ಅರೆ ನೀರಾವರಿ, ಮಳೆಯಾಶ್ರಿತ ಪ್ರದೇಶಗಳಲ್ಲಿ ಶೇಂಗಾ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಶೇಂಗಾವನ್ನು ಸಿಪ್ಪೆ ಸಹಿತ ಮಾರುವುದಕ್ಕಿಂತಲೂ ಬೀಜಗಳನ್ನು ಬಿಡಿಸಿ, ವಿಂಗಡಿಸಿ ಮಾರುವುದು ಹೆಚ್ಚು ಲಾಭದಾಯಕ. ಆದರೆ ಫಸಲು ಕೈಗೆ ಬಂದು ಚೆನ್ನಾಗಿ ಒಣಗಿಸಿದ ನಂತರ ಬೀಜ ಬಿಡಿಸುವ ಕಾರ್ಯ ತೊಡಕಿನದು. ಏಕೆಂದರೆ, ಆ ಸಮಯಕ್ಕೆ ಸರಿಯಾಗಿ ಕೃಷಿಕಾರ್ಮಿಕರ ಲಭ್ಯತೆ ಇಲ್ಲದಿರುವುದು.
ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡೇ ಬೆಂಗಳೂರು ಕೃಷಿ ವಿ.ವಿ.ಯ ಇಂಜಿನಿಯರಿಂಗ್ ವಿಭಾಗ, ಶೇಂಗಾ (ಕಡಲೇಕಾಯಿ) ಬೀಜ ಬಿಡಿಸುವ ಯಂತ್ರ ಅಭಿವೃದ್ಧಿಪಡಿಸಿದೆ. ಇದನ್ನು ಸಣ್ಣ ಮತ್ತು ಅತಿಸಣ್ಣ ರೈತರ ಅವಶ್ಯಕತೆಗಳನ್ನು ಗಮನಿಸಿಯೇ ಅಭಿವೃದ್ಧಿಪಡಿಸಿರುವುದು ಗಮನಾರ್ಹ. ಈ ಯಂತ್ರದ ಸಹಾಯದಿಂದ ಒಂದು ತಾಸಿನಲ್ಲಿ 16 ರಿಂದ 18 ಕೆ.ಜಿ ಪ್ರಮಾಣದ ಬೀಜಗಳನ್ನು ಬಿಡಿಸಬಹುದು.
ಕೈಗೆಟುಕುವ ದರದಲ್ಲಿಯೇ ಯಂತ್ರದ ಬೆಲೆಯನ್ನು ನಿಗದಿಪಡಿಸಲಾಗಿದೆ. ಅವಶ್ಯಕವೆನ್ನಿಸಿದರೆ ಒಬ್ಬರು ಮೂವರು ರೈತರು ಸೇರಿ ಈ ಯಂತ್ರ ಖರೀದಿ ಮಾಡಬಹುದು.( ಅಂದಾಜು ಬೆಲೆ ಎರಡು ಸಾವಿರ ರೂ.) ಇದನ್ನು ನಿರ್ವಹಣೆ ಮಾಡುವುದು ಕೂಡ ಸುಲಭ. ಹೆಚ್ಚಿನ ಮಾಹಿತಿಗೆ ಕೃಷಿ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದವರನ್ನು ಸಂಪರ್ಕಿಸಬಹುದು.
ಸಂಪರ್ಕ ಸಂಖ್ಯೆ: 080- 23545640/ 23330153
– ಕುಮಾರ ರೈತ