Advertisement

ಶ್ರೀ ಕೃಷ್ಣನ ಪೂಜೆಯಲ್ಲೂ ದಾಖಲೆ ಬರೆದ ವಿಶ್ವೇಶತೀರ್ಥ ಶ್ರೀಪಾದರು

09:59 AM Dec 30, 2019 | Hari Prasad |

ಉಡುಪಿ: ಇಂದು ಹರಿಪಾದವನ್ನು ಸೇರಿದ ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಪಾದರು ಪರ್ಯಾಯ ಪೂಜೆಯಲ್ಲೂ ದಾಖಲೆ ನಿರ್ಮಿಸಿದವರು.

Advertisement

ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ಪೂಜಾ ನಿಯಮಗಳ ಪ್ರಕಾರ ಪರ್ಯಾಯ ಪೀಠವೇರುವ ಯತಿಗಳು ತಾವು ಸರ್ವಜ್ಞ ಪೀಠದಲ್ಲಿ ಇರುವ ಎರಡು ವರ್ಷಗಳ ಅವಧಿಯಲ್ಲಿ ಶ್ರೀ ಕೃಷ್ಣನನ್ನು 16 ಬಗೆಯ ಪೂಜೆಗಳಿಂದ ನಿತ್ಯ ಸಂತೃಪ್ತಿಗೊಳಿಸಬೇಕು. ಅದರಲ್ಲೂ ಮಧ್ಯಾಹ್ನದ ಮಹಾಪೂಜೆಯನ್ನು ಪರ್ಯಾಯ ಪೀಠದಲ್ಲಿರುವ ಸ್ವಾಮೀಜಿಯವರೇ ಮಾಡಬೇಕೆಂಬುದು ಇಲ್ಲಿರುವ ಅಲಿಖಿತ ನಿಯಮವಾಗಿದೆ.

ಗುರು ಸಾರ್ವಭೌಮರೆಂದೆಣಿಸಿಕೊಂಡಿದ್ದ ವಾದಿರಾಜರ ಬಳಿಕ ಸುಮಾರು 425 ವರ್ಷಗಳ ನಂತರ ಪಂಚಮ ಪರ್ಯಾಯದ ದಾಖಲೆ ಸೃಷ್ಟಿಸಿರುವ ಪೇಜಾವರ ಯತಿ ಶ್ರೇಷ್ಠರು ಕೃಷ್ಣನ ಮಹಾಪೂಜೆ ನಿರ್ವಹಿಸಿದ ವಿಷಯದಲ್ಲೂ ವಿನೂತನ ದಾಖಲೆ ನಿರ್ಮಿಸಿರುವುದು ಈ ಸಂದರ್ಭದಲ್ಲಿ ಸ್ಮರಣೀಯವೆಣಿಸಿಕೊಳ್ಳುತ್ತದೆ.

ವಿಶ್ವೇಶತೀರ್ಥ ಶ್ರೀಪಾದರು ನಿರ್ವಹಿಸಿದ ಒಟ್ಟು ಐದು ಪರ್ಯಾಯಗಳಲ್ಲಿ ಪೊಡವಿಗೊಡೆಯ ಶ್ರೀ ಕೃಷ್ಣನಿಗೆ ಅವರು ಸಮರ್ಪಿಸಿದ ಒಟ್ಟು ಮಹಾಪೂಜೆಗಳು 3,655. ಅಂದರೆ 2 ವರ್ಷಗಳ 365 ದಿನಗಳ 5 ಪರ್ಯಾಯಗಳಲ್ಲಿ (2 ವರ್ಷ x 365 ದಿನಗಳು x 5 ಪರ್ಯಾಯ). ಈ ಕೃಷ್ಣ ಕಿಂಕರ ತನ್ನೊಡೆಯನಿಗೆ ಕೈಯೆತ್ತಿ ಬೆಳಗಿದ ಮಹಾಪೂಜೆ 3,650.

ಸ್ವಾರಸ್ಯವೆಂದರೆ ಅವರ ಐದೂ ಪರ್ಯಾಯಗಳಲ್ಲಿ ಐದು ಬಾರಿ ಅಂದರೆ ಐದು ವರ್ಷ ಫೆಬ್ರವರಿಯಲ್ಲಿ 29 ದಿನಗಳು ಬಂದಿವೆ. ಅಂದರೆ ಆ ವರ್ಷಗಳಲ್ಲಿ 366 ದಿನಗಳಿದ್ದವು. ಹೀಗಾಗಿ ಐದೂ ಪರ್ಯಾಯಗಳಲ್ಲಿ ಐದು ದಿನದ ಐದು ಮಹಾಪೂಜೆಗಳು ಅವರಿಗೆ ದೊರೆತ ಬೋನಸ್‌! ಈ ಎಲ್ಲಾ ಲೆಕ್ಕಾಚಾರವನ್ನು ನೋಡಿದಾಗ ಸಂಖ್ಯೆಗಳ ಆಧಾರದಲ್ಲಿಯೂ 3650+5=3655, ಅಂದರೆ ಮಹಾಪೂಜೆಗಳನ್ನು ಶ್ರೀ ಕೃಷ್ಣನಿಗೆ ಸಲ್ಲಿಸಿದ ಕೀರ್ತಿಗೆ ಶ್ರೀಗಳು ಭಾಜನರು.

Advertisement

ಒಟ್ಟಿನಲ್ಲಿ ಸನ್ಯಾಸತ್ವ ಸ್ವೀಕಾರದಿಂದ ಹಿಡಿದು ಲೋಕಸಂಚಾರ, ಜೀವನಪದ್ಧತಿ, ಜ್ಞಾನಭಂಡಾರ, ಪರ್ಯಾಯ ಪೀಠಾರೋಹಣ ಸೇರಿದಂತೆ ಉಡುಪಿಯ ಯತಿ ಪರಂಪರೆಯ ಎಲ್ಲಾ ವಿಚಾರಗಳಲ್ಲಿ ದಾಖಲಾರ್ಹ ರೀತಿಯಲ್ಲೇ ಜೀವಿಸಿ ಹರಿಪಾದವನ್ನು ಸೇರಿದ ವಿಶ್ವೇಶತೀರ್ಥರ ಬದುಕು ಒಂದರ್ಥದಲ್ಲಿ ‘ಸಂಪೂರ್ಣ ಕೃಷ್ಣಾರ್ಪಣ’ವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next