ನವದೆಹಲಿ: ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ವರದಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ತಾಂತ್ರಿಕ ಮತ್ತು ಮೇಲ್ವಿಚಾರಣಾ ಸಮಿತಿಗೆ ಮತ್ತಷ್ಟು ಕಾಲಾವಕಾಶ ದೊರೆತಿದೆ.
ಬೇಹುಗಾರಿಕೆಗೆ ಒಳಪಟ್ಟಿದೆ ಎನ್ನಲಾದ 29 ಮೊಬೈಲ್ ಫೋನ್‌ಗಳನ್ನು ಪರೀಕ್ಷಿಸಲಾಗಿದ್ದು, ಪತ್ರಕರ್ತರು ಸೇರಿದಂತೆ ಕೆಲವು ವ್ಯಕ್ತಿಗಳ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ.
ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಮೇ ಅಂತ್ಯದಲ್ಲಿ ತನಿಖೆ ಪೂರ್ಣಗೊಳ್ಳಲಿದೆ. ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಸಮಿತಿ ಕೋರಿಕೊಂಡಿದೆ. ಅದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಸಮ್ಮತಿಸಿದೆ. ಹೀಗಾಗಿ ಜೂನ್ ತಿಂಗಳ ಮಧ್ಯಭಾಗದಲ್ಲಿ ಅಂತಿಮ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ:ಗುಜರಾತ್, ಹಿಮಾಚಲದಲ್ಲೂ ಕಾಂಗ್ರೆಸ್ ಸೋಲು ಖಚಿತ: ಪ್ರಶಾಂತ್ ಕಿಶೋರ್
“ತಾಂತ್ರಿಕ ಸಮಿತಿ ನಡೆಸಬೇಕಾದ ಪ್ರಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ಮುಗಿಸಲು ಪ್ರಯತ್ನಿಸಿ. ತಾಂತ್ರಿಕ ಸಮಿತಿಯ ವರದಿಯನ್ನು ಮೊದಲು ಮೇಲ್ವಿಚಾರಣಾ ಜಡ್ಜ್ ಪರಿಶೀಲಿಸಬೇಕು’ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈಗೆ ಮುಂದೂಡಿತು.