ಬೆಂಗಳೂರು: ಪುತ್ತಿಗೆ ಶ್ರೀಪಾದರು ನಡೆದಾಡುವ ಭಗವದ್ಗೀತೆ. ಭಗವಂತನ ಸಂದೇಶವನ್ನು ವಿದೇಶದಲ್ಲಿನ ಭಕ್ತರಿಗೂ ಸಾರಿದವರು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.
ಗುರುವಾರ ನಗರದ ಬಸವನಗುಡಿ ರಾಮಕೃಷ್ಣ ಆಶ್ರಮದ ಸಮೀಪದ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಬೆಂಗಳೂರು ಅಭಿಮಾನಿಗಳು ಮತ್ತು ಶಿಷ್ಯವೃಂದದವರು ಆಯೋಜಿಸಿದ್ದ ಗುರು ವಂದನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀಗಳದ್ದು ಮೇರು ವೈಕ್ತಿತ್ವ. ಅವರ ಮುಂದೆ ನಾವೆಲ್ಲರೂ ಕುಬjರಾಗಿ ಕಾಣುತ್ತೇವೆ. ಸುಜ್ಞಾನೇಂದ್ರ ತೀರ್ಥ ಅನಂತರದಲ್ಲಿ ಮಠವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ವಿದ್ಯಾ ಗುರುಗಳಾದ ಶ್ರೀ ವಿದ್ಯಾಮಾನ್ಯರಿಂದ ಶಿಕ್ಷಣವನ್ನು ಪಡೆದುಕೊಂಡಿದ್ದರು. ಅವರಲ್ಲಿ ವಿಶಿಷ್ಟವಾದ ವ್ಯಕ್ತಿತ್ವದ ಮೂಲಕ ಭಗವಂತನ ಸಂದೇಶವನ್ನು ನಿರಂತರವಾಗಿ ಜಗತ್ತಿನಾದ್ಯಂತ ಸಾರುತ್ತಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತಿಗೆ ಮಠಾಧೀಶರು, ಪೇಜಾವರ ಶ್ರೀ ವಿಶ್ವೇಶತೀರ್ಥರು ಹಾಗೂ ವಿಶ್ವಪ್ರಸ್ನನ ಶ್ರೀಪಾದರ ಆದರ್ಶ ಗುರು ಶಿಷ್ಯರು. ಮೊದಲ ಬಾರಿಗೆ ಪರ್ಯಾಯ ಪೀಠಾರೋಹಣ ಅವಕಾಶ ಸಿಕ್ಕಾಗ, ತಮ್ಮ ಗುರುಗಳ ಪಂಚಮ ಪರ್ಯಾಯ ಪೂರ್ಣವಾಗಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದರು. ಅದರಂತೆ ಅವರು ನಡೆದುಕೊಂಡರು. ಆ ಮೂಲಕ ಇಡೀ ಗುರು-ಶಿಷ್ಯ ಪರಂಪರೆಗೆ ಮಾದರಿಯಾಗಿದ್ದಾರೆ ಎಂದರು.
ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಮಾತನಾಡಿ, ಹೊಸ ವಿಚಾರವನ್ನು ಆಳವಡಿಸಿಕೊಳ್ಳಲು ನಾವು ಕೆಲವೊಮ್ಮೆ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಬೇಕಾಗುತ್ತದೆ. ಅಂತಹ ಮಹತ್ವದ ಕೆಲಸಕ್ಕೆ ಪುತ್ತಿಗೆ ಶ್ರೀಪಾದರ ಕೈ ಹಾಕಿದ್ದಾರೆ. ಸನಾತನ ಧರ್ಮದಲ್ಲಿ ವಿದೇಶ ಪ್ರಯಾಣಕ್ಕೆ ನಿಷೇಧವಿದೆ. ಆದರೆ ಶ್ರೀಗಳು ಈ ಧಾರ್ಮಿಕ ಕಟ್ಟುಪಾಡುಗಳನ್ನು ಬದಿಗಿಟ್ಟು ಶ್ರೀ ಕೃಷ್ಣನ ಸಂದೇಶವನ್ನು ಜಗತ್ತಿನಾದ್ಯಂತ ಸಾರಿದವರು ಎಂದರು.
ಶ್ರೀಪಾದರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಡಾ| ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಸಂಪಾದನೆಯ “ಅರವತ್ತು’ ಕೃತಿ ಬಿಡುಗಡೆಗೊಳಿಸಲಾಯಿತು. ಲಕ್ಷ್ಮೀದಾಸ್ ಅವರಿಂದ ವೀಣಾ ವಾದನ, ಲೀಲಾ ನಾಟ್ಯ ವೃಂದದ ನಾಟ್ಯ ನಮನ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಿತು.
ಶಾಸಕ ಎಲ್.ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ಬಿ. ವೆಂಕಟೇಶ್, ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಉಪಸ್ಥಿತರಿದ್ದರು. ಶ್ರೀಪಾದರ ಬೆಂಗಳೂರು ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರೊ| ಕೆ.ಇ. ರಾಧಾಕೃಷ್ಣ ಸ್ವಾಗತಿಸಿದರು.