Advertisement

ಎಚ್‌ಡಿಕೆ, ಸಿದ್ದು ದೇಣಿಗೆ ಕಿಡಿ : ಪೇಜಾವರ ಶ್ರೀ; ಬಿಜೆಪಿ, ಆರೆಸ್ಸೆಸ್‌ ನಾಯಕರಿಂದ ಆಕ್ರೋಶ

01:03 AM Feb 17, 2021 | Team Udayavani |

ಬೆಂಗಳೂರು/ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ದೇಣಿಗೆ ಕುರಿತು ಮಾಜಿ ಸಿಎಂಗಳಾದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಆಡಿರುವ ಮಾತುಗಳು ಕಿಡಿ ಹೊತ್ತಿಸಿವೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು, ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತು ಬಿಜೆಪಿ ನಾಯಕರು ಇಬ್ಬರೂ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಎಚ್‌ಡಿಕೆ ಹೇಳಿದ್ದೇನು?
ಸೋಮವಾರವಷ್ಟೇ ಟ್ವೀಟ್‌ ಮಾಡಿದ್ದ ಎಚ್‌ಡಿಕೆ, ರಾಮಮಂದಿರಕ್ಕೆ ಹಣ ಸಂಗ್ರಹ ಮಾಡುತ್ತಿರುವವರು ಹಣ ಕೊಟ್ಟವರ ಮತ್ತು ಕೊಡದವರ ಮನೆ ಗುರುತು ಮಾಡುತ್ತಿದ್ದಾರೆ. ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್‌ ಹುಟ್ಟಿದೆ ಎಂದು ಇತಿಹಾಸಜ್ಞರು ಹೇಳುತ್ತಾರೆ. ಆರೆಸ್ಸೆಸ್‌ ಕೂಡ ಆ ನೀತಿಗಳನ್ನು ಜಾರಿ ಮಾಡಿದರೆ ಮುಂದೇನಾಗುತ್ತದೆ ಎಂಬ ಆತಂಕ ಮೂಡಿದೆ ಎಂದಿದ್ದರು.

ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಹೀಗಾಗಿ ನಾನು ದೇಣಿಗೆ ನೀಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಜತೆಗೆ, “ಬೇರೆ ಕಡೆ ರಾಮಮಂದಿರ ನಿರ್ಮಾಣ ಮಾಡಿದರೆ ಕೊಡುತ್ತೇನೆ ಎಂದಿದ್ದೆ’ ಎಂದಿದ್ದಾರಲ್ಲದೆ, ದೇಣಿಗೆ ಸಂಗ್ರಹ ಕಾರ್ಯ ಪಾರದರ್ಶಕವಾಗಿರಬೇಕು ಎಂದೂ ಪ್ರತಿಪಾದಿಸಿದ್ದಾರೆ.

ವಿವಾದಿತ ಪ್ರದೇಶವಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಮ ಜನ್ಮಭೂಮಿಗೆ ದೇಣಿಗೆ ನೀಡಲು ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿ, ಯಾರಿಗೂ ನಿಧಿ ಸಮರ್ಪಣೆ ಮಾಡುವಂತೆ ನಾವು ಒತ್ತಾಯಿಸುವುದಿಲ್ಲ. ರಾಮ ಜನ್ಮಭೂಮಿ ವಿವಾದಿತ ಪ್ರದೇಶ ಎನ್ನುವ ಅವರ ಅಭಿಪ್ರಾಯದ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಸರ್ವೋಚ್ಚ ನ್ಯಾಯಾಲಯವೇ ಅಯೋಧ್ಯೆ ರಾಮನ ಜನ್ಮಭೂಮಿ ಎಂದು ಒಪ್ಪಿದೆ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಬಿಜೆಪಿ ಆಕ್ರೋಶ
ಕಪೋಲಕಲ್ಪಿತ ಸುದ್ದಿ ಸೃಷ್ಟಿಸುವ ಕಿಡಿಗೇಡಿಗಳ ಮಾತು ಕೇಳಿ ಆಧಾರ ರಹಿತ ಆರೋಪ ಮಾಡುತ್ತಿದ್ದೀರಿ ಎಂದು ಎಚ್‌ಡಿಕೆ ಅವರಿಗೆ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಆರ್‌. ಅಶೋಕ್‌, ಸಿ.ಟಿ.ರವಿ, ಅಶ್ವತ್ಥನಾರಾಯಣ ಅವರೂ ಕಿಡಿಕಾರಿದ್ದಾರೆ.

ವಿಎಚ್‌ಪಿ ಖಂಡನೆ
ಇಡೀ ಸಮಾಜ ನಿಧಿ ಸಮರ್ಪಣ ಕಾರ್ಯದಲ್ಲಿ ಭಾವನಾತ್ಮಕವಾಗಿ ತೊಡಗಿರುವಾಗ ಮಾಜಿ ಮುಖ್ಯಮಂತ್ರಿಯ ಬೇಜವಾಬ್ದಾರಿ ಹೇಳಿಕೆ ಸಲ್ಲದು ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ.

ಪೇಜಾವರ ಶ್ರೀ ತಿರುಗೇಟು
ಎಚ್‌ಡಿಕೆ , ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಪೇಜಾವರ ಶ್ರೀಗಳು, ಇದು ಆಧಾರ ರಹಿತ ಆರೋಪ; ನಿಧಿ ಸಂಗ್ರಹ ಪಾರದರ್ಶಕವಾಗಿ ನಡೆಯುತ್ತಿದೆ ಎಂದಿದ್ದಾರೆ. ಪ್ರತಿಯೊಬ್ಬ ರಾಮಭಕ್ತನ ಮನೆಯನ್ನು ಸಂಪರ್ಕಿಸಬೇಕು ಎಂಬ ಉದ್ದೇಶದಿಂದ ಭೇಟಿ ನೀಡಿದ ಮನೆ ಗಳನ್ನು ಗುರುತು ಮಾಡಿಕೊಳ್ಳುತ್ತಿದ್ದೇವೆ. ಜನರ ಆಸಕ್ತಿ ನಿರೀಕ್ಷೆಗಿಂತಲೂ ಹೆಚ್ಚಿದೆ. ಕಾರ್ಯಕರ್ತರು ಸಂಪರ್ಕಿಸದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದೇವೆ. ಇದು ನಿಧಿ ಸಮರ್ಪಣೆ ಮಾಡದವರನ್ನು ಗುರುತಿಸುವ ಪ್ರಕ್ರಿಯೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣ ಹೆಸರಿನಲ್ಲಿ ಜನರಿಂದ ನೇರವಾಗಿ ದೇಣಿಗೆ ಸಂಗ್ರಹಕ್ಕೆ ಅನುಮತಿ ನೀಡಿದವರು ಯಾರು? ಸಂಗ್ರಹವಾದ ಹಣದ ಲೆಕ್ಕ ನೀಡುವವರು ಯಾರು? ರಾಮನ ಹೆಸರಿನಲ್ಲಿ ದುರ್ಬಳಕೆಯಾಗಬಾರದು ಎಂಬ ಕಾಳಜಿಯಿಂದ ನನ್ನ ಅಭಿಪ್ರಾಯ ತಿಳಿಸಿದ್ದೇನೆ.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next