Advertisement

“ಪೆಡ್ರೋ’ಎಂಬ ಪೆಲಿಕನ್‌ ಹಕ್ಕಿ

06:00 AM Nov 01, 2018 | |

ಕನ್ನಡ ಮನಸ್ಸುಗಳಿಗೆ ಹೊರ ಜಗತ್ತಿನ ಇಣುಕು ನೋಟವನ್ನು ನೀಡಿದವರಲ್ಲಿ ಪ್ರಮುಖರು “ಪೂರ್ಣಚಂದ್ರ ತೇಜಸ್ವಿ’. ಪರಿಸರ ವಿಜ್ಞಾನದ ಬಗ್ಗೆ ಹೇಳುತ್ತಲೇ ಸಮಾಜವಿ ಜ್ಞಾನವನ್ನೂ ಕಲಿಸಿದ ಮಾಂತ್ರಿಕ ತೇಜಸ್ವಿ. ಅವರ ಪುಸ್ತಕಗಳು ಕಾಲಯಂತ್ರಗಳಿದ್ದಂತೆ. ಓದಿ ಮುಗಿಸುವಷ್ಟರಲ್ಲಿ ನಾನಾ ದೇಶಗಳಿಗೆ, ನಾನಾ ಕಾಲಗಳಿಗೆ ಪ್ರಯಾಣಿಸಿದ ಅನುಭವವನ್ನು ಅವು ನೀಡುವವು. ಕನ್ನಡದಲ್ಲಿ ಪರಿಸರ ವಿಜ್ಞಾನದ ಕತೆಗಳನ್ನು ಬರೆದ ಮಹನೀಯರಲ್ಲಿ ಬಿ.ಜಿ.ಎಲ್‌. ಸ್ವಾಮಿ, ಶಿವರಾಮ ಕಾರಂತ, ದ.ರಾ. ಬಳುರಗಿ ಮುಂತಾದವರಿದ್ದಾರೆ.

Advertisement

ಥೇರಾ ದ್ವೀಪದ ಸುತ್ತ ಗ್ರೀಸ್‌ ದೇಶದವರೆಗೂ ಹಲವಾರು ದ್ವೀಪಗಳಿವೆ. ಒಂದಾನೊಂದು ಕಾಲದಲ್ಲಿ, ಗ್ರೀಸ್‌ ಎಂದರೆ ಗ್ರೀಕ್‌ ಸಾಮ್ರಾಜ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಇವುಗಳಲ್ಲಿ ಹಲವು ದ್ವೀಪಗಳು ಸಮುದ್ರ ಮಾರ್ಗದ ಮುಖ್ಯ ಪಟ್ಟಣಗಳೂ, ವಾಣಿಜ್ಯ ಕೇಂದ್ರಗಳೂ ಆಗಿದ್ದವು. ಸಾಂಟರೋನಿ ಜ್ವಾಲಾಮುಖಿ ಆಸ್ಫೋಟನೆಯೊಂದಿಗೆ ಸುತ್ತಮುತ್ತಲ ದೂರದೂರದ ದ್ವೀಪಗಳ ನಾಗರೀಕತೆಗಳೂ ನಿರ್ನಾಮವಾದವು. ಬಹುಶಃ ಈ ಆಸ್ಫೋಟನೆಯಲ್ಲಿ ಎದ್ದ ಭೀಕರ ಟೈಡಲ್‌ ಅಲೆಗಳೇ ಇದಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸಾಂಟರೋನಿ ಆಸ್ಫೋಟನೆಯ ಸಂದರ್ಭದಲ್ಲಿ ಕಡಿಮೆ ಎಂದರೆ ಇನ್ನೂರು ಅಡಿ ಎತ್ತರದ ಟೈಡಲ್‌ ಅಲೆಗಳು ಎದ್ದಿರಬೇಕು. ಚಿಕ್ಕ ಚಿಕ್ಕ ದ್ವೀಪಗಳಲ್ಲಿ ಕಡಲತಡಿಯಲ್ಲೇ ನಗರಗಳನ್ನು ನಿರ್ಮಿಸಿದ್ದರಿಂದ ಎತ್ತರದ ಪರ್ವತಗಳಂತೆ ನುಗ್ಗಿ ಬಂದ ಈ ಅಲೆಗಳು ಒಂದೇ ಏಟಿಗೆ ಅಲ್ಲಿನ ನಗರಗಳನ್ನೂ, ಹಳ್ಳಿಗಳನ್ನೂ ತೊಳೆದು ಸಾಗರದೊಳಕ್ಕೆ ಸೆಳೆದಿವೆ. ಥೇರಾ ನಾಗರೀಕತೆ ನಾವಿಕರ, ಕಡಲ ತೀರದ ನಾಗರೀಕತೆಯಾದ್ದರಿಂದ ಸಮುದ್ರವೇ ಮುನಿದೆದ್ದರೆ ಅವರು ಉಳಿಯುವುದಾದರೂ ಹೇಗೆ?

ಈಗ ಥೇರಾ, ಥೆರೇಸಿಯಾ, ಸ್ಕಿನೋಸ್‌, ಅಯೋಸ್‌ ದ್ವೀಪಗಳಲ್ಲಿ ಮತ್ತೆ ಚಿಕ್ಕ ಚಿಕ್ಕ ಹಳ್ಳಿಗಳೆದ್ದಿವೆ. ಅತ್ಯಂತ ಸುಂದರವಾದ ಈ ದ್ವೀಪಗಳು ಯುರೋಪಿನ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಈ ದ್ವೀಪಗಳು ಸಮುದ್ರದ್ದಿಂದ ನೇರವಾಗಿ ಮೇಲೆದ್ದಿರುವ ಪರ್ವತಗಳಾದ್ದರಿಂದ ಬೆಟ್ಟಗಳನ್ನೇ ಮೆಟ್ಟಿಲು ಮೆಟ್ಟಿಲಾಗಿ ಕತ್ತರಿಸಿ ಸಮತಳ ಪ್ರದೇಶ ನಿರ್ಮಿಸಿಕೊಂಡು ಮನೆಗಳನ್ನು ಕಟ್ಟಿದ್ದಾರೆ. ಈ ಊರುಗಳಲ್ಲೆಲ್ಲೂ ನಡೆದುಹೋಗಲು ರಸ್ತೆಗಳಿಲ್ಲ. ಇಡೀ ಊರಿನ ಎಲ್ಲಾ ರಸ್ತೆಗಳೂ ಕೊನೆ ಇಲ್ಲದ ಪಾವಟಿಕೆಗಳೇ. ಇಲ್ಲಿ ಸಮತಟ್ಟಾದ ರಸ್ತೆಗಳೇ ಇಲ್ಲವೆಂದ ಮೇಲೆ ಬಸ್ಸು, ಕಾರು ಇತ್ಯಾದಿ ಯಾವ ವಾಹನಗಳೂ ಇಲ್ಲ. ಇಲ್ಲಿ ಇರುವ ವಾಹನ ಒಂದೇ, ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ, ಊರಿನ ಮೇಯರ್‌ ಇರಲಿ, ಎಲ್ಲರೂ ಅದನ್ನೇ ಏರಬೇಕು. ಆ ವಾಹನ ಯಾವುದೆಂದರೆ ಕತ್ತೆ. ಕತ್ತೆ ಸವಾರಿ ಇಷ್ಟಪಡದಿದ್ದರೆ ಕಾಲು ನಡಿಗೆಯಲ್ಲೇ ಮೆಟ್ಟಿಲುಗಳನ್ನು ಹತ್ತಿಳಿಯುತ್ತಾ ಇರಬೇಕಾಗುತ್ತದೆ. ಹಾಗಾಗಿ ಕತ್ತೆ ಇಲ್ಲಿ ಎಲ್ಲರ ಅತ್ಯಂತ ಪ್ರೀತಿಪಾತ್ರ, ಉಪಯುಕ್ತ ಪ್ರಾಣಿ.

ಇಲ್ಲಿನ ಇನ್ನೊಂದು ಪ್ರೀತಿಪಾತ್ರ ಜೀವಿಯೆಂದರೆ ಚಳಿಗಾಲದಲ್ಲಿ ಇಲ್ಲಿಗೆ ವಲಸೆ ಬರುವ ಪೆಲಿಕನ್‌ ಹಕ್ಕಿ. ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆಕರ್ಷಣೆಯಾದ್ದರಿಂದ ಜನ ಪೆಲಿಕನ್‌ಗಳಿಗೆ ಮೀನು ಕೊಟ್ಟು ಉಪಚಾರ ಮಾಡುತ್ತಾರೆ. ಈ ಪೆಲಿಕನ್‌ ಹಕ್ಕಿಗಳಲ್ಲಿ ಪೆಡ್ರೋ ಬಹಳ ಪ್ರಸಿದ್ಧ ಹಕ್ಕಿ. ಏಕೆಂದರೆ, ಆ ಹಕ್ಕಿಗಾಗಿ ಥೇರಾ ಜನರು ಥೆರೇಸಿಯನ್ನರೊಂದಿಗೆ ಯುದ್ಧ ಘೋಷಿಸಿದ್ದರು. 

ಪೆಡ್ರೋ ಮೊದಲೆಲ್ಲಾ ಚಳಿಗಾಲದಲ್ಲಿ ಬರುತ್ತಿದ್ದುದು ಥೇರಾದವರ ಸತ್ಕಾರಕ್ಕೆ ಮರುಳಾಗಿ, ಚಳಿಗಾಲ ಮುಗಿದರೂ ವಲಸೆ ಹೋಗದೆ ಥೇರಾದಲ್ಲಿಯೇ ಉಳಿದುಬಿಟ್ಟಿತು. ಆ ದ್ವೀಪದಲ್ಲಿ ಅದಕ್ಕೆ ಎಲ್ಲಿ ಬೇಕಾದರೂ ಹೋಗಿ, ಏನನ್ನು ಬೇಕಾದರೂ ತೆಗೆದುಕೊಂಡು ತಿನ್ನುವ ಸ್ವಾತಂತ್ರ್ಯವಿತ್ತು. ಒಮ್ಮೆ ಪೆಡ್ರೋಗೆ ಯಾವ ಕಾರಣಕ್ಕಾಗಿ ಬೇಸರವಾಯೊ¤à ಏನೋ! ಅದು ಹಾರಿಹೋಗಿ ಥೆರೇಸಿಯ ದ್ವೀಪದಲ್ಲಿ ಇಳಿಯಿತು. ಥೇರಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದೆಂದು ಪ್ರಸಿದ್ಧವಾಗಿದ್ದ ಪೆಡ್ರೋ ತಮ್ಮ ದ್ವೀಪಕ್ಕೆ ಬಂದುದನ್ನು ನೋಡಿ ಅಲ್ಲಿನ ಜನರಿಗೆ ಬಹಳ ಸಂತೋಷವಾಯ್ತು. ಆದರೆ, ಅದು ಮತ್ತೆ ಥೇರಾಗೆ ವಾಪಸ್‌ ಹೋದರೆ? ಅದಕ್ಕಾಗಿ ಥೆರೇಸಿಯಾದ ಖೇಡಿಗಳು ಉಪಾಯ ಮಾಡಿ, ಅದು ಮತ್ತೆ ಹಾರಲಾಗದಂತೆ ಆ ಹಕ್ಕಿಯ ರೆಕ್ಕೆಯಲ್ಲಿ ಎರಡೆರಡು ಪುಕ್ಕಗಳನ್ನು ಕತ್ತರಿಸಿಬಿಟ್ಟರು.

Advertisement

ಎಷ್ಟು ದಿನ ಕಳೆದರೂ ಹಿಂದಿರುಗಿ ಬಾರದ ಪೆಡ್ರೋ ಬಗ್ಗೆ ಥೇರಾದಲ್ಲಿ ಕಳವಳ ಶುರುವಾಯ್ತು. ಅಷ್ಟರಲ್ಲಿ ಅವರಿಗೆ ಥೆರೇಸಿಯಾ ದ್ವೀಪದ ವರ್ತಮಾನ ಮುಟ್ಟಿತು. ಅದು ಹಾರಿ ಹಿಂದಿರುಗಿ ಬರದ ಹಾಗೆ ಮಾಡಿರುವ ಸಮಾಚಾರ ತಿಳಿಯಿತು. ಕೋಪಗೊಂಡ ಥೇರಾದ ಮೇಯರ್‌ ಪೆಡ್ರೋನನ್ನು ಸಾಯಂಕಾಲದ ಒಳಗೆ ಹಿಂದಿರುಗಿಸಬೇಕೆಂದು ಕೊನೆಯ ಎಚ್ಚರಿಕೆ ಕೊಟ್ಟ. ಆದರೂ ಥೆರೇಸಿಯದ ಜನ ಸೊಪ್ಪು ಹಾಕಲಿಲ್ಲ. ಅಂತಿಮವಾಗಿ ಥೆರೇಸಿಯಾ ಮೇಲೆ ದಾಳಿ ಮಾಡಿ ಪೆಡ್ರೋನನ್ನು ಕರೆ ತರುವುದೆಂದು ಥೇರಾದ ಯುವಕರೆಲ್ಲರೂ ತೀರ್ಮಾನಿಸಿ ಶಸ್ತ್ರಾಸ್ತ್ರಗಳನ್ನೂ, ದೋಣಿಗಳನ್ನೂ ಎತ್ತಿಕೊಂಡು ದಂಡೆತ್ತಿಹೋದಲು ಸಿದ್ಧರಾದರು.

ಈ ಸುದ್ದಿ ಹೇಗೋ ಗ್ರೀಸಿನ ರಾಷ್ಟ್ರಾಧ್ಯಕ್ಷರಿಗೆ ಮುಟ್ಟಿತು. ಅವರು ಅನವಶ್ಯಕ ಗಲಭೆ ಹತ್ತಿಕ್ಕಲು “ಪೆಡ್ರೋನನ್ನು ಕೂಡಲೇ ಹಿಂದಿರುಗಿಸತಕ್ಕದ್ದು’ ಎಂದು ಥೆರೇಸಿಯಾದ ಮೇಯರ್‌ಗೆ ತಂತಿ ಕಳುಹಿಸಿ, ಎರಡು ಚಿಕ್ಕ ದ್ವೀಪಗಳ ಘರ್ಷಣೆ ನಿಲ್ಲಿಸಲು ತುಕಡಿಯನ್ನು ಕಳಿಸಿದರು. ಪೆಡ್ರೋ ಹಿಂದಿರುಗಿದಾಗ ಥೇರಾದ ಜನ ಸಂತೋಷದಿಂದ ಕುಣಿದುಕುಪ್ಪಳಿಸಿ ಅದಕ್ಕೆ ವೀರೋಚಿತ ಸ್ವಾಗತ ಕೋರಿದರು.   

(ತೇಜಸ್ವಿಯವರ “ಜೀವನ ಸಂಗ್ರಾಮ’ ಪುಸ್ತಕದಿಂದ)

Advertisement

Udayavani is now on Telegram. Click here to join our channel and stay updated with the latest news.

Next