ಬೆಂಗಳೂರು: ರಾಜಧಾನಿಯ 26 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ನಡೆದ ಮತದಾನ ಪ್ರಕ್ರಿಯೆ ವೇಳೆ ಸಣ್ಣ ಪುಟ್ಟ ಗಲಾಟೆ, ಹಲ್ಲೆ, ಮಾತಿನ ಚಕಮಕಿ ಘಟನೆಗಳನ್ನು ಹೊರತುಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಗರ ಪೊಲೀಸ್ ಇಲಾಖೆ ಯಶಸ್ವಿಯಾಯಿತು.
ಸಾಕಷ್ಟು ಬಿಗಿ ಭದ್ರತೆ, ಕಟ್ಟು ನಿಟ್ಟಿನ ಕ್ರಮಗಳ ನಡುವೆಯೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿವೇಕ್‌ನಗರದಲ್ಲಿ ಹಣ ಹಂಚಿಕೆ ಆರೋಪದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಎನ್.ಎ ಹ್ಯಾರಿಸ್ ಸಹೋದರ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದ ವಿವೇಕನಗರ ಠಾಣೆ ಪೊಲೀಸರು ಬಳಿಕ ಮಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟು ಕಳುಹಿಸಿದರು.
ಹಣ ಹಂಚಿಕೆ ವೇಳೆ ಉಂಟಾದ ಗಲಾಟೆ ವೇಳೆ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ವಿಜಯನಗರದಲ್ಲಿ ಮತಚೀಟಿ ಹಂಚಿಕೆ ವಿಚಾರ ಕುರಿತು ಉಂಟಾದ ಜಗಳದಲ್ಲಿ ಬಿಜೆಪಿ ಕಾರ್ಪೋರೇಟರ್ ಆನಂದ್ ಹೊಸೂರ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆಯಿತು. ಈ ಸಂಬಂಧ ಇಬ್ಬರ ಬಂಧನವಾಗಿದೆ.
ಹೆಬ್ಟಾಳ ಕ್ಷೇತ್ರದ ಗೋಪಾಲ್ ನಾರಾಯಣನ್ ಸರ್ಕಾರಿ ಶಾಲೆಯ ಮತಗಟ್ಟೆ ಸಮೀಪ ಓಟು ಚಲಾಯಿಸುವ ಕಾರಣಕ್ಕೆ ಬಿಜೆಪಿ ಕಾರ್ಯಕರ್ತ ಸತೀಶ್ ಶೆಟ್ಟಿ ಹಾಗೂ ಮತ್ತಿತರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿದ ಬಳಿಕ ಮತದಾನ ಪ್ರಕ್ರಿಯೆ ಮುಂದುವರಿಯಿತು. ಆದರೆ, ಘಟನೆ ಸಂಬಂಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಎಂಎಲ್‌ಎ ಬಡಾವಣೆಯ ಬೋಸ್ಟ್‌ನ್ ಶಾಲೆ ಮತಗಟ್ಟೆಯಲ್ಲಿ ಗುರುತಿನ ಪತ್ರ ವಿಚಾರಕ್ಕೆ ಮತಗಟ್ಟೆ ಅಧಿಕಾರಿಗಳು ಹಾಗೂ ಮಹಿಳಾ ಮತದಾರೆ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಆಧಾರ್ ಕಾರ್ಡ್ ಪರಿಶೀಲನೆ ಬಳಿಕ ಅಂತಿಮವಾಗಿ ಮಹಿಳೆಗೆ ಮತದಾನ ಮಾಡಲು ಅವಕಾಶ ನೀಡಲಾಯಿತು.
ಉಳಿದಂತೆ ಮತದಾನ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ 10,500 ನಗರ ಪೊಲೀಸರು, 44 ಕಂಪೆನಿಗಳ ಕೇಂದ್ರೀಯ ಮೀಸಲು ಪಡೆ 4,500 ಮಂದಿ ಸಿಬ್ಬಂದಿ, 35 ಕೆಎಸ್‌ಆರ್‌ಪಿ ತುಕಡಿ, 550 ಸೆಕ್ಟರ್ ಮೊಬೈಲ್(ಪಿಎಸ್‌ಐ), 150 ಸೂಪರ್‌ವೈಸರಿ ಮೊಬೈಲ್(ಪಿಐ), 50 ಎಸಿಪಿ ಮೊಬೈಲ್ ಪಾರ್ಟಿ ಸಿಬ್ಬಂದಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಿಯೋಜನೆಗೊಂಡಿದ್ದವು.
ಧನ್ಯವಾದ ಅರ್ಪಿಸಿದ ಆಯುಕ್ತ: ನಗರದೆಲ್ಲೆಡೆ ಶಾಂತಿಯುತ ಮತದಾನ ಯಶಸ್ವಿಗೊಳಿಸಿದ್ದಕ್ಕೆ ಸಾರ್ವಜನಿಕರು, ಪೊಲೀಸ್ ಸಿಬ್ಬಂದಿ, ಕೇದ್ರೀಯ ಮೀಸಲು ಪಡೆಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಟ್ವೀಟರ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ.