Advertisement

ಕಚೇರಿಗಳಿಗೆ ತಪ್ಪದ ಉರಿ ಬಿಸಿ

06:15 PM Apr 03, 2022 | Team Udayavani |

ರಾಯಚೂರು: ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ರಣಬಿಸಿಲು ಇರುವ ಕಾರಣಕ್ಕೆ ಏಪ್ರಿಲ್‌, ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡುವ ಪರಿಪಾಟ ಬೆಳೆದು ಬಂದಿತ್ತು.

Advertisement

ಆದರೆ, ಈ ಬಾರಿ ಅದಕ್ಕೆ ಸರ್ಕಾರ ಬ್ರೇಕ್‌ ಹಾಕಿದ್ದು, ಯಥಾ ರೀತಿ ಕೆಲಸ ಮಾಡಲು ಸೂಚಿಸಿದೆ. ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಬೇಸಿಗೆಯ ಎರಡು ತಿಂಗಳಲ್ಲಿ ಈ ವಿನಾಯಿತಿ ಸಿಗುತ್ತಿತ್ತು. ಕಚೇರಿ ಸಮಯವನ್ನು ಬೆಳಗ್ಗೆ 10ರಿಂದ 5 ಗಂಟೆವರೆಗೆ ಇದ್ದ ಸಮಯವನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಗೊಳಿಸಲಾಗುತ್ತಿತ್ತು. ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ಇದರಿಂದ ಸರ್ಕಾರಿ ನೌಕರರಿಗೂ ಅನುಕೂಲವಾಗುತ್ತಿತ್ತು.

ಆದರೆ, ಈಗ ಸರ್ಕಾರದ ನಿರ್ದೇಶನ ಸರ್ಕಾರಿ ನೌಕರರನ್ನು ಬಿಸಿಲಲ್ಲಿ ಬಸವಳಿಯುವಂತೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕಚೇರಿ ಸಮಯ ಬದಲಾವಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು.

ಅದಕ್ಕೆ ಉತ್ತರಿಸಿರುವ ಅಧಿಧೀನ ಕಾರ್ಯದರ್ಶಿಗಳು, ನಿಮ್ಮ ಬೇಡಿಕೆ ಸರಿಯಾಗಿದ್ದರೂ ದೆಹಲಿಯಲ್ಲಿ ಕಲಬುರಗಿಗಿಂತ ಹೆಚ್ಚು ಬಿಸಿಲು ದಾಖಲಾಗುತ್ತಿದೆ. ಆದರೆ, ಅಲ್ಲಿ ಯಾವುದೇ ಕಚೇರಿಗಳ ಸಮಯ ಬದಲಾವಣೆ ಮಾಡಿಲ್ಲ. ಹೀಗಾಗಿ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ, ಕಲುಬುರಗಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಚೇರಿ ಸಮಯ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

43 ಡಿಗ್ರಿ ಸೆಲ್ಸಿಯಸ್‌ ದಾಖಲು: ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿದೆ. ರಾಯಚೂರಿನಲ್ಲಿ ಶುಕ್ರವಾರ 43 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹೆಚ್ಚಾಗಿ ಕಲ್ಲು ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ಬಿಸಿಲಿನ ಉಷ್ಣಾಂಶಕ್ಕಿಂತ ಕಾಯ್ದ ಕಲ್ಲುಗಳಿಂದ ಹೊರಬರುವ ಝಳವೇ ಹೆಚ್ಚಾಗಿರುತ್ತದೆ.

Advertisement

ಈ ಝಳದಿಂದ ಜೀವ ಸಂಕುಲದಲ್ಲಿ ನಿರ್ಜಲೀಕರಣ ಹೆಚ್ಚಾಗುತ್ತದೆ. ಇನ್ನೂ ಸಾಕಷ್ಟು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಸರಿಯಾದ ವ್ಯವಸ್ಥೆ ಕೂಡ ಇಲ್ಲ. ಕೇಂದ್ರ ಕಚೇರಿಗಳಂತೆ ಎಲ್ಲ ಇಲಾಖೆಗಳಲ್ಲೂ ಹವಾ ನಿಯಂತ್ರಿತ ವ್ಯವಸ್ಥೆ ಕೂಡ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಾಹ್ನ 12 ಗಂಟೆ ಮೇಲೆ ಜನ ಓಡಾಡುವುದೇ ಕಷ್ಟ. ಹೀಗಾಗಿ ಸರ್ಕಾರ ಈ ಭಾಗಕ್ಕೆ ಎರಡು ತಿಂಗಳು ವಿನಾಯಿತಿ ನೀಡುವುದೇ ಸೂಕ್ತ ಎನ್ನುವುದು ಸರ್ಕಾರಿ ನೌಕರರ ಅನಿಸಿಕೆ.

 

ಪ್ರತಿ ವರ್ಷ ಸರ್ಕಾರ ಸಮಯ ಬದಲಾವಣೆಗೆ ಆದೇಶ ಮಾಡುತ್ತಿದ್ದ ಕಾರಣ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬೇಸಿಗೆಯ ಎರಡು ತಿಂಗಳು ಕಚೇರಿ ವೇಳೆ ಬದಲಾವಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಸೂಚನೆ ಬಂದಿಲ್ಲ. ಸರ್ಕಾರದ ಆದೇಶಪಾಲಿಸುವುದು ನಮ್ಮ ಕರ್ತವ್ಯ. –ವೆಂಕಟೇಶಕುಮಾರ್‌, ಪ್ರಾದೇಶಿಕ ಆಯುಕ್ತ, ಕೆಕೆಆರ್‌ಡಿಬಿ

 

ಬೇಸಿಗೆ ವೇಳೆ ಕಚೇರಿ ಸಮಯ ಬದಲಾವಣೆ ಮಾಡುವುದು ಕೇವಲ ಸರ್ಕಾರಿ ನೌಕರರಿಗಾಗಿ ಮಾತ್ರವಲ್ಲ. ಬಿರು ಬಿಸಿಲಲ್ಲಿ ದೂರದೂರುಗಳಿಂದ ಬರುವ ಜನರ ಹಿತಕ್ಕಾಗಿಯೂ ಮಾಡಲಾಗಿದೆ. ಬೆಂಗಳೂರು ಭಾಗದ ಅಧಿಕಾರಿಗಳಿಗೆ ಇಲ್ಲಿನ ವಸ್ತುಸ್ಥಿತಿ ತಿಳಿಯುವುದಿಲ್ಲ. ಅವರನ್ನು ಕೆಲ ದಿನಗಳ ಮಟ್ಟಿಗೆ ಈ ಭಾಗಕ್ಕೆ ವರ್ಗಾವಣೆ ಮಾಡಿದರೆ ಇಲ್ಲಿನ ಜನರ ಕಷ್ಟ ತಿಳಿಯುತ್ತದೆ.

– ಡಾ| ರಜಾಕ್‌ ಉಸ್ತಾದ್‌, ಮುಖಂಡ, ಹೈ-ಕ ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next