ಸವಣೂರು: ತಾಲೂಕಿನ ಮಾದಾಪೂರ ಗ್ರಾಮದ ಹತ್ತಿರದಲ್ಲಿರುವ ಡಿಮ್ಡ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾಷ್ಟ್ರ ಪಕ್ಷಿ ನವಿಲುಗಳ ಮಾರಣ ಹೋಮವಾದ ಘಟನೆ ನಡೆದಿದೆ.
14 ನವಿಲುಗಳು ಅರಣ್ಯ ಪ್ರದೇಶದಲ್ಲಿ ಸತ್ತು ಬಿದ್ದಿರುವುದನ್ನು ಕಂಡ ರೈತರು ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪೋನ್ ಕರೆ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಾಲೂಕು ಪಶು ಪಾಲನಾ ಇಲಾಖೆ ವೈದ್ಯಾಧಿಕಾರಿ ಡಾ. ರವೀಂದ್ರ ಹುಜರತ್ತಿ ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆಗೆ ಮುಂದಾದ ಸಂದರ್ಭದಲ್ಲಿ ಒಂದು ನವಿಲು ಜೀವನ ಮರಣ ನಡುವೆ ಹೋರಾಟದಲ್ಲಿ ತೊಡಗಿದ್ದನ್ನು ಕಂಡು ಚಿಕಿತ್ಸೆಗೆ ಮುಂದಾಗಿದ್ದಾರೆ. ಆದರೆ, ಅದೃಷ್ಟವಶಾತ್ ಒಂದು ನವಿಲು ಚಿಕಿತ್ಸೆಗೆ ಸ್ಪಂದಿಸಿ ಜೀವಾಪಾಯದಿಂದ ಪಾರಾಗಿದೆ.
ತಾಲ್ಲೂಕಿನಲ್ಲಿರುವ ಸಾವಿರಾರು ನವಿಲು ಹಾಗೂ ಕಾಡು ಪ್ರಾಣಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಪದೇ ಪದೇ ಇಂತಹ ದುರ್ಘಟನೆಗಳು ನಡಿಯುತ್ತಿವೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತ ಪಡೆಸಿದರು.
ದುಂಡಸಿ ಅರಣ್ಯ ಇಲಾಖೆ ಆರ್ ಎಫ್ಓ ವೈ.ಆರ್.ನದಾಫ ಮಾತನಾಡಿ, ಅರಣ್ಯ ಇಲಾಖೆ ಜಮೀನು ಡಿಮ್ಡ್ ಅರಣ್ಯ ಪ್ರದೇಶವಾಗಿರುವ (ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ) ಹಿನ್ನಲೆಯಲ್ಲಿ ಈ ಭಾಗದಲ್ಲಿರುವ ಪ್ರಾಣಿ, ಪಕ್ಷಿಗಳ ಕುರಿತು ಇಲಾಖೆ ವತಿಯಿಂದ ಯಾವುದೇ ರೀತಿಯ ಸರ್ವೇ ಕಾರ್ಯವನ್ನು ಕೈಗೊಂಡಿಲ್ಲ. ಈ ಕುರಿತು ವರದಿಯನ್ನು ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನವಿಲುಗಳ ಮಾರಣ ಹೋಮಕ್ಕೆ ನಿಖರ ಮಾಹಿತಿಯನ್ನು ಪಡೆದು ತಿಳಿಸಲಾಗುವುದು ಎಂದರು.
ಜಗನ್ನಾಥ ಚಪ್ಪರದ, ಕಾರಡಗಿ ಗ್ರಾಪಂ ಅಧ್ಯಕ್ಷ ಮೌಲಾಲಿ ಸವಣೂರು, ಸದಸ್ಯರಾದ ಶಿವಶಂಕರ ಸೊಪ್ಪಿನ, ಬಸವರಾಜ ಹರಕುಣಿ, ಮಹೇಶ ಅತ್ತಿಗೆರಿ, ಕಾಸಿಂಸಾಬ್ ಓಲೇಕಾರ, ಅರುಣ ವಾಲ್ಮೀಕಿ, ಮೋದಿನ್ಸಾಬ್ ಖಾನಬಾಯಿ, ಶಂಭು ಹರಿಜನ ಸೇರಿದಂತೆ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಜಮೀನುಗಳ ರೈತರು ಇದ್ದರು.
ಇದನ್ನೂ ಓದಿ: ಪೈಲಟ್ ಮಾಡಿದ ಎಡವಟ್ಟಿಗೆ 3 ತಿಂಗಳು ಅಮಾನತು ಶಿಕ್ಷೆ, ಏರ್ ಲೈನ್ಸ್ ಗೆ 30 ಲಕ್ಷ ರೂ. ದಂಡ