Advertisement

ಮತ್ತೆ ಓಟಕ್ಕಿಳಿದ ಕೋವಿಡ್ ಪ್ರಕರಣ : ಉದ್ಘಾಟನೆ ನಿರೀಕ್ಷೆಯಲ್ಲಿ ಮಕ್ಕಳ 2 ಐಸಿಯು ಘಟಕ

07:12 PM Jan 06, 2022 | Team Udayavani |

ಕಾರ್ಕಳ: ಒಮಿಕ್ರಾನ್‌, ಕೊರೊನಾ ಸೋಂಕು ಮತ್ತೆ ರಾಜ್ಯದಲ್ಲಿ ಹೆಚ್ಚಾಗಿದೆ. ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ, ಕಾರ್ಕಳ ಈ ಮೂರು ಕಡೆಗಳಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ 1.40 ಕೋ.ರೂ. ವೆಚ್ಚದಲ್ಲಿ ಎಮರ್ಜೆನ್ಸಿ ಐಸಿಯು ಘಟಕ ಸಿದ್ಧಗೊಂಡಿದ್ದು, ಕುಂದಾಪುರ ಘಟಕ ಜ. 3ರಂದು ಲೋಕಾರ್ಪಣೆಗೊಂಡಿದ್ದರೆ ಉಳಿದೆರಡು ಕಡೆ ಉದ್ಘಾಟನೆ ಶೀಘ್ರ ಆಗಬೇಕಿದೆ.

Advertisement

ಸಂಭವನೀಯ ಮೂರನೇ ಕೊರೊನಾ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಜಿಲ್ಲೆ, ತಾ| ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಜತೆಗೆ ಮಕ್ಕಳ ಐಸಿಯು ಬೆಡ್‌ ಹೊಂದುವ ಬಗ್ಗೆ ಸರಕಾರ ನಿರ್ಧರಿಸಿತ್ತು. ಮಕ್ಕಳ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಲು ಸಿ.ಎಂ. ಸೂಚಿಸಿದ್ದರು. ಅದರಂತೆ ವಿವಿಧ ಫ‌ಂಡ್‌ಗಳ ನೆರವು ಪಡೆದು ಮಕ್ಕಳ ಐಸಿಯು ಬೆಡ್‌ ಅನ್ನು ಉಡುಪಿ ಜಿಲ್ಲೆಯ ಮೂರು ತಾ| ಕೇಂದ್ರಗಳಲ್ಲಿ ತೆರೆಯಲಾಗಿದೆ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 60 ಲ. ರೂ. ವೆಚ್ಚದಲ್ಲಿ 20 ಬೆಡ್‌ನ‌ ಮಕ್ಕಳ ಐಸಿಯು ಘಟಕ, ಕುಂದಾಪುರ ತಾ| ಆಸ್ಪತ್ರೆಯಲ್ಲಿ 20 ಬೆಡ್‌ನ‌ ಮಕ್ಕಳ ಐಸಿಯು ಘಟಕ, ಕಾರ್ಕಳದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ 10 ಬೆಡ್‌ಗಳ ಐಸಿಯು ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ನಿರ್ಮಿತಿ ಕೇಂದ್ರದ ಸಿಎಸ್‌ಆರ್‌ 1 ಕೋ.ರೂ. ಫ‌ಂಡ್‌, ಅದಾನಿ ಗ್ರೂಪ್ಸ್‌ನ 40 ಲಕ್ಷ ರೂ., ಯುಪಿಸಿಎಲ್‌ ಸಿಎಸ್‌ಆರ್‌ ಫ‌ಂಡ್‌ನ‌ಲ್ಲಿ ಮಕ್ಕಳ ಐಸಿಯು ಘಟಕ ತೆರೆಯಲಾಗಿದೆ. ಘಟಕಕ್ಕೆ ಸಂಬಂಧಿಸಿ ಎಲ್ಲ ಕಾಮಗಾರಿಗಳು ಮುಕ್ತಾಯ ಕಂಡಿದೆ. ಕುಂದಾಪುರ ಮಕ್ಕಳ ಐಸಿಯು ಜ. 3ರಂದು ಲೋಕಾರ್ಪಣೆಗೊಂಡಿದೆ.

ಜೋಡಣೆ ಬಹುತೇಕ ಮುಕ್ತಾಯ
ಮಕ್ಕಳ ಎಮೆರ್ಜೆನ್ಸಿ ಐಸಿಯು ಬೆಡ್‌ಗೆ ಸಂಬಂಧಿಸಿ ಸಿವಿಲ್‌ ಕೆಲಸಗಳು ಮುಕ್ತಾಯ ಗೊಂಡಿವೆ. ಐಸಿಯುಗೆ ಬೇಕಿರುವ ವೆಂಟಿಲೇಟರ್‌, ಬೆಡ್‌, ಫಾರ್ಮಾಸಿಸ್‌, ಶೌಚಾಲಯ, ಆಕ್ಸಿಜನ್‌ ಪೈಪ್‌ಲೈನ್‌, ಕರ್ಟನ್ಸ್‌ ಅಳವಡಿಕೆ ಇದೆಲ್ಲವೂ ಸರಕಾರದ ವತಿಯಿಂದ ಒದಗಿಸಲಾಗುತ್ತಿದ್ದು, ಅವುಗಳ ಜೋಡಣೆ ಕೂಡ ಬಹುತೇಕ ಮುಕ್ತಾಯಗೊಂಡಿದೆ.

ಶೀಘ್ರ ಉದ್ಘಾಟನೆಗೊಳ್ಳಲಿ
ಕೊರೊನಾ ಸೋಂಕು ರಾಜ್ಯ ವ್ಯಾಪಿ ವಿಸ್ತರಿಸುತ್ತಲೇ ಅದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಇದೇ ಕಾರಣಕ್ಕೆ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಸಿದ್ಧ ಗೊಂಡ ಮಕ್ಕಳ ಐಸಿಯು 2 ಕಡೆಯ ಘಟಕ ಆದಷ್ಟು ಬೇಗ ಲೋಕಾರ್ಪಣೆ ಗೊಂಡು ಸೇವೆಗೆ ದೊರಕಬೇಕಿದೆ.

Advertisement

ಮೂರನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ “ವಾತ್ಸಲ್ಯ’ ಹೆಸರಿನಲ್ಲಿ 15 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ ಕಾರ್ಕಳದಲ್ಲಿ ಚಾಲನೆ ನೀಡಲಾಗಿತ್ತು. 25 ಸಾವಿರಕ್ಕೂ ಅಧಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ.

ಆರಂಭದಲ್ಲೇ ಮುಂಜಾಗ್ರತೆ
ಕೊರೊನಾ ವೈರಸ್‌ ಎರಡನೇ ಅಲೆ ತೀವ್ರ ಸ್ವರೂಪ ಪಡೆದಿದ್ದ ವೇಳೆ ಮೂರನೇ ಅಲೆಯಲ್ಲಿ ವೈರಸ್‌ ಮಕ್ಕಳಿಗೂ ಕಾಡಬಹುದು ಎಂಬ ಅಘಾತಕಾರಿ ಅಂಶವನ್ನು ತಜ್ಞರು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮಕ್ಕಳಿಗೆ ಕಾಡಬಹುದಾದ ಸೋಂಕಿನ ಹಿನ್ನೆಲೆಯಲ್ಲಿ ಆರಂಭದಲ್ಲೆ ಮುಂಜಾಗ್ರತೆ ವಹಿಸಲಾಗಿತ್ತು. ಇದೇ ಕಾರಣದಿಂದ ಮಕ್ಕಳ ಐಸಿಯು ಬೆಡ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೀಗ ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್‌ ರೂಪಾಂತರಗೊಂಡು ಒಮಿಕ್ರಾನ್‌ ರೂಪದಲ್ಲಿ ಬಾಧಿಸಲಾರಂಭಿಸಿದ್ದು, ಅದು ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಭೀತಿಯಿಂದ ಮಕ್ಕಳ ಐಸಿಯು ಬೆಡ್‌ ಮೊರೆಯ ಅಗತ್ಯವಿದೆ.

ಮಕ್ಕಳ ಬೆಡ್‌ಗಳು ಲಭ್ಯ
ಮೂರು ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಸಂದರ್ಭ ಮಕ್ಕಳನ್ನು ದಾಖಲಿಸಿ, ಚಿಕಿತ್ಸೆ ನೀಡಲು ಬೇಕಾಗುವಷ್ಟು ಮಕ್ಳಳ ಬೆಡ್‌ಗಳ ಅವಕಾಶಗಳು ಈಗಾಗಲೇ ಇವೆ. ಸರಕಾರ ಸೂಚಿತ ಐಸಿಯು ಬೆಡ್‌ಗಳು ರಿಕ್ರೂಟ್‌ಮೆಂಟ್‌ ಹಂತದಲ್ಲಿವೆ. ಐಸಿಯು ಘಟಕಗಳಲ್ಲಿ ಇನ್‌ಪ್ರಾಕ್ಚರ್‌ಗಳನ್ನು 3 ಕಡೆ ರೆಡಿ ಮಾಡಿಕೊಂಡಿದ್ದೇವೆ. ಕಾರ್ಕಳ ಅಥವಾ ಉಡುಪಿಯ ಯಾವುದಾದರೂ ಒಂದು ಕಡೆ ಉದ್ಘಾಟನೆಯ ನಿರೀಕ್ಷೆ ಇಟ್ಟುಕೊಂಡಿದ್ದೇವೆ.
-ಡಾ| ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next