Advertisement

ನವಿಲು ಗರಿ ಮರಿ ಹಾಕಿದೆ ಕಣೇ…

12:30 AM Jan 01, 2019 | |

ನೀನು ಕಣ್ಣಿಗೆ ಬಿದ್ದ ಕ್ಷಣ ರೋಮಗಳು ನಿಮಿರಿದವು. ಬಾಯಿ ಒಣಗಿ, ಹೃದಯ ತಾಳ ತಪ್ಪಿತು. ಪಿಯುಸಿಯ ಕೊನೆಯ ಮೆಟ್ಟಿಲು ಇಳಿದು ತಿರುಗಿ ನೋಡುತ್ತಾ ಹೋದವಳು ಇವತ್ತು ಈ ಜಾತ್ರೆಯಲ್ಲಿ ಪ್ರತ್ಯಕ್ಷವಾದರೆ ನನಗಾದರೂ ಹೇಗಾಗಬೇಡ!

Advertisement

ಜಾತ್ರೆಯ ಜೋರು ಗಲಾಟೆ ನಡುವೆ ನನ್ನ ಕೂಗು ನಿನ್ನ ಕಿವಿ ಮುಟ್ಟಲೇ ಇಲ್ಲ. ಇನ್ನಷ್ಟು ಅಬ್ಬರಿಸಿ ಕೂಗುವ ಪ್ರಯತ್ನ ಮಾಡಲಿಲ್ಲ ನಾನು. ನೋಡುವವರು ಏನೆಂದುಕೊಂಡಾರು ಅಂತಂದುಕೊಂಡು ಸುಮ್ಮನಾದೆ. ನೀನು ಕಣ್ಣಿಗೆ ಬಿದ್ದ ಕ್ಷಣ ರೋಮಗಳು ನಿಮಿರಿದವು. ಬಾಯಿ ಒಣಗಿ, ಹೃದಯ ತಾಳ ತಪ್ಪಿತು. ಪಿಯುಸಿಯ ಕೊನೆಯ ಮೆಟ್ಟಿಲು ಇಳಿದು ತಿರುಗಿ ನೋಡುತ್ತಾ ಹೋದವಳು ಇವತ್ತು ಈ ಜಾತ್ರೆಯಲ್ಲಿ ಪ್ರತ್ಯಕ್ಷವಾದರೆ ನನಗಾದರೂ ಹೇಗಾಗಬೇಡ!

ಹಣೆಯ ಮೇಲಿರುತ್ತಿದ್ದ ಒಂದು ಕಪ್ಪನೆಯ ಚುಕ್ಕಿ ಈಗ ಕೆಂಪಾಗಿತ್ತು. ಗಾತ್ರವೂ ದೊಡ್ಡದಿತ್ತು. ಕಾಲೇಜಲ್ಲಿ ಒಮ್ಮೆಯು ಹೂವು ಮುಡಿಯದಿದ್ದ ನೀನು ಇಂದು ತಲೆ ತುಂಬಾ ಹೂ ಮುಡಿದಿದೆ! ಕೈ ತುಂಬಾ ಬಳೆಗಳು. ಪಕ್ಕದಲ್ಲಿ ನಿನ್ನ ಕೈ ಹಿಡಿದು ತರ್ಲೆ ಮಾಡುತ್ತಾ ನಡೆಯುತ್ತಿದ್ದ ಮಗು. ಎರಡು ಬಾರಿ ಕೂಗಿದವನು ಮೂರನೇ ಬಾರಿ ಕೂಗುವ ಪ್ರಯತ್ನ ಬಿಟ್ಟು ಸುಮ್ಮನೆ ನೋಡುತ್ತಾ ನಿಂತೆ. ಜಾತ್ರೆಯ ಮಧ್ಯೆ ಸೌಂದರ್ಯದ ತೇರು ಸಾಗಿತ್ತು. ಕಾಲೇಜಿನಲ್ಲಿದ್ದೆಯಲ್ಲ; ಆ ದಿನಗಳ ನಿನ್ನನ್ನು ನೆನಪಿಸಿಕೊಂಡ ನನಗೆ ಹೂವು, ದೊಡ್ಡ ಬಿಂದಿ, ಪಕ್ಕದಲ್ಲೊಂದು ಮಗು ಕಲ್ಪನೆಗೂ ನಿಲುಕದ್ದು ನೋಡು.

ಹಾಗೆ ಕೂಗಿ ಕೂಗಿ ನಿನ್ನ ಕರೆಯುತ್ತಿರಲಿಲ್ಲವೇನು! ಆದರೆ ನಿನ್ನ ಬಳಿ ಏನೋ ಹೇಳುವುದಿತ್ತು. ನೀ ಕೊಟ್ಟ ನವಿಲುಗರಿ ಈಗ ಮರಿ ಹಾಕಿದೆ. ನೆನಪಿದೆಯಾ ನಿನಗೆ? ಎರಡನೇ ಪಿಯುಸಿ ಮೆಟ್ಟಿಲು ತುಳಿಯುವ ಹೊತ್ತಿಗೆ ಕಣ್ಣಿನಲ್ಲಿದ್ದ ಸಲುಗೆ ಹೃದಯಕ್ಕೆ ಇಳಿದಿತ್ತು.   ನಿತ್ಯವೂ ಎದುರುಬದುರಾಗಿ ಪರಸ್ಪರ ನಗು ಬಾಚಿಕೊಳ್ಳದಿದ್ದರೆ ಏನೋ ಗಲಿಬಿಲಿ. ಇಂಗ್ಲಿಷ್‌ ನೋಟ್ಸ್‌ ಕೊನೆಯ ಪುಟದಲ್ಲಿ ನಿನ್ನ ಹೆಸರು ಬರೆದುಕೊಂಡಿದ್ದೀನಿ ಅನ್ನುವ ಪುಕಾರು ಕಾಲೇಜಿಗೆ ಹಬ್ಬಿತ್ತು. ಆದರೂ ನನ್ನೆಡೆಗಿನ ನಿನ್ನ ನಗುವಿನಲ್ಲಿ ಒಂದೇ ಒಂದು ಗ್ರಾಂ ಕೂಡ ಕಡಿಮೆಯಾಗಿರಲಿಲ್ಲ. ಪುಕಾರು ಕರಗಿತ್ತು, ಅವತ್ತು ನೀನು ಎದುರಿಗೆ ನಿಂತು ಅದೇ ಇಂಗ್ಲಿಷ್‌ ನೋಟ್ಸ್‌ ಕೇಳಿದ್ದೆ. ಬೆವತು, ಕೈ ಕಾಲು ನಡುಗಿಸಿಕೊಂಡು, ತೊದಲುತ್ತ ನಿನ್ನ ಕೈಗೆ ಇಂಗ್ಲಿಷ್‌ ನೋಟ್ಸ್‌ ಇಟ್ಟು ತಿರುಗಿ ನೋಡದೆ ಹೋಗಿದ್ದೆ. ಮರುದಿನ ಅದೇ ನಗುವಿನ ಜೊತೆ ಬಂದು ನನ್ನ ಮುಂದೆ ನಿಂತಾಗ ಒಂಚೂರು ಗಲಿಬಿಲಿ. ನನ್ನ ಕೈಯಲ್ಲಿ ನೋಟ್ಸ್‌ ಇಟ್ಟು, ಕಣ್ಣು ಮಿಟುಕಿಸಿ ತಿರುಗಿ ನೋಡುತ್ತಾ ನೀನು ಹೊರಟುಬಿಟ್ಟೆ. ಒಂದೇ ಉಸಿರಿಗೆ ಆಸೆಬುರುಕನಂತೆ ಕೊನೆಯ ಪುಟ ತೆಗೆದು ನೋಡಿದೆ. ನಾನು ಬರೆದ ನಿನ್ನ ಹೆಸರಿನ ಕೆಳಗೆ ನೀನು ನನ್ನ ಹೆಸರು ಬರೆದಿದ್ದೆ! ಜೊತೆಗೊಂದು ಪುಟ್ಟ ನವಿಲುಗರಿ.

ಅಂದಿನಿಂದ ಇಂಗ್ಲಿಷ್‌ ನೋಟ್ಸ್‌ ನನ್ನ ಬಾಳಿನ ಭಗವದ್ಗೀತೆಯಾಯ್ತು. ಅದನ್ನು ಜೋಪಾನವಾಗಿ ಎತ್ತಿಟ್ಟುಕೊಂಡೆ; ಪರೀಕ್ಷೆಗೂ ಓದದೆ! ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಪರೀಕ್ಷೆ ಬಾಗಿಲು ಬಡಿದಿತ್ತು. ನೀನು ಮತ್ತೆ ಬಂದು ಇಂಗ್ಲಿಷ್‌ ನೋಟ್ಸ್‌ ಕೇಳಿದಾಗ ಹುಡುಕಾಡಿ ಸೋತು ಹೋದೆ. ಮನೆಯಲ್ಲಿ ಇಟ್ಟಿದ್ದು ನಾಪತ್ತೆಯಾಗಿತ್ತು. ಕೊಟ್ಟ ನವಿಲುಗರಿ ಕಳೆದುಕೊಂಡಿದ್ದಕ್ಕೆ ನೀನು ಬೇಸರಿಸಿಕೊಂಡೆ. ಪರೀಕ್ಷೆ ಮುಗಿದು ನಾವು ಹೊರಟು ಬಿಟ್ಟೆವು. ನೀನು ಮೆಟ್ಟಿಲಿಳಿದು ತಿರುಗಿ ನೋಡಿ ಮರೆಯಾದ ಮೇಲೆ ನಿನ್ನನ್ನು ನೋಡುತ್ತಿರುವುದು ಇವತ್ತೇ! 

Advertisement

ನಮ್ಮಿಬ್ಬರ ಹೆಸರುಗಳನ್ನು ಬರೆಸಿಕೊಂಡ ಆ ಪುಸ್ತಕ ಸಿಕ್ಕಿದೆ. ಇಂದಿಗೂ ಜೋಡಿ ಹೆಸರುಗಳು ನಿಗಿನಿಗಿ. ನೀ ಕೊಟ್ಟ ನವಿಲುಗರಿ ಅದೆಷ್ಟೊ ನೆನಪುಗಳ ಮರಿ ಹಾಕಿದೆ. ಮರಿಗಳನ್ನು ಸಂಭಾಳಿಸುವುದೇ ನನಗೆ ಸಾಕಾಗಿದೆ; ಬೇಕಾಗಿದೆ! ನಿತ್ಯವೂ ಕೊನೆಯ ಪುಟ ತೆರೆದು ಜೋಡಿ ಹೆಸರುಗಳ ಮೇಲೆ ಬೆರಳಾಡಿಸುತ್ತೇನೆ. ನವಿಲು ಗರಿ ಹೇರುವ ನೆನಪುಗಳ ಮರಿಗಳೊಂದಿಗೆ ಮಾತಾಗುತ್ತೇನೆ. ಏನೋ ಸಡಗರ, ಖುಷಿ ಮತ್ತು ಸಮಾಧಾನ. ನಿನ್ನ ಮುಂದೆ ನಿಂತು ನಿನಗೆ ಎರಡು ನವಿಲುಗರಿ ಮರಿಗಳನ್ನು ಕೊಡುವವನಿ¨ªೆ. ಜಾತ್ರೆಯ ಸದ್ದು ಪ್ರೀತಿಗೆ ಅಡ್ಡಬರುವ ಅಪ್ಪಂದಿರ ಥರ ವರ್ತಿಸಿತು ನೋಡು… 

ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next