ರಾಮನಗರ: ಇದುವರೆಗೆ ಆನೆ, ಚಿರತೆ, ಕರಡಿ ಹೀಗೆ ಮಾನವರ ಮೇಲೆ ದಾಳಿ ಮಾಡುತ್ತಿದ್ದ ದೊಡ್ಡ ದೊಡ್ಡ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುತ್ತಿದ್ದ ಅರಣ್ಯ ಇಲಾಖೆಗೆ, ಇದೀಗ ನವಿಲಿನ ಸರದಿ.
ಹೌದು.., ನವಿಲು ಮಾನವರ ಮೇಲೆ ದಾಳಿ ಮಾಡಿದ ಉದಾಹರಣೆ ತೀರಾ ಅಪರೂಪ. ಆದರೆ, ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಮಹಿಳೆ ಯೊಬ್ಬರ ಮೇಲೆ ನವಿಲು ದಾಳಿ ಮಾಡಿದೆ. ಈ ಹಿಂದೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಳಿಮಾಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದು, ಜನರ ಮೇಲೆ ದಾಳಿಮಾಡುತ್ತಿ ರುವ ನವಿಲು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ 3 ದಿನಗಳಿಂದ ಕಸರತ್ತು ನಡೆಸುತ್ತಿದ್ದಾರೆ. ಇದುವರೆಗೆ ಕಾಡಾನೆ, ಚಿರತೆ, ಕರಡಿ ಮಾನವರ ಮೇಲೆ ದಾಳಿಮಾಡುತ್ತಿದ್ದವು. ಆದರೆ, ಇದೀಗ ನವಿಲು ರೈತ ಮಹಿಳೆಯ ಮೇಲೆ ದಾಳಿ ಮಾಡಿದೆ. ನವಿಲು ದಾಳಿ ಸುದ್ದಿ ತಿಳಿದು ಕಂಗಾಲಾಗಿರುವ ಜನತೆ, ನವಿಲಿನ ಹಾವಳಿಯಿಂದ ಮುಕ್ತಿ ಕೊಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊರೆಯಿಟ್ಟಿದ್ದಾರೆ.
ನವಿಲಿನಿಂದ ಗಾಯಗೊಂಡ ಮಹಿಳೆ: ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಲಿಂಗಮ್ಮ ಎಂಬವರು ತಮ್ಮ ಹಿತ್ತಲಿ ನಲ್ಲಿ ಕೆಲಸ ಮಾಡುತ್ತಿದ್ದಾಗ ಮನೆ ಮೇಲೆ ನವಿಲು ಕಾಣಿಸಿಕೊಂಡಿದೆ. ಹಿತ್ತಲಿನಲ್ಲಿ ಹಾಕಿದ್ದ ಗಿಡಗಳನ್ನು ಹಾಳು ಮಾಡುತ್ತದೆ ಎಂದು ನವಿಲನ್ನು ಓಡಿಸಲು ಹೋದ ಇವರ ಕಣ್ಣಿಗೆ ಕುಕ್ಕಲು ಮುಂದಾ ಗಿದೆ. ತಕ್ಷಣ ಇವರು ತಪ್ಪಿಸಿಕೊಂಡ ಹಿನ್ನೆಲೆ ಹಣೆ ಮೇಲೆ ಕುಕ್ಕಿ ಗಾಯಗೊಳಿಸಿದೆ. ದಾಳಿಯಿಂದ ತೀವ್ರ ಗಾಯ ಗೊಂಡಿದ್ದ ಇವರು ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದು, ಹಣೆಗೆ ಹೊಲಿಗೆ ಹಾಕಿದ್ದಾರೆ. ಮಹಿಳೆ ಇದೀಗ ನವಿಲು ಸೆರೆ ಹಿಡಿ ಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಜನರಿಗೆ ಅಂಜದೇ ದಾಳಿ ಮಾಡುತ್ತಿರುವ ನವಿಲು: ಸಾಮಾನ್ಯವಾಗಿ ನವಿಲು ಜನರಿಂದ ದೂರ ಇರುತ್ತದೆ. ಸಂಕೋಚದ ಪಕ್ಷಿಯಾದ ನವಿಲು ಜನ ಕಾಣುತ್ತಿದ್ದಂತೆ ಓಡಿಹೋಗುತ್ತದೆ. ಆದರೆ, ಅರಳಾಳುಸಂದ್ರ ಗ್ರಾಮದಲ್ಲಿ ಜನರ ಮೇಲೆ ದಾಳಿ ಮಾಡುತ್ತಿರುವ ನವಿಲು, ಜನರನ್ನು ಕಂಡರೆ ಅಂಜದೆ ಅವರ ಮೇಲೆ ದಾಳಿ ಮಾಡಲು ಮುಂದಾಗುತ್ತಿದೆ. ನವಿಲಿನ ಈ ವರ್ತನೆ ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಗ್ರಾಮದಲ್ಲಿ ಮನೆಗಳ ಮೇಲೆ ಬಂದು ಕೂರುವ ನವಿಲಿನಿಂದಾಗಿ ಜನ ಭಯ ಬಿದ್ದಿದ್ದಾರೆ.
3 ದಿನದಿಂದ ಅರಣ್ಯ ಇಲಾಖೆ ಕಾರ್ಯಾಚರಣೆ: ಅರಳಾಳುಸಂದ್ರ ಗ್ರಾಮದಲ್ಲಿ ಮಹಿಳೆ ಸೇರಿ ನಾಗರಿಕರ ಮೇಲೆ ದಾಳಿ ಮಾಡುತ್ತಿರುವ ನವಿಲನ್ನು ಸೆರೆ ಹಿಡಿಯಲು ಇದೀಗ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ನಿತ್ಯವೂ ಮನೆಗಳ ಮೇಲೆ ಬಂದು ಕೂರುತ್ತಿರುವ ನವಿಲು, ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಇದರಿಂದಾಗಿ ಸ್ಥಳೀಯರು ಭಯ ಭೀತರಾಗಿದ್ದಾರೆ. ಈ ಹಿಂದೆಯೇ ಇನ್ನಿಬ್ಬರಿಗೆ ಕುಕ್ಕಿದೆ. ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನವಿಲು ಹಿಡಿಯಲು ನಿಯೋಜಿಸಿದ್ದು, ಕಳೆದ 3 ದಿನಗಳಿಂದ ನವಿಲು ಸೆರೆಗೆ ಮುಂದಾಗಿದ್ದಾರೆ.
ನಾನು ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದಾಗ ನವಿಲು ಕಾಣಿಸಿಕೊಂಡಿತು. ಓಡಿಸುವು ದಕ್ಕೆ ಹೋದಾಗ ನನ್ನತ್ತ ಹಾರಿ ಬಂದು ದಾಳಿ ಮಾಡಿ ಕಣ್ಣಿಗೆ ಕುಕ್ಕಲು ಮುಂದಾಯಿತು. ನಾನು ಅಲುಗಾಡಿದ ಕಾರಣ, ಹಣೆಗೆ ಕುಕ್ಕಿ ಗಾಯಮಾಡಿದೆ. ತಡವಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ಹಿಡಿಯಲು ಮನವಿ ಮಾಡಿದ್ದೇನೆ. ನನ್ನಂತೆ ಗ್ರಾಮದಲ್ಲಿ ಇನ್ನೂ ಇಬ್ಬರ ಮೇಲೆ ಇದೇ ನವಿಲು ದಾಳಿ ಮಾಡಿದೆ.
– ಲಿಂಗಮ್ಮ, ನವಿಲಿನ ದಾಳಿಯಿಂದ ಗಾಯಗೊಂಡಿರುವ ಮಹಿಳೆ
ಮಹಿಳೆ ಮೇಲೆ ದಾಳಿ ಮಾಡಿರುವ ನವಿಲನ್ನು ಹಿಡಿಯಲು ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. 3 ದಿನಗಳಿಂದ ನವಿಲಿಗಾಗಿ ವಾಚ್ ಮಾಡುತ್ತಿದ್ದೇವೆ. ಅದನ್ನು ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯಕ್ಕೆ ಸ್ಥಳಾಂತರ ಮಾಡಲಾಗುವುದು. ಗಾಯಗೊಂಡಿರುವ ಮಹಿಳೆಗೆ ಇಲಾಖೆ ವತಿಯಿಂದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುವುದು.
– ಕಿರಣ್‌ಕುಮಾರ್, ಆರ್‌ಎಫ್‌ಒ, ಚನ್ನಪಟ್ಟಣ