ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಿಂದ ವಯಾಡಕ್ಟ್ ಸಮಗ್ರತೆ ಪರಿಶೀಲಿಸಲು ಸಾಮರ್ಥ್ಯ ಪರೀಕ್ಷೆ ಹಿನ್ನೆಲೆಯಲ್ಲಿ ತುಮಕೂರು ಭಾಗದಿಂದ ಸಿಲಿಕಾನ್ ಸಿಟಿಯ ಪ್ರವೇಶದ್ವಾರ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಮಂಗಳವಾರ ತಡರಾತ್ರಿಯಿಂದ ನಾಲ್ಕು ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ಗೊರಗುಂಟೆಪಾಳ್ಯ ಸಮೀಪದ ಸಿಎಂಟಿಎ ಜಂಕ್ಷನ್‌ನಿಂದ ಕೆನ್ನಮೆಟಲ್ ವಿಡಿಯಾವರೆಗಿನ ನಾಲ್ಕೈದು ಕಿ.ಮೀ. ಮೇಲ್ಸೇತುವೆ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಈ ಮೊದಲು ಮೇಲು ಸೇತುವೆ ಸಮಸ್ಯೆಯಿಂದಾಗಿ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ, ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದೀಗ 4 ದಿನಗಳ ಕಾಲ ಎಲ್ಲಾ ಮಾದರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದರಿಂದ ಸೇತುವೆ ಪಕ್ಕದ ಎರಡು ಮುಖ್ಯರಸ್ತೆಗಳು ಹಾಗೂ ಸರ್ವಿಸ್ ರಸ್ತೆಗಳಲ್ಲೇ ವಾಹನ ಚಲಿಸುವುದರಿಂದ ದಟ್ಟಣೆ ಹೆಚ್ಚಿದೆ.
ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ: ಎಲ್ಲಾ ಮಾದರಿ ವಾಹನಗಳು ಮೇಲು ಸೇತುವೆ ಪಕ್ಕದ ರಸ್ತೆಗಳಲ್ಲೇ ಓಡಾಡುವುದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಕಚೇರಿ, ಕಾರ್ಖಾನೆಗಳಿಗೆ ತೆರಳುವವರು ಸಂಚಾರ ದಟ್ಟಣೆಯಿಂದ ಬುಧವಾರ ಪರದಾಡಿದರು. ಬೆಳಗ್ಗೆ ಏಳೂವರೆಯಿಂದಲೇ ಸಂಚಾರ ದಟ್ಟಣೆ ಬಿಸಿ ಒಂದಷ್ಟು ತಟ್ಟಲಾರಂಭಿಸಿತು. 9 ಗಂಟೆಯಾಗುತ್ತಿದ್ದಂತೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಯಶವಂತಪುರದ ಗೋವರ್ಧನ್ ಚಿತ್ರಮಂದಿರ ಭಾಗದಿಂದಲೂ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡಿದರು. ತುಮಕೂರು ಕಡೆ ಮಾಕಳಿ, ಪಾರ್ಲೆಜಿ ಬಿಸ್ಕೆಟ್ ಕಾರ್ಖಾನೆವರೆಗೂ ಸಂಚಾರ ದಟ್ಟಣೆ ಕಂಡು ಬಂತು.
ಪ್ರಮುಖವಾಗಿ ಪೀಕ್ ಅವರ್‌ನಲ್ಲಿ ಗಂಟೆಗೆ ಕನಿಷ್ಠ 20-25 ಸಾವಿರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇನ್ನು ಈ 4-5 ಕಿ.ಮೀ. ರಸ್ತೆಯಲ್ಲಿ ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ, 8ನೇ ಮೈಲಿ ಜಂಕ್ಷನ್‌ಗಳು ಬರುತ್ತವೆ. ಸಿಗ್ನಲ್ ಬಿದ್ದಾಗ ಪ್ರತಿ ಸಿಗ್ನಲ್‌ನಲ್ಲಿ ಕನಿಷ್ಠ 600-700 ವಾಹನಗಳು ನಿಲ್ಲುತ್ತವೆ. ಈ ಪ್ರಮಾಣದ ವಾಹನಗಳು ಪ್ರತಿ ಸಿಗ್ನಲ್ ದಾಟಲು ಕನಿಷ್ಠ 5-8 ನಿಮಿಷಗಳು ಬೇಕಾಗುತ್ತದೆ. ಹೀಗೆ ಐದು ಜಂಕ್ಷನ್ ದಾಟಿ ಮತ್ತೂಂದು ಮೇಲು ಸೇತುವೆ ಹತ್ತಲು ಕನಿಷ್ಠ 25-30 ನಿಮಿಷ ಬೇಕಾಗುತ್ತದೆ. ಆದರಿಂದ ಸಾಮಾ ನ್ಯವಾಗಿ ಸಂಚಾರ ದಟ್ಟಣೆ ದ್ವಿಗುಣಗೊಂಡಿದೆ.
ಹೀಗಾಗಿ ಪ್ರತಿ ಸಿಗ್ನಲ್‌ನಲ್ಲಿ ಸೆಕೆಂಡ್‌ಗಳನ್ನು ಹೆಚ್ಚು ಮಾಡುವುದರ ಜತೆಗೆ, ಟ್ರಾಫಿಕ್ ಜಾಮ್‌ಗೆ ಅನುಗುಣವಾಗಿ ಸುಗಮ ಸಂಚಾರಕ್ಕೆ ಅವಕಾಶ ನೀಡಲು ಪ್ರತಿ ಸಿಗ್ನಲ್‌ನಲ್ಲಿ ಸಂಚಾರ ವಿಭಾಗದ ಇಬ್ಬರು ಎಎಸ್‌ಐ ಅಥವಾ ಪಿಎಸ್‌ಐ ಹಾಗೂ ಕಾನ್‌ಸ್ಟೆàಬಲ್‌ಗಳನ್ನು ನಿಯೋಜಿಸಲಾಗಿದೆ. ಸಾಧ್ಯವಾದಷ್ಟು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಭಾರೀ ತೂಕದ 16 ಟ್ರಕ್‌ಗಳಿಂದ ಪರಿಶೀಲನೆ
ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಈ ಹಿಂದೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ 2021ರ ಡಿಸೆಂಬರ್‌ನಿಂದ ಭಾರೀ ವಾಹನಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಸಲಹೆ ನೀಡಿದ್ದರು. ಹೀಗಾಗಿ ಅಂದಾಜು ಮೂರು ವರ್ಷಗಳಿಂದ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.
ಮಂಗಳವಾರ ತಡರಾತ್ರಿ 11 ಗಂಟೆಯಿಂದಲೇ ಪಾರ್ಲೆಜಿ ಭಾಗದಿಂದ ಮೇಲು ಸೇತುವೆಯ ಒಂದು ಪಿಲ್ಲರ್ ಮೇಲೆ ಮಣ್ಣು ಹಾಗೂ ಇತರೆ ವಸ್ತುಗಳು ತುಂಬಿದ 8 ಟ್ರಕ್ ಮತ್ತು ಇನ್ನೊಂದು ಪಿಲ್ಲರ್ ಮೇಲೆ 8 ಟ್ರಕ್ ನಿಲ್ಲಿಸಿ ಒಟ್ಟಾರೆ ಎರಡು ಪಿಲ್ಲರ್‌ಗಳ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿದೆ.
ಪ್ರತಿ ಒಂದು ಗಂಟೆಗೆ ಎರಡೆರಡು ಟ್ರಕ್‌ಗಳನ್ನು cಸುಹೆಚಿವ ಮೂಲಕ ಪರಿಣಾಮಕಾರಿಯಾಗಿ ಪರೀಕ್ಷೆ ನಡೆಸಲಾಗಿದೆ. ಹೀಗೆ ಪಿಲ್ಲರ್ ತುದಿಯಲ್ಲಿರುವ ಸ್ಪ್ರಿಂಗ್‌ಗಳು ಎಷ್ಟು ಕೆಳ ಭಾಗಕ್ಕೆ ಹೋಗಿವೆ ಎಂಬುದನ್ನು ದಾಖಲಿಸಿಕೊಳ್ಳಲಾಗುತ್ತದೆ. ಜ.17ರ ಬೆಳಗಿನವರೆಗೂ ಹೀಗೆ ಲೋಡ್ ಟೆಸ್ಟಿಂಗ್ ನಡೆದಿದೆ. ಇದೀಗ ಒಟ್ಟು 16 ಟ್ರಕ್‌ಗಳನ್ನು ಜ.18ರ ಮುಂಜಾನೆವರೆಗೂ 24 ಗಂಟೆ ಮೇಲ್ಸೇತುವೆಯಲ್ಲೇ ಬಿಟ್ಟು, ಸಾಮಾರ್ಥ್ಯ ಮತ್ತು ಸ್ಪ್ರಿಂಗ್‌ಗಳನ್ನು ಪರೀಕ್ಷಿಸಲಾಗುತ್ತದೆ.
ಆ ಬಳಿಕ ಹಂತ-ಹಂತವಾಗಿ ಪ್ರತಿ ಟ್ರಕ್‌ಗಳನ್ನು ಮೇಲ್ಸೇತುವೆಯಿಂದ ಕೆಳಗೆ ಇಳಿಸಿ, ಆಗಲೂ ಪಿಲ್ಲರ್‌ನ ಸ್ಪ್ರಿಂಗ್ ಗಳ ಸಾಮಾರ್ಥ್ಯ ಪರಿಶೀಲಿಸಲಾಗುತ್ತದೆ. 4 ದಿನಗಳ ಎಲ್ಲ ವಿವರಗಳನ್ನೂ ಸಮಗ್ರವಾಗಿ ಪರಿಶೀಲಿಸಲಾಗುವುದು. ಒಂದು ವೇಳೆ ಮೇಲ್ಸೇತುವೆಯಲ್ಲಿ ಭಾರೀ ವಾಹನಗಳ ನಿಲುಗಡೆ ಅಥವಾ ಸಂಚಾರ ದಿಂದ ಯಾವುದೇ ತೊಂದರೆ ಇಲ್ಲ ಎಂಬುದು ಖಾತ್ರಿಯಾದರೆ, ಮುಂದಿನ ದಿನಗಳಲ್ಲಿ ಎಲ್ಲ ವಾಹನಗಳಿಗೆ ಸೇತುವೆಯಲ್ಲಿ ಸಂಚರಿಸಲು ಅವಕಾಶ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪರ್ಯಾಯ ಮಾರ್ಗೋಪಾಯ
ನೆಲಮಂಗಲದ ಕಡೆಯಿಂದ ನಗರಕ್ಕೆ ಮೇಲ್ಸೇತುವೆ ರಸ್ತೆಯ ಮೂಲಕ ಬರುವಾಗ ಕೆನ್ನಮೆಟಲ್ ವಿಡಿಯಾ ಬಳಿ ಸೇತುವೆ ಪಕ್ಕದ ಎನ್.ಎಚ್-4ರಸ್ತೆ ಹಾಗೂ ಸರ್ವೀಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು. ಹಾಗೂ ಸಿಎಂಟಿಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಮೇಲ್ಸೇತುವೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಮೇಲು ಸೇತುವೆ ಪಕ್ಕದ ಎನ್.ಎಚ್-4 ರಸ್ತೆ ಹಾಗೂ ಸರ್ವೀಸ್ ರಸ್ತೆಯಲ್ಲಿ ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮೂಲಕ ಸಂಚರಿಸಲು ಅನುವು ಮಾಡ ಲಾಗಿದೆ ಎಂದು ಪೊಲೀಸರು ಮನವಿ ಮಾಡಿದ್ದಾರೆ.