ನವದೆಹಲಿ: ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂ ಕೋರ್ಟ್, “ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವಂತಹ ಯಾವುದೇ ವಿಚಾರವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುವುದು ಬೇಕಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಪೆಗಾಸಸ್ ಪ್ರಕರಣದ ಕುರಿತು ಸ್ವತಂತ್ರ ತನಿಖೆಯಾಗಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಈ ರೀತಿ ಹೇಳಿದೆ.
ಇದನ್ನೂ ಓದಿ:‘ತಾಲಿಬಾನ್ ಗಳಿಂದ ಹತಳಾಗಲು ಕಾಯುತ್ತಿದ್ದೇನೆ’ : ಅಫ್ಘಾನ್ ಪ್ರಥಮ ಮಹಿಳಾ ಮೇಯರ್
10 ದಿನಗಳ ನಂತರ ಮುಂದಿನ ವಿಚಾರಣೆ ನಡೆಸಲಿದ್ದು, ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಆಗ ಪರಿಶೀಲಿಸುತ್ತೇವೆ ಎಂದೂ ನ್ಯಾಯಪೀಠ ಹೇಳಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈಗಾಗಲೇ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಮುಚ್ಚಿಡಲು ಏನೂ ಇಲ್ಲ ಎಂದೂ ಹೇಳಿದ್ದೇವೆ. ಆದರೆ, ಈ ವಿಚಾರದಲ್ಲಿ ಕೆಲವೊಂದು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಅಂಶಗಳೂ ಇವೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಆಗದು. ತಜ್ಞರ ಸಮಿತಿಯು ಅದರ ವರದಿಯನ್ನು ಸುಪ್ರೀಂಗೆ ಸಲ್ಲಿಸಲಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವಂಥ ಯಾವುದೇ ವಿಚಾರವನ್ನೂ ನೀವು ಬಹಿರಂಗಪಡಿಸಬೇಕಾಗಿಲ್ಲ ಎಂದು ಹೇಳಿತು.