Advertisement
ಪೇಜಾವರ ಶ್ರೀಗಳವರು ವಿಶ್ವಾಸಾರ್ಹ ವ್ಯಕ್ತಿಗಳನ್ನು ನಿಯೋಜಿಸಿ ಜನರ ನಿಜವಾದ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಸೂಚಿಸಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಸರಕಾರದ ತಪ್ಪು ನಿರ್ಧಾರದಿಂದ ಗಿರಿಜನರಲ್ಲಿ ಅಭದ್ರತೆ, ಅತಂತ್ರ ಭಾವನೆ ಮೂಡಿರುವ ಬಗ್ಗೆ ವರದಿಗಳು ಬೆಳಕು ಚೆಲ್ಲಿದವು. ಕಾಡಿನ ಜನರಿಗೆ ಮುಖ್ಯವಾಗಿ ಬೇಕಾದದ್ದು ಜೀವನದಲ್ಲಿ ಭದ್ರತೆ. ಅವರ ಜೊತೆ ಭಾವನಾತ್ಮಕವಾಗಿ ನಿಲ್ಲಬೇಕು. ಶಿಕ್ಷಣ, ರಸ್ತೆ, ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಒಟ್ಟಿನಲ್ಲಿ ಅವರು ಅತಂತ್ರರಲ್ಲ, ಅವರ ಜೊತೆ ನಾವಿದ್ದೇವೆ ಎಂಬ ಮನೋಸ್ಥೈರ್ಯ ಮೂಡಬೇಕು. ಇದನ್ನೇ ಕಳೆದ ಒಂದೆರಡು ದಶಕಗಳಿಂದ ಪೇಜಾವರ ಶ್ರೀಗಳು ನಡೆಸುತ್ತಿದ್ದರು.
Related Articles
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸರಹದ್ದು ಗ್ರಾಮವಾದ (ಮೂಡಿಗೆರೆ ತಾಲೂಕಿನ ಗಡಿ) ಮುಂಡಗಾರು ಗಿರಿಜನ ಗ್ರಾಮ (ಉಡ್ತಾಳ್-ಮುಂಡಗಾರ್). ಮಂಗಳೂರು-ಶೋಲಾಪುರ ರಾ.ಹೆ. ಶೃಂಗೇರಿ ತಾಲೂಕಿನ ಮಾತೊಳ್ಳಿಯಿಂದ ಈ ಗ್ರಾಮಕ್ಕೆ 13 ಕಿ.ಮೀ. ಎನ್ನುತ್ತಾರೆ. ಇದನ್ನು ಕ್ರಮಿಸುವುದು ಮಾತ್ರ ಬಲು ಕಷ್ಟ. ಇಂತಹ ಊರುಗಳ ಕಾಡಿನ ಗಿರಿಜನರಿಗೆ ನಾಡಿನ ಕ್ರಿಯಾಶೀಲ ಸಂತ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಾವೂ ನಿಮ್ಮ ಜೊತೆ ಇದ್ದೇವೆ ಎಂಬ ಭರವಸೆ ಮಾತುಗಳನ್ನಾಡಿದ್ದು ಮಾತ್ರವಲ್ಲ ಕಳೆದ ಒಂದೆರಡು ದಶಕಗಳಿಂದ ನಕ್ಸಲ್ ಪೀಡಿತ ಗ್ರಾಮಗಳನ್ನು ಆಯ್ದು ಅಲ್ಲಿಗೆ ನೆರವು ನೀಡುವ ಯೋಜನೆ ನಡೆಸಿ ಭರವಸೆ ಮಾತುಗಳನ್ನು ಅನುಷ್ಠಾನಕ್ಕೆ ತಂದರು..
Advertisement
ಸಾಂಪ್ರದಾಯಿಕ ಮಠಗಳ ಸ್ವಾಮೀಜಿ ಮಧ್ಯಾಹ್ನದ ಪೂಜೆ ಮಾಡಬೇಕಾದರೆ ನಿಯಮಾನುಸಾರ ಒಂದೋ ಬಾವಿ ಅಥವಾ ಕೊಳವೆಬಾವಿ ಬೇಕು. ಅಂದರೆ ಭೂಮಿಯಿಂದ ನೇರವಾಗಿ ತೆಗೆದ ನೀರು ಪೂಜೆಗೆ ಬಳಸಲು ಅರ್ಹ. ಮುಂಡಗಾರು ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಶ್ರೀಗಳು ವಾಸ್ತವ್ಯ ಮಾಡಿದ್ದ ಗಿರಿಜನ ಸಮುದಾಯದ ವೆಂಕಣ್ಣ ಗೌಡ್ಲು ಅವರಿಗೆ ನಿರ್ಮಿಸಿಕೊಟ್ಟ ಮನೆಯಲ್ಲಿ ಬಾವಿ, ಕೊಳವೆಬಾವಿ ಇರಲಿಲ್ಲ. ಹರಿಯುವ ತೊರೆ ಬೇಸಗೆಯಿಂದ ಬತ್ತಿ ಹೋಗಿತ್ತು. ಇದಕ್ಕೆ ಪರಿಹಾರವಾಗಿ ಶ್ರೀಪಾದರು ಆಯ್ದುಕೊಂಡದ್ದು ನದಿ ಝರಿಯ ಪಕ್ಕ. ನದಿ ನೀರಿನ ಸ್ನಾನ, ಸರೋವರದಲ್ಲಿ ಮುಳುಗುಹಾಕಿ ಸ್ನಾನ ಭಾರತೀಯ ಪರಂಪರೆಗೆ ಹೊಸತಲ್ಲವಾದರೂ ಈಗ ಬಹುತೇಕ ಎಲ್ಲರಿಗೂ ಈ ಸಂಸ್ಕೃತಿ ನೆನಪು ಹೋಗಿದೆ. ಮುಂಡಗಾರು ಗ್ರಾಮದಲ್ಲಿ ಹರಿಯುವ ನದಿ ನೀರಿನಲ್ಲಿ ಸ್ನಾನ ಮಾಡಿ ಪಕ್ಕದ ಜಾಗದಲ್ಲಿ ಬೆಳ್ಳಿಯ ಪೀಠ ಹಾಕಿ ಪಟ್ಟದ ದೇವರನ್ನು ಶ್ರೀಪಾದರು ಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಜತೆ ಪೂಜಿಸಿದರು. ಅಲ್ಲೇ ಅನ್ನ (ಉರುಳಿ) ತಯಾರಿ, ನೈವೇದ್ಯ ನಡೆಯಿತು. ಗಿರಿಜನರು ಸ್ವಾಮೀಜಿಯವರಿಗಾಗಿ ತಾವೇ ತಯಾರಿಸಿದ ಬೆತ್ತದ ಬುಟ್ಟಿಯಲ್ಲಿ ತಾಜಾ ಜೇನುತುಪ್ಪವನ್ನು ಸಮರ್ಪಿಸಿ ಧನ್ಯತೆ ಕಂಡರು.
ಎಂಡೇಂಜರ್ ಸ್ಪೀಸಿಸ್
ಪರಿಸರವಿಜ್ಞಾನದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ‘ಎಂಡೇಂಜರ್ ಸ್ಪೀಸಿಸ್’ ಎನ್ನುತ್ತಾರೆ. ‘ಟ್ಯಾಕ್ಸೋನೊಮಿಸ್ಟ್ಸ್’ (ವರ್ಗೀಕರಣಶಾಸ್ತ್ರಜ್ಞರು) ಕಡಿಮೆಯಾಗುತ್ತಿರುವಂತೆ ಸಾಮಾಜಿಕ ಕಳಕಳಿ ಇರುವ ಶ್ರೀಪೇಜಾವರ ಸ್ವಾಮೀಜಿಯಂತಹ ಅಪರೂಪದ ವರ್ಗ ಸಮಾಜದಲ್ಲಿ ಕಡಿಮೆಯಾಗುತ್ತಿದೆ. ಇಂತಹ ಸಂತರ ಸಂತತಿ ಹೆಚ್ಚಿಗೆಯಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ಗಂಗಾಧರ ಕುಷ್ಟಗಿಯವರು ಮುಂಡಗಾರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಶಿಸಿದ್ದರು.