ಕೆ.ಆರ್.ಪುರ: ಸಂಚಾರದಟ್ಟಣೆಗೆ ಹೆಸರಾಗಿರುವ, ಕೆ.ಆರ್.ಪುರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಇಷ್ಟೊಂದು ವಾಹನಗಳು ರಸ್ತೆ ಮೇಲೆ ಹೋಗುವಾಗ ಪಾಪದ ಪಾದಚಾರಿಗಳು ರಸ್ತೆ ದಾಟಲು ಸಾಧ್ಯವೇ?
ಸಾಧ್ಯವಿಲ್ಲ. ಆದರೆ ಪಾದಚಾರಿಗಳ ಈ ಕಷ್ಟ ಸಂಚಾರ ಪೊಲೀಸರು ಮತ್ತು ಬಿಬಿಎಂಪಿಗೆ ಅರ್ಥ ವಾಗುತ್ತಿಲ್ಲ. ರಸ್ತೆ ದಾಟಲು ಪರದಾಡುವ ಸಾರ್ವ ಜನಿಕರಿಗಾಗಿ ಒಂದು ಸ್ಕೈವಾಕ್, ಪಾದಚಾರಿ ಸುರಂಗ ಮಾರ್ಗ ನಿರ್ಮಿಸಬೇಕೆಂಬ ಆಲೋಚನೆ ಸ್ಥಳೀಯ ಜನಪ್ರತಿನಿಧಿಗಳ ತಲೆಯಲ್ಲಿ ಬಂದೇ ಇಲ್ಲ.
ಕೆ.ಆರ್.ಪುರದ ಸುತ್ತಮುತ್ತ ಅನೇಕ ಕೈಗಾರಿಕೆಗಳು, ಐಟಿ-ಬಿಟಿ ಕೇಂದ್ರಗಳು ಇರುವುದರಿಂದ ಬೇರೆ ಊರುಗಳ ಉದ್ಯೋಗಗಳು ಇಲ್ಲಿಗೆ ಬಂದು ಹೋಗುತ್ತಾರೆ. ಇದರಿಂದ ಜನಸಂಧಣಿ ಕೂಡ ಹೆಚ್ಚಾಗಿರುತ್ತದೆ. ದರೊಂದಿಗೆ ತಾಲೂಕು, ಪಾಲಿಕೆ, ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ ಸೇರಿ ಸಾರ್ವಜನಿಕ ಸೇವೆ ಒದಗಿಸುವ ಎಲ್ಲಾ ಕಚೇರಿಗಳು ಕೆ.ಆರ್.ಪುರದಲ್ಲೇ ಇರುವುದರಿಂದ ಹೆಚ್ಚು ಜನ ಸೇರುತ್ತಾರೆ. ಇವರೆಲ್ಲಾ ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟುತ್ತಾರೆ. ಅದರಲ್ಲೂ ಬಿಬಿಎಂಪಿ ಕಚೇರಿ ಮುಂಭಾಗ ಮತ್ತು ಬಸ್ ನಿಲ್ದಾಣದ ಬಳಿ ರಸ್ತೆ ದಾಟುವುದಂತೂ ಅತ್ಯಂತ ಅಪಾಯಕಾರಿ.
ಆಂಧ್ರಪ್ರದೇಶ, ತಮಿಳುನಾಡಿನಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ನಗರದೊಳಗೆ ಹೋಗುವ ಹಾಗೂ ವಾಪಸ್ ಬರುವ ವಾಹನಗಳು ಇದೇ ಮಾರ್ಗವಾಗಿ ಸಂಚರಿಸಬೇಕು. ಹೀಗಾಗಿ ದಿನವಿಡೀ ವಾಹನಗಳ ಸಂಚಾರ ಹೆಚ್ಚೇ ಇರುತ್ತದೆ. ಈ ವೇಳೆ ಶಿಕ್ಷಣ ಮತ್ತು ದೈನಂದಿನ ಕೆಲಸಗಳಿಗಾಗಿ ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ಪ್ರಯಾಣಿಕರು ಸೇರಿ ಇಲ್ಲಿಗೆ ನಿತ್ಯ ಬರುವ ಸಾವಿರಾರು ಜನ ರಸ್ತೆ ದಾಟಲೇಬೇಕಾಗಿದ್ದರಿಂದ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ನೂರಾರು ಮಂದಿ ಸಾವನ್ನಪ್ಪಿರುವ ಉದಾಹರಣೆಗಳಿವೆ.
ಜಾಹೀರಾತಿಗಾಗಿ ಸ್ಕೈವಾಕ್ ನಿರ್ಮಾಣ:
ಜನರಿಗೆ ಅಗತ್ಯವಿರುವ ಕಡೆ ಸ್ಕೈವಾಕ್ ನಿರ್ಮಿಸಬೇಕಿರುವ ಬಿಬಿಎಂಪಿ, ಜಾಹೀರಾತು ಆದಾಯ ಗಮನದಲ್ಲಿಟ್ಟುಕೊಂಡು ಜನರಿಗೆ ಕಾಣುವಂತಹ (ವಿಸಿಬಲಿಟಿ) ಸ್ಥಳದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸುತ್ತಿದೆ. ಇದು ಸ್ಥಳೀಯರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅತಿ ಹೆಚ್ಚು ಜನ ಸಂಚರಿಸುವ ಬಿಬಿಎಂಪಿ ಕಚೇರಿ ಮುಂಭಾಗ ಮತ್ತು ಪೊಲೀಸ್ ವಸತಿ ಸಮುಚ್ಚಯದ ಎದುರು ಸ್ಕೈವಾಕ್ ನಿರ್ಮಿಸುವ ಬದಲು, ಬಿಬಿಎಂಪಿ, ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರ್‌ಟಿಒ ಕಚೇರಿ ಮತ್ತು ಐಟಿಐ ಬಳಿ ಸ್ಕೈವಾಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.