Advertisement

NSS Camp: ನೆನಪುಗಳ ಶಿಖರ- ಎನ್‌ಎಸ್‌ಎಸ್‌ ಶಿಬಿರ

02:47 PM Dec 05, 2023 | Team Udayavani |

ಅದೊಂದು ಚೈತ್ರ ಮಾಸದ ಮುಂಜಾವು.  ಎಂದಿನಂತೆ ಅಲರಾಂ ಇಟ್ಟು ಏಳುವ ದಿನವಲ್ಲ. ಯಾಕೆಂದರೆ ಇದೊಂದು ಸೇವಾ ಶಿಬಿರದಲ್ಲಿ ಆರಂಭವಾಗುವ ದಿನ. ಬೆಳ್ಳಂಬೆಳಗ್ಗೆ ಎದ್ದು ರಂಗೋಲಿ ಇಟ್ಟು, ಧ್ವಜವಂದನೆ, ಪ್ರಾರ್ಥನೆ, ಕವಾಯತು, ನನಗಾಗಿ ಅಲ್ಲ ನಿನಗಾಗಿ ಎಂದು ಮನೆ ಮನವನ್ನು ಪರಿಸರವನ್ನು ಹಸನುಗೊಳಿಸುವ ಕೆಲಸವದು. ವ್ಯಕ್ತಿಗೆ ಮನಸ್ಸಿನ ಸೌಂದರ್ಯ ಮುಖ್ಯವೆಂದು ತಿಳಿಸುವ ಎನ್‌ಎಸ್‌ಎಸ್‌ ಶಿಬಿರವದು. ಶಿಬಿರ ಮುಗಿದು ಆರೇಳು ತಿಂಗಳುಗಳು ಉರುಳಿದರೂ ಅಲ್ಲಿ ಕಲಿತ ಪಾಠ, ಹೊಸ ಸ್ನೇಹಿತರ ಬಳಗ, ಶಿಬಿರದ ದಿನಗಳ ನೆನಪುಗಳು ಮನಸ್ಸಿನಲ್ಲಿ ಮರೆಯಾಗದೆ ಉಳಿದಿವೆ.

Advertisement

ಹೊಸ ಪರಿಚಯ, ಹೊಸ ವಿಷಯ ಎಲ್ಲವೂ ಹೊಸತು. ಕ್ಯಾಂಪಸ್‌ನಲ್ಲಿ ನಡೆಯುವ ಕಾರ್ಯಕ್ರಮಗಳು, ಶಿಬಿರಾರ್ಥಿಗಳೊಂದಿಗಿನ ಹೊಂದಾಣಿಕೆ, ಎಲ್ಲರೂ ಒಂದಾಗಿ ಮಾಡಿದ ದ್ವಜಾರೋಹಣ, ಚುಮು ಚುಮು ಚಳಿಯಲ್ಲೂ ಹಾಡಿದ ಎನ್‌ಎಸ್‌ಎಸ್‌ ಗೀತೆಗಳು, ಘೋಷವಾಕ್ಯಗಳು, ನಾವೇ ನಮ್ಮವರಿಗೆ ಬಡಿಸಿ ತಿಂದ ಊಟ, ಉಪಾಹಾರಗಳು, ಒಂದಾಗಿ ಮಾಡಿದ ಶ್ರಮದಾನ, ನಿದ್ದೆಗಣ್ಣಿನಲ್ಲಿ ಆಲಿಸಲಾಗದಿದ್ದರೂ ಆಲಿಸಿದ ಶೈಕ್ಷಣಿಕ ಕಾರ್ಯಕ್ರಮ, ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮ, ಎಲ್ಲರೊಂದಿಗೆ ಸೇರಿ ಆ ದಿನವನ್ನು ಅವಲೋಕಿಸಿದ ಕ್ಷಣ, ನಮ್ಮಿಂದಾದ ತಪ್ಪುಗಳನ್ನು ತಿದ್ದಿ ನಮ್ಮ ಒಳ್ಳೆಯ ಕೆಲಸ ಕಾರ್ಯಗಳಿಗೆ ನೀಡಿದ ಎನ್‌ಎಸ್‌ಎಸ್‌ ಚಪ್ಪಾಳೆಗಳು, ನಾವು ಮಲಗದೆ, ಶಿಬಿರಾರ್ಥಿಗಳಿಗೂ ಮಲಗಲು ಬಿಡದೆ ಕೊಟ್ಟ ತೊಂದರೆಗಳು, ಒಬ್ಬೊಬ್ಬರ ಮುಖದಲ್ಲಿ ಮೂಡಿಸಿದ ನಗು, ಅಳು. ಶಿಬಿರಜ್ಯೋತಿ, ಭಾರತ ನಕಾಶೆ ರಚಿಸಿ ನಾವೆಲ್ಲರೂ ಒಂದೇ ಎಂದೂ; ಭಾರತವು ಹೊರ ಜಗತ್ತಿಗೆ ಪ್ರಕಾಶಿಸಲೆಂದು ಹಚ್ಚಿದ ಹಣತೆಗಳ ಬೆಳಕು, ಬೆಳಕಿನ ಜತೆಗೆ ಕಂಬನಿ, ಕೊನೆಯ ಬಾರಿಗೆ ಕ್ಯಾಂಪಿನಲ್ಲಿ ಎಲ್ಲರೂ ಒಂದಾಗಿ ಫೋಟೋಗಳನ್ನು ತೆಗೆದು ಒಬ್ಬರನ್ನೊಬ್ಬರು ಬಿಗಿದಪ್ಪಿ ಕಣ್ಣೀರು ಸುರಿಸಿದ ಕ್ಷಣಗಳು ಇಂದಿಗೂ ಮರೆಯಲಾಗದ ನೆನಪುಗಳು.

ಮೊದಲ ದಿನ ಅಪರಿಚಿತರಾಗಿ, ಭೇಟಿಯಾಗಿ, ಹೊಸಬರ ಪರಿಚಯವಾಗಿ ಆ ಪರಿಚಯ ಸ್ನೇಹವಾಗಿ, ಆ ಸ್ನೇಹ ಬಿಟ್ಟಿರಲಾಗದ ಬಂಧವಾಗಿ, ಆ ಬಂಧ ಒಂದು ಪರಿವಾರವಾಗಿ ನಾವೆಲ್ಲರೂ ಒಂದೇ ಎನ್ನುವ ಭಾವನೆಗಳು ಇಂದಿಗೂ ಪ್ರಸ್ತುತವಾಗಿವೆ.

ಕೆ.ಎಂ. ಪವಿತ್ರಾ

ಎಂಜಿಎಂ ಕಾಲೇಜು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next