Advertisement

ಸಮಾಜಮುಖಿ ಕಾರ್ಯವಷ್ಟೇ ಶಾಶ್ವತ: ಪೇಜಾವರ ಶ್ರೀ

09:07 PM Jul 07, 2022 | Team Udayavani |

ತುಮಕೂರು: ನಾವು ಭೂಮಿಗೆ ಬರುವಾಗ ಏನನ್ನೂ ತರುವುದಿಲ್ಲ ಮತ್ತು  ಹೋಗುವಾಗ ಏನನ್ನೂ ಒಯ್ಯುವುದಿಲ್ಲ. ಭಗವಂತನೇ ನಮಗೆ ಎಲ್ಲವನ್ನೂ ನೀಡುತ್ತಾನೆ. ಜೀವನದಲ್ಲಿ ಮಾಡಿದ ಸಮಾಜಮುಖೀ ಕಾರ್ಯಗಳು ಮಾತ್ರವೇ ಶಾಶ್ವತವಾಗಿರುತ್ತವೆ ಎಂದು ಉಡುಪಿ ಪೇಜಾವರ  ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

Advertisement

ನಗರದ ಕೆ. ಆರ್‌. ಬಡಾವಣೆಯಲ್ಲಿರುವ ಶ್ರೀಕೃಷ್ಣ ಮಂದಿರದ ನವೀಕೃತ ಕಟ್ಟಡ‌ ಹಾಗೂ ಲಿಫ್ಟ್ ಉದ್ಘಾಟನೆಯನ್ನು ಗುರುವಾರ ನೆರವೇರಿಸಿದ ಬಳಿಕ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಇಡೀ ಜಗತ್ತನ್ನು ಒಂದು ಅಶ್ವತ್ಥ ವೃಕ್ಷಕ್ಕೆ ಹೋಲಿಸಲಾಗಿದೆ. ಆ ವೃಕ್ಷದ ರೆಂಬೆ, ಕೊಂಬೆಗಳು ಆಕಾಶದೆತ್ತರದಲ್ಲಿದ್ದರೂ ಅವುಗಳಿಗೆ ಬೇಕಾದ ಆಹಾರವನ್ನು ಬುಡದಲ್ಲಿಯೇ ನೀಡಬೇಕು. ನಾವು ಕೂಡ ಎಷ್ಟೇ ಎತ್ತರಕ್ಕೆ ಬೆಳೆದರೂ ವೃಕ್ಷದ ಬುಡದಂತಿರುವ ಭಗವಂತನಿಗೆ ಎಲ್ಲವನ್ನು ಅರ್ಪಿಸಿಕೊಂಡರೆ, ಆತ ನಮಗೆ ಹೂವು, ಹಣ್ಣು, ಚಿಗುರಿನ ರೂಪದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾನೆ ಎಂದರು.

ಟೂಡಾ ಅಧ್ಯಕ್ಷ  ಎಚ್‌. ಜಿ. ಚಂದ್ರಶೇಖರ್‌ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, 12 ವರ್ಷಗಳ ಹಿಂದೆ ಹಿರಿಯ ಶ್ರೀಗಳಾದ ಶ್ರೀವಿಶ್ವೇಶ ತೀರ್ಥರ ಮಾರ್ಗದರ್ಶನದಂತೆ ಶ್ರೀಕೃಷ್ಣನ ಪ್ರತಿಷ್ಠಾಪನೆಯಾಗಿತ್ತು. ಈಗ ಮಂದಿರದ ಮೇಲ್ಭಾಗದಲ್ಲಿ ನೂತನ ಮಂದಿರ ನಿರ್ಮಾಣ ಮಾಡಿ, ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಗೌರವ ಸಲಹೆಗಾರ ಗೋಪಾಲ ರಾವ್‌, ಅಧ್ಯಕ್ಷ ಶ್ರೀನಿವಾಸ್‌ ಹತ್ವಾರ್‌, ಜಿ. ಕೆ. ಶ್ರೀನಿವಾಸ್‌, ಕಾರ್ಯದರ್ಶಿ ಸೂರ್ಯನಾರಾಯಣ ರಾವ್‌, ನಾಗರಾಜ ಧನ್ಯ, ವ್ಯವಸ್ಥಾಪಕ  ಜನಾರ್ದನ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮಕ್ಕೂ ಮುನ್ನ  ಶ್ರೀಕೃಷ್ಣ ಮೂರ್ತಿಗೆ ತೀರ್ಥಹಳ್ಳಿಯ ಶ್ರೀರಘುವರೇಂದ್ರ ತೀರ್ಥ ಶ್ರೀಗಳಿಂದ  ತಪ್ತ ಮುದ್ರಾಧಾರಣೆ ಜರಗಿತು.

ಹೆಗ್ಗಡೆ ಸೇವೆಗೆ ಸಂದ ರಾಜ್ಯಸಭೆ ಸದಸ್ಯತ್ವ :

ಪ್ರಧಾನಿ ನರೇಂದ್ರ ಮೋದಿ ಅವರು  ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಅರ್ಥಿಕ ಸೇವೆಯನ್ನು ಪರಿಗಣಿಸಿ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಅವರ ಸೇವೆ ರಾಷ್ಟ್ರಕ್ಕೆ ಸಲ್ಲಿಕೆಯಾಗುವಂತೆ ಮಾಡಿದ್ದಾರೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕರ್ನಾಟಕದಿಂದ ಹೋಗಿರುವ ಶಿಲೆಯಿಂದ ರಾಮಮಂದಿರದ ಪೀಠದ ಕಾಮಗಾರಿ ಆರಂಭಗೊಂಡಿದೆ. ಮುಂದಿನ ಉತ್ತರಾಯಣ ಪುಣ್ಯಕಾಲದ ವೇಳೆ ಗರ್ಭಗುಡಿಯ ಕೆಲಸ ಆರಂಭಗೊಳ್ಳಲಿದೆ. ಇದುವರೆಗೂ ಭೂಮಿ ಗುರುತಿಸುವುದೇ ದೊಡ್ಡ ಜವಾಬ್ದಾರಿಯಾಗಿತ್ತು ಎಂದರು.

ಹಿರಿಯ ಶ್ರೀಗಳು ಶೈಕ್ಷಣಿಕ, ಧಾರ್ಮಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಅದನ್ನು ನನಸು ಮಾಡುವ ದೃಷ್ಟಿಯಿಂದ ಒಂದನೇ ತರಗತಿಯಿಂದ ಪದವಿವರೆಗಿನ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜತೆಗೆ 100 ಬೆಡ್‌ಗಳ ಉಚಿತ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next