್ಲುವಂತಾಗಿತ್ತು. ಹಿಂದೂ ಧರ್ಮ ಪ್ರತಿಪಾದಕರಾಗಿದ್ದ ಶ್ರೀಗಳ ವಿರುದ್ಧ ಕೆಲವರು ಪಂಕ್ತಿಬೇಧ, ಮಡಿ, ಮೈಲಿಗೆ ಹೆಸರಿನಲ್ಲಿ ಅಸ್ಪೃಶ್ಯತೆ ಉಳಿಯಲು ನೀವು ಕಾರಣರು ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದರು.
ಕೋಲಾರಕ್ಕೆ ನೀರು: ಕೋಲಾರಕ್ಕೆ ನೀರಾವರಿ ಯೋಜನೆಯಡಿ ನೀರು ತರುವ ವಿಷಯದಲ್ಲೂ ಸಹಮತ ಹೊಂದಿದ್ದ ಶ್ರೀ, ಜಿಲ್ಲೆಯ ಜನರ ನೀರಿನ ಸಂಕಷ್ಟ ಅರಿತು ಇಲ್ಲಿಗೆ ಯಾವುದೇ ಮೂಲದಿಂದಾದರೂ ನೀರು ಹರಿಸಲು ಸರ್ಕಾರ ಮುಂದಾಗಲಿ ಎಂದು ಒತ್ತಾಯಿಸಿದ್ದರು. ದಲಿತ ಕೇರಿಗಳಿಗೆ ಶ್ರೀಗಳ ಭೇಟಿ ಬಳಿಕ, ಅವರಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹೆಚ್ಚಾದರು. ಕೋಲಾರ ಜಿಲ್ಲೆಯಲ್ಲಿ ಬ್ರಾಹ್ಮಣ ಸಮುದಾಯ ಮಾತ್ರವಲ್ಲದೇ ಅವರನ್ನು ಗುರುಗಳೆಂದು ಭಾವಿಸುವ ದಲಿತ ಹಾಗೂ ಇತರೆ ಸಮುದಾಯ ಇದ್ದದ್ದು ವಿಶೇಷ.
ಗೀತಾ ಅಭಿಯಾನ: 2013ರಲ್ಲಿ ಕೋಲಾರದಲ್ಲಿ ನಡೆದಿದ್ದ ಭಗವದ್ಗೀತಾ ಅಭಿಯಾನದಲ್ಲಿ ಪೇಜಾವರ ಶ್ರೀ ಪಾಲ್ಗೊಂಡು ಮಾತನಾಡಿದ್ದರು. ಕೋಲಾರದಲ್ಲಿ ಅವರ ಅಪಾರ ಭಕ್ತವೃಂದ ಇದ್ದ ಕಾರಣ ಹಲವು ಬಾರಿ ಭೇಟಿ ನೀಡಿದ್ದರು. ಇದೇ 2019 ಡಿ.11 ರಂದು ಕೋಲಾರ ಹೊರವಲಯದ ವುಡ್‌ಲ್ಯಾಂಡ್ ಹೋಟೆಲ್ ನಲ್ಲಿ ನಡೆದ ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದೇ ಕೋಲಾರ ಜಿಲ್ಲೆಯ ಕೊನೇ ಭೇಟಿಯಾಗಿತ್ತು. ಕೋಲಾರಕ್ಕೂ ಶ್ರೀಗಳಿಗೆ ಅಪಾರ ನಂಟಿದ್ದು, ಇದೀಗ ಶ್ರೀಗಳ ಅಗಲಿಕೆಗೆ ಸಾವಿರಾರು ಮಂದಿ ದುಃಖೀಸಿದ್ದಾರೆ. ಶ್ರದ್ಧಾಂಜಲಿ ಅರ್ಪಿಸಿದ್ದಾರೆ, ಆದರೆ ಅವರ ಚಿಂತನೆಗಳನ್ನು ಕಾರ್ಯಗತ ಮಾಡುವ ಮೂಲಕ ಹಿಂದೂ ಧರ್ಮದ ಉಳಿವಿಗೆ ಸಂಕಲ್ಪ ಮಾಡಬೇಕಾಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.
-ಕೆ.ಎಸ್.ಗಣೇಶ್