ಬೆಂಗಳೂರು: ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರೊಬ್ಬರು ಆಸ್ಪತ್ರೆಯ ಕೊಠಡಿಯಲ್ಲೇ ಡೆತ್‌ನೋಟ್ ಬರೆದಿಟ್ಟು ಭಾನುವಾರ ಸಂಜೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾವಲ್‌ಭೈರಸಂದ್ರ ನಿವಾಸಿ ಡಾ. ರೇಣುಕಾನಂದ (44) ಆತ್ಮಹತ್ಯೆ ಮಾಡಿಕೊಂಡ ವೈದ್ಯರು.
ಘಟನೆಗೆ ಅನಾರೋಗ್ಯ ಸಮಸ್ಯೆ ಎಂದು ಹೇಳಲಾಗಿದೆ. ಡೆತ್‌ನೋಟ್‌ನಲ್ಲಿ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಘಟನೆಗೆ “ನಾನೇ ಕಾರಣ’ ಎಂದು ಉಲ್ಲೇಖೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದ ರೇಣುಕಾನಂದ ಅವರು ಆರೇಳು ವರ್ಷಗಳಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೃತ ವೈದ್ಯರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಪತ್ನಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ರೇಣುಕಾನಂದ ಅವರು ಹುಟ್ಟು ವಿಕಲಚೇತನರಾಗಿದ್ದು, ಎಡಕಾಲಿನ ಸಮಸ್ಯೆ ಇತ್ತು. ಜತೆಗೆ ಕೆಲ ವರ್ಷಗಳಿಂದ ಮಧುಮೇಹ ಕೂಡ ಕಾಣಿಸಿಕೊಂಡಿತ್ತು. ಜತೆಗೆ ಕಣ್ಣಿನ ಸಮಸ್ಯೆಯಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.
ಭಾನುವಾರ ಸಹ ಸೇವೆಗೆ ಬಂದಿದ್ದ ರೇಣುಕಾನಂದ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ 4 ಗಂಟೆ ಸುಮಾರಿಗೆ ಮೃತರ ಪತ್ನಿ ಕರೆ ಮಾಡಿದ್ದಾರೆ. ಆದರೆ, ಪ್ರತಿಕ್ರಿಯೆ ನೀಡಿಲ್ಲ. ಕೆಲ ಹೊತ್ತಿನ ಬಳಿಕ ಅನುಮಾನಗೊಂಡು ಆಸ್ಪತ್ರೆಯ ಇತರೆ ಸಿಬ್ಬಂದಿಗೆ ಕರೆ ಮಾಡಿ, ಪತಿಯ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ವೈದ್ಯರ ಕೊಠಡಿ ಬಳಿ ಬಂದಾಗ, ಒಳಗಿನಿಂದ ಬಾಗಿಲು ಲಾಕ್ ಆಗಿತ್ತು. ಸಾಕಷ್ಟು ಬಾರಿ ಬಾಗಿಲು ಬಡಿದರೂ ತೆಗೆದಿಲ್ಲ. ಬಳಿಕ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್‌ನೋಟ್ ಪತ್ತೆ: ಮೃತದೇಹದ ಬಳಿ ಡೆತ್‌ನೋಟ್ ಪತ್ತೆ ಯಾಗಿದ್ದು, “ತನ್ನ ಸಾವಿಗೆ ನಾನೇ ಕಾರಣ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದೇನೆ’ ಎಂದು ಉಲ್ಲೇಖೀಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ ಲಾಗುತ್ತಿದೆ. ಮಧ್ಯಾಹ್ನ 2.30ರಿಂದ 4 ಗಂಟೆ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆರೋಗ್ಯ ಸಮಸ್ಯೆ ಎಂದು ಹೇಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.