ಬೆಂಗಳೂರು: ಜನ ಸೇವೆಯೇ ಜನಾರ್ಧನ ಸೇವೆ ಎಂದು ಕೊಂಡಿದ್ದ ಪೇಜಾವರ ಶ್ರೀಗಳು ದಲಿತರ ಮತ್ತು ಶೋಷಿತರ ಒಳಿತಿಗಾಗಿ ಶ್ರಮಿಸಿದ್ದರು. ಅವರ ಜೀವನ ನಮಗೆ ದಾರಿ ದೀಪ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಪೇಜಾವರ ಶ್ರೀ ವಿಶ್ವೇಶ ತೀರ್ಥರಿಗೆ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧ್ಯಾತ್ಮ ಮತ್ತು ಸಮಾಜ ಸೇವೆಯ ಸಂಗಮವಾಗಿದ್ದ ಶ್ರೀಗಳು ಜೀವನ ಪೂರ್ತಿ ದಲಿತರು ಮತ್ತು ಶೋಷಿತರ ಒಳಿತಿಗಾಗಿ ಶ್ರಮಿಸಿದರು. ನಾಡು, ನುಡಿ ಹಾಗೂ ಧರ್ಮದ ವಿಚಾರದಲ್ಲಿ ಅವರು ಮಾರ್ಗ ದರ್ಶಕರಂತಿದ್ದರು ಎಂದು ಹೇಳಿದರು. ಸಂಕಷ್ಟಗಳಿಗೆ ಮಿಡಿಯುತ್ತಿದ್ದ ಅವರು ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಾಜ್ಯವಷ್ಟೇ ಅಲ್ಲ, ಆಂಧ್ರಪದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿ ಹಲವು ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಕಣ್ಣೀರು ಒರೆಸಿದರು ಎಂದು ತಿಳಿಸಿದರು.
ರಾಮ ಜನ್ಮಭೂಮಿ ಹೋರಾಟದಲ್ಲಿ ಶ್ರೀಗಳ ಕೊಡುಗೆ ಅಪಾರ. ಶ್ರೀರಾಮ ಸೇತು ಆಂದೋಲನ, ಗೋಹತ್ಯೆ ನಿಷೇಧ, ಅಸ್ಪೃಶ್ಯತೆ ನಿವಾರಣೆ, ಪಶ್ಚಿಮ ಘಟ್ಟ- ನೇತ್ರಾವತಿ ನದಿ ಸಂರಕ್ಷಣೆ ಸೇರಿದಂತೆ ಅನೇಕ ಜನಪರ ಯೋಜನೆಗಳ ಆಂದೋಲನಗಳಲ್ಲಿ ಸಕ್ರಿಯ ವಾಗಿ ಭಾಗವಹಿಸಿದ್ದರು ಎಂದು ಹೇಳಿದರು.
ಶ್ರೀಗಳು ಸ್ಥಾಪಿಸಿದ ಪೂರ್ಣಪ್ರಜ್ಞ ವಿದ್ಯಾಪೀಠ ಇಂದು ರಾಷ್ಟ್ರೀಯ ಸಂಸ್ಥೆಯಾಗಿ ಬೆಳೆದಿದೆ. ಶ್ರೀಕೃಷ್ಣನಲ್ಲಿ ಐಕ್ಯರಾಗಿರುವ ಶ್ರೀಗಳ ವಿಚಾರಧಾರೆ ನಮಗೆ ಚೈತನ್ಯವಾಗಲಿ. ಅವರ ಉತ್ತರಾಧಿಕಾರಿಯಾಗಿರುವ ಈಗಿನ ಶ್ರೀಗಳು ಜನ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿದು ಸಾಗಲಿ ಎಂದು ಹೇಳಿದರು.
ಯೋಗ ಗುರು ಬಾಬಾ ರಾಮ್‌ದೇವ್ ಮಾತನಾಡಿ, ಪೇಜಾವರ ಶ್ರೀಗಳದ್ದು ಬ್ರಹ್ಮ ಸದೃಶ್ಯ ವ್ಯಕ್ತಿತ್ವ. ಧರ್ಮವನ್ನು ತಮ್ಮ ಜೀವನದಲ್ಲಿ ಆಚರಣೆಗೆ ಮಾಡಿದ ಅವರು ಪ್ರೇಮ, ವಾತ್ಸಲ್ಯ, ಕರುಣೆಯನ್ನು ಜನರಿಗೆ ನೀಡಿದ್ದಾರೆ ಎಂದು ಹೇಳಿದರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಇತರರಿದ್ದರು.