Advertisement

ಪೆಡಲ್‌ ಪೊಲೀಸ್‌ರಿಂದ ಗಸ್ತು ಆರಂಭ

11:13 AM Dec 16, 2019 | Team Udayavani |

ಬೆಂಗಳೂರು: ಕಬ್ಬನ್‌ ಉದ್ಯಾನವನದಲ್ಲಿ ರಾತ್ರಿ ಹಾಗೂ ಹಗಲು ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ “ಪೆಡಲ್‌ ಪೊಲೀಸ್‌’ ಎಂಬ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್‌ ಸಿಬ್ಬಂದಿ ಪಾರ್ಕ್‌ನ ಎಲ್ಲೆಡೆ ಗಸ್ತು ತಿರುಗಲಿದ್ದಾರೆ.

Advertisement

ಅದು ಬೈಸಿಕಲ್‌ ಮೂಲಕ. ನಗರದ ಪೆಡಲ್‌ ಎಂಬ ಖಾಸಗಿ ಸಂಸ್ಥೆ ಬೆಂಗಳೂರು ಪೊಲೀಸರಿಗೆ ಬೈಸಿಕಲ್‌ಗ‌ಳನ್ನು ಉಚಿತವಾಗಿ ನೀಡಿದ್ದು, ಭಾನುವಾರ ಈ ಬೈಸಿಕಲ್‌ ಗಳನ್ನು ಪೊಲೀಸ್‌ ಸಿಬ್ಬಂದಿಗೆ ವಿತರಣೆ ಮಾಡುವ ಮೂಲಕ ಹೊಸ ಪ್ರಯೋಗಕ್ಕೆ ಚಾಲನೆ ನೀಡಿದ ಪೊಲೀಸ್‌ ಆಯುಕ್ತರು, ಸೈಕಲ್‌ನಲ್ಲಿಯೇ ಪಾರ್ಕ್‌ನಲ್ಲಿ ಒಂದು ಸುತ್ತು ಗಸ್ತು ತಿರುಗಿದರು. ಕಬ್ಬನ್‌ಪಾರ್ಕ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ವಾಹನ ಪ್ರವೇಶ ನಿರ್ಬಂಧ ಇರುವುದರಿಂದ ಪೊಲೀಸರು ಗಸ್ತು ತಿರುಗುತ್ತಿರಲಿಲ್ಲ. ಅದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಕೆಲ ಕಿಡಿಗೇಡಿಗಳು ಅಕ್ರಮ ಚುಟುವಟಿಕೆ ನಡೆಸುತ್ತಿದ್ದರು. ಇದೀಗ ಬೈಸಿಕಲ್‌ ಮೂಲಕ ಪೊಲೀಸ್‌ ಸಿಬ್ಬಂದಿ ಹಗಲು, ರಾತ್ರಿ ಕಬ್ಬನ್‌ ಪಾರ್ಕ್‌ನ ಮೂಲೆ ಮೂಲೆಯಲ್ಲೂ ಗಸ್ತು ತಿರುಗಲಿದ್ದಾರೆ ಎಂದು ಪೊಲೀಸರು ಹೇಳಿದರು.

ಇದರಿಂದ ಪಾರ್ಕ್‌ಗೆ ಬರುವ ವಾಯುವಿಹಾರಿಗಳ ರಕ್ಷಣೆ ಮಾತ್ರವಲ್ಲ. ಪೊಲೀಸ್‌ ಸಿಬ್ಬಂದಿಗೂ ಉಪಯೋಗವಾಗಲಿದೆ. ಜತೆಗೆ ಪರಿಸರ ಮಾಲಿನ್ಯ ಕೂಡ ತಗ್ಗಲಿದೆ ಎಂಬುದು ಪೊಲೀಸ್‌ ಅಧಿಕಾರಿಗಳ ಅಭಿಪ್ರಾಯ. ಮುಂಜಾನೆ, ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಪೊಲೀಸರು ಸೈಕಲ್‌ ತುಳಿಯುವುದರಿಂದ ಅವರ ದೈಹಿಕ ದೃಢತೆ ಹೆಚ್ಚಾಗಲಿದೆ. ಸದ್ಯ ಕಬ್ಬನ್‌ಪಾರ್ಕ್‌ ಠಾಣೆಗೆ ಐದು ಬೈಸಿಕಲ್‌ಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ನಗರದ ಪ್ರತಿ ಠಾಣೆಗೆ ಐದರಿಂದ ಆರು ಬೈಸಿಕಲ್‌ಗ‌ಳನ್ನು ವಿತರಿಸುವ ಯೋಜನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸೈಬರ್‌ ತಡೆಗೆ ಸಾರ್ವಜನಿಕರಿಗೆ ಮನವಿ: ವರ್ಷಾಂತ್ಯದಲ್ಲಿ ನಗರದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಹತ್ತು ಸಾವಿರ ಗಡಿ ದಾಡಿದೆ. ಹೀಗಾಗಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಅವರೇ ಖುದ್ದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಸಾರ್ವಜನಿಕರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಅಂಗಡಿ, ಶಾಪಿಂಗ್‌ ಮಾಲ್‌ಗ‌ಳು ಹಾಗೂ ಇತರೆ ಯಾವುದೇ ಸ್ಥಳದಲ್ಲಿಯೂ ಎಲ್ಲಿಯೂ ಬಹಿರಂಗಪಡಿಸಬೇಡಿ. ಒಂದು ವೇಳೆ ಶೇರ್‌ ಮಾಡಿದರೆ ಅದರಿಂದ ಸುಲಭವಾಗಿ ನಿಮ್ಮ ಆಧಾರ್‌ ನಂಬರ್‌, ಮನೆ ವಿಳಾಸ ಸೇರಿ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ಹ್ಯಾಕರ್ಸ್‌ಗಳು ಕಳುವು ಮಾಡುತ್ತಾರೆ. ಈ ಮೂಲಕ ಸೈಬರ್‌ ಅಪರಾಧಕ್ಕೆ ತಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next