ಉಡುಪಿ: ಅಯೋಧ್ಯೆಯಲ್ಲಿ ಪೇಜಾವರ ಮಠದ ದೊಡ್ಡ ಶಾಖಾ ಮಠ ತೆರೆಯುವ ಯೋಜನೆ ಇದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಗುರುಗಳು ಪೇಜಾವರ ಮಠದ ಶಾಖೆಯನ್ನು ಅಯೋಧ್ಯೆಯಲ್ಲಿ ಸ್ಥಾಪಿಸಿದ್ದರು. ಈಗ ಅಲ್ಲಿ ದೊಡ್ಡ ಶಾಖಾ ಮಠ ತೆರೆಯುವ ಯೋಜನೆ ಇದೆ ಎಂದರು.
“ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಟ್ರಸ್ಟ್‌ನ ಸದಸ್ಯರನ್ನಾಗಿ ಮಾಡುವ ಮೂಲಕ ಸರ್ಕಾರ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ಇದು ಗುರುಗಳ ಸೇವೆಗೆ ಸಂದ ಗೌರವ. ಜವಾಬ್ದಾರಿ ನಿರ್ವಹಿಸಲು ಸಮಾಜದ ಎಲ್ಲರ ಸಹಕಾರ ಬೇಕು. ಟ್ರಸ್ಟಿಯಾಗಲು ಒಪ್ಪಿಗೆ ನೀಡಿ ಸ್ವೀಕೃತಿ ಪತ್ರ ಕಳುಹಿಸಿದ್ದೇವೆ. ಕಾರ್ಯ ಯೋಜನೆಗಳು ಮುಂದಿನ ಸಭೆಯಲ್ಲಿ ನಿರ್ಣಯವಾಗಲಿದೆ. ಜಗತ್ತಿನ ಆಶಾಕಿರಣವಾಗಿರುವ ರಾಮಮಂದಿರ ಬೇಗ ಬರಲಿ ಎನ್ನುವುದು ಎಲ್ಲರ ಆಶಯವಾಗಿದೆ. ರಾಮಮಂದಿರ ಭವ್ಯವಾಗಿ ನಿರ್ಮಾಣವಾಗಬೇಕು. ಜಗತ್ತಿನ ಗಮನ ಸೆಳೆಯುವ ಮಂದಿರವಾಗಬೇಕು. ಯಾತ್ರಿಗಳಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎನ್ನುವುದು ವ್ಯಕ್ತಿಗತ ಅಭಿಪ್ರಾಯ. ಎಲ್ಲ ಸದಸ್ಯರ ತೀರ್ಮಾನದಂತೆ ಕಾರ್ಯಯೋಜನೆ ರೂಪುಗೊಳ್ಳಲಿದೆ ಎಂದು ಪುನರುಚ್ಚರಿಸಿದರು.
ಹನುಮಂತ ದೇವರು ಅವತರಿಸಿದ ಕ್ಷೇತ್ರ ಕರ್ನಾಟಕ. ಹಂಪಿಯಲ್ಲಿಯೇ ಗುರುಗಳಿಗೆ ಸನ್ಯಾಸಾಶ್ರಮವಾಯಿತು. ಮಧ್ವಾಚಾರ್ಯರು ಹನುಮಂತನ ಅವತಾರ. ಇದು ಆಂಜನೇಯನ ಸೇವೆಗೆ ಸಿಕ್ಕ ಗೌರವವೆಂದು ಭಾವಿಸುತ್ತೇನೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಂತರ ಅಭಿಪ್ರಾಯ ಪಡೆಯುತ್ತೇನೆ ಎಂದರು.