Advertisement

ವಾಹನಕ್ಕಿಂತ ಪಾದಚಾರಿಗಳೇ ಫಾಸ್ಟು!

01:16 AM Aug 11, 2019 | Team Udayavani |

ಬೆಂಗಳೂರು: ಬೆಳಗ್ಗೆ ಮತ್ತು ಸಂಜೆ ಪೀಕ್‌ಅವರ್‌ನಲ್ಲಿ ಇಲ್ಲಿ ಬೈಕ್‌ ಮತ್ತು ಕಾರುಗಳಿಗಿಂತ ವೇಗವಾಗಿ ಪಾದಚಾರಿಗಳು ನಡೆದು ಹೋಗುತ್ತಾರೆ! ಸಂದಿ ಸಿಕ್ಕರೂ ನುಸುಳಿಕೊಂಡು ಹೋಗುವ ಬೈಕ್‌ ಸವಾರರೂ ಪಾದಚಾರಿಗಳ ಮುಂದೆ ಸೋಲೊಪ್ಪಿಕೊಳ್ಳುವುದು ಶೇಷಾದ್ರಿ ರಸ್ತೆಯಲ್ಲಿ. ನಿತ್ಯ ಸಾವಿರಾರು ಪ್ರಯಾಣಿಕರು ಬಳಸುವ ಸುಮಾರು ಒಂದೂವರೆ ಕಿ.ಮೀ. ಉದ್ದದ ಶೇಷಾದ್ರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಲು ಹಲವು ಕಾರಣಗಳಿವೆ.

Advertisement

ಕೆಂಪೇಗೌಡ ಬಸ್‌ ನಿಲ್ದಾಣ, ರೈಲು ನಿಲ್ದಾಣ, ವಿಕಾಸಸೌಧ, ವಿಧಾನಸೌಧ ಮತ್ತು ಮಹಾರಾಣಿ ಮಹಿಳಾ ಕ್ಲಸ್ಟರ್‌, ಪಾಲಿಟೆಕ್ನಿಕ್‌ ಕಾಲೇಜು, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಇನ್ಸ್‌ಟಿಟ್ಯೂಟ್‌ ಆಫ್ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಹಾಗೂ ಕಲಾ ಕಾಲೇಜುಗಳು ಇದೇ ಮಾರ್ಗಗಳಲ್ಲಿ ಇರುವುದರಿಂದ ಸಾವಿರಾರು ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಈ ಮಾರ್ಗವಾಗೇ ಕಾಲೇಜು ಮತ್ತು ಉದ್ಯೋಗ ಸ್ಥಳಗಳನ್ನು ತಲುಲುತ್ತಾರೆ.

ಇದೇ ಭಾಗದಲ್ಲಿ ಬರುವ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ, ಪ್ರತಿಭಟನೆ ನಡೆಯುತ್ತಿದ್ದರೆ, ಈ ರಸ್ತೆಯಲ್ಲಿ ಒಂದೂವರೆ ಕಿ.ಮೀ ತಲುಪುವುದಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ತಗುಲುತ್ತಿದೆ. ವಿಧಾನಸೌಧ ಮುತ್ತಿಗೆ, ಮೆರವಣಿಗೆ, ಜಾಥಾಗಳಿಗೆ ವಿವಿಧ ಸಂಘಟನೆಗಳ ಸದಸ್ಯರು ಇದೇ ಮಾರ್ಗದ ಮೂಲಕ ಹಾದು ಹೋಗುತ್ತಾರೆ. ಇನ್ನು ಶಕ್ತಿ ಕೇಂದ್ರದ ಅಧಿಕಾರಿಗಳು ಮತ್ತು ನಾಯಕರೂ ಇದೇ ಮಾರ್ಗ ಬಳಸುತ್ತಾರೆ.

ಅನಿರೀಕ್ಷಿತ ಪ್ರತಿಭಟನೆಗಳು ನಡೆದರಂತೂ ಈ ರಸ್ತೆಗಳು ಪ್ರತಿಭಟನಾಕಾರರಿಂದ “ಹೈಜಾಕ್‌’ ಆಗುತ್ತವೆ. ಇತ್ತೀಚೆಗೆ ವಾಲ್ಮೀಕಿ ಸಮುದಾಯ ಮೀಸಲಾತಿ ಸಂಬಂಧ ನಡೆಸಿದ ಅನಿರೀಕ್ಷಿತ ಪ್ರತಿಭಟನೆಯಿಂದ ನಗರದ ಸಂಚಾರವೇ ಅಸ್ತವ್ಯಸ್ತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನ ಮತ್ತು ಮತ್ತೂಂದು ಭಾಗದಲ್ಲಿನ ಮೈಸೂರು ಬ್ಯಾಂಕ್‌ ವೃತ್ತಗಳು ಪ್ರತಿಭಟನೆಗಳಿಗೆ ಪ್ರಸಿದ್ಧಿ ಗಳಿಸಿವೆ.

ನಗರಕ್ಕೆ ಸಂಬಂಧಿಸಿದ ಸಮಸ್ಯೆಗಳಷ್ಟೇ ಅಲ್ಲ, ರಾಜ್ಯದ ಹಲವು ಜಿಲ್ಲೆಯ ವಿವಿಧ ಸಂಘಟನೆಗಳ ಸದಸ್ಯರು ಸರ್ಕಾರದ ಗಮನ ಸೆಳೆಯುವುದಕ್ಕೆ ಇಲ್ಲಿಗೇ ಬಂದು ಪ್ರತಿಭಟನೆ ನಡೆಸುತ್ತಾರೆ. ಇದು ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಂಚಾರ ಮಿಡಿತವನ್ನೇ ಸ್ತಬ್ಧಗೊಳಿಸಿತ್ತಿದ್ದು, ಗಂಟೆಗಟ್ಟಲೆ ವಾಹನಗಳು ಆಮೆ ವೇಗದಲ್ಲಿ ಸಾಗುತ್ತವೆ. ಇದರೊಂದಿಗೆ ವಿವಿಧ ಸಂಘಟನೆಗಳು ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ತಲುಪುವುದಕ್ಕೆ ಬಳಸುವ ವಾಹನಗಳಿಂದ ಸಂಚಾರ ದಟ್ಟಣೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುತ್ತದೆ. ಈ ಭಾಗದಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿಭಟನೆಗೆ ಪರ್ಯಾಯ ಸ್ಥಳ ನೀಡಬೇಕು ಎನ್ನುವ ಬೇಡಿಕೆಯೂ ಇದೆ.

Advertisement

ಜೀವ ಕೈಯಲ್ಲಿ: ಮಹಾರಾಣಿ ಮಹಿಳಾ ಕ್ಲಸ್ಟರ್‌ನ ಮುಂದೆ ವಿದ್ಯಾರ್ಥಿಗಳ ಅನುಕೂಲಕ್ಕೆ ಸ್ಕೈವಾಕ್‌ ನಿರ್ಮಿಸಲಾಗಿದೆಯಾದರೂ ಇದನ್ನು ಮೇಲ್ದರ್ಜೆಗೆ ಏರಿಸಿಲ್ಲ ಮತ್ತು ಇದು ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿಲ್ಲ. ಹೀಗಾಗಿ, ಇಂದಿಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಸ್ಥಿತಿ ಇದೆ.

ಜೀರೊ ಟ್ರಾಫಿಕ್‌ ಹೆಚ್ಚು: ಮುಖ್ಯಮಂತ್ರಿ, ಸಚಿವರ ಸಹಿತ ಬಹುತೇಕರು ಅರಮನೆ ರಸ್ತೆ ಮೂಲಕವೇ ವಿಧಾನಸೌಧ ತಲುಪುತ್ತಾರೆ. ಈ ಸಮಯದಲ್ಲಿ ಸಂಚಾರ ಪೊಲೀಸರ ಸರ್ಪಗಾವಲಿನಲ್ಲೇ ಈ ರಸ್ತೆ ಇರುತ್ತದೆ ಮತ್ತು ಸಾರ್ವಜನಿಕರು ರಸ್ತೆ ದಾಟುವುದಕ್ಕೆ ನಿಷೇಧ ವಿಧಿಸಲಾಗುತ್ತದೆ.

ಪತ್ರ ಬರೆಯಲಾಗಿದೆ: ಮಹಾರಾಣಿ ಮಹಿಳಾ ಕ್ಲಸ್ಟರ್‌ನ ಮುಂದೆ ಇರುವ ಸ್ಕೈವಾಕ್‌ ಅನ್ನು ಉತ್ತಮ ದರ್ಜೆಗೆ ಏರಿಸಲು ಮತ್ತು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ, ನಿರ್ವಹಣೆ ಶಾಸ್ತ್ರ ಕಾಲೇಜು ಹಾಗೂ ಗೃಹ ವಿಜ್ಞಾನ ಕಾಲೇಜುಗಳ ನಡುವೆ ಸಂಪರ್ಕ ಕಲ್ಪಿಸುವ ರೀತಿ ಬದಲಾಯಿಸುವಂತೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರಿಗೆ ಕಳೆದ ತಿಂಗಳು ಮನವಿ ಮಾಡಲಾಗಿದೆ.

ಕ್ಲಸ್ಟರ್‌ನಲ್ಲಿ 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈಗ ಸ್ಕೈವಾಕ್‌ ಇದ್ದೂ ಇಲ್ಲದಂತಾಗಿದೆ. ವಿಕಲಚೇತನ ವಿದ್ಯಾರ್ಥಿಗಳೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಸ್ಕೈವಾಕ್‌ಗೆ ಲಿಫ್ಟ್ ಅಳವಡಿಸುವಂತೆ ಮನವಿ ಮಾಡಲಾಗಿದೆ ಎಂದು ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ವಿಶೇಷಾಧಿಕಾರಿ ಡಾ.ಎಂ.ಎಸ್‌.ರೆಡ್ಡಿ ತಿಳಿಸಿದ್ದಾರೆ.

ಅಗತ್ಯವಿರುವ ಸ್ಥಳದಲ್ಲಿ ಸ್ಕೈವಾಕ್‌ ನಿರ್ಮಾಣ ಮಾಡದೆ ಬೇರೆ ಪ್ರದೇಶದಲ್ಲಿ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಎಷ್ಟೂ ಅನುಕೂಲವಿಲ್ಲ.
-ರಾಜಗೋಪಾಲ್‌, ವಕೀಲ

ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ವೇಗ ಮಿತಿ ಅಳವಡಿಸಿಲ್ಲ. ಒಮ್ಮೆ ರಸ್ತೆ ದಾಟುವಾಗ ಅಪಘಾತ ಒಳಗಾಗುವ ಸಾಧ್ಯತೆಯಿಂದ ತಪ್ಪಿಸಿಕೊಂಡಿದ್ದೇನೆ. ಸ್ಕೈವಾಕ್‌ಗೆ ಲಿಫ್ಟ್ ಇದ್ದರೆ ಅನುಕೂಲ.
-ನಂದಿನಿ ಆರ್‌, ವಿದ್ಯಾರ್ಥಿನಿ

ರಸ್ತೆಯಲ್ಲಿ ಸದಾ ವಾಹನ ಸಂಚಾರ ಇದ್ದೇ ಇರುತ್ತದೆ. ಸ್ಕೈವಾಕ್‌ವರೆಗೆ ಹೋಗಿ ಮತ್ತೆ ಆ ಭಾಗದಿಂದ ಹತ್ತು ನಿಮಿಷ ನಡೆದು ಬರಬೇಕು. ಸಮಯ ಉಳಿಸುವ ಉದ್ದೇಶದಿಂದ ಸ್ಕೈವಾಕ್‌ ಬಳಸದೆ ರಸ್ತೆ ದಾಟುತ್ತೇವೆ.
-ಶಶಿಧರ್‌, ವಿದ್ಯಾರ್ಥಿ

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next