Advertisement

ಸದ್ದಿಲ್ಲದೆ ನಡೆಯುತ್ತಿದೆ ಪರಿಷತ್‌ ಚುನಾವಣೆಯ ಪ್ರಚಾರ !

06:20 AM Apr 19, 2018 | |

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಎಲ್ಲೆಡೆಯೂ ಭರ್ಜರಿ ಪ್ರಚಾರ ನಡೆಯುತ್ತಿದೆ. ಇದರ ಮಧ್ಯೆಯೇ ಸದ್ದಿಲ್ಲದೆ ವಿಧಾನ ಪರಿಷತ್‌ ಚುನಾವಣೆಯ ಪ್ರಚಾರವೂ ನಡೆಯುತ್ತಿದೆ!

Advertisement

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು,ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕು ವ್ಯಾಪ್ತಿಯನ್ನು ಹೊಂದಿರುವ ವಿಧಾನ ಪರಿಷತ್‌ ನೈಋತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಕ್ಕೆ  ಜೂನ್‌ ತಿಂಗಳಲ್ಲಿ ಚುನಾ ವಣೆ ನಡೆಯಲಿದ್ದು, ಕಾಂಗ್ರೆಸ್‌- ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಚಾರ ಕಾರ್ಯವನ್ನೂ ಆರಂಭಿಸಿವೆ.

ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಕ್ಕೆ ಇಬ್ಬರು ಸದಸ್ಯರು ಆಯ್ಕೆಗೊಳ್ಳಲಿದ್ದು, ಅವರ ಕ್ಷೇತ್ರ ವಿಶಾಲವಾಗಿರುವುದರಿಂದ ಪ್ರಸ್ತುತ ತಮ್ಮ ಸಾಧನೆಯನ್ನು ಬಿಂಬಿಸುವ ಕರಪತ್ರಗಳನ್ನು ಅಂಚೆ ಮೂಲಕ ಕಳುಹಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಪ್ರಚಾರ ಮಧ್ಯೆ ಇವರ ಪ್ರಚಾರ ಸದ್ದಿಲ್ಲದೆ ಮುಂದುವರಿದಿದೆ.
 
ಮೂರು ಪಕ್ಷಗಳ ಅಭ್ಯರ್ಥಿಗಳು
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಆಯನೂರು ಮಂಜುನಾಥ ಹಾಗೂ ಶಿಕ್ಷಕ ಕ್ಷೇತ್ರಕ್ಕೆ ಕ್ಯಾ| ಗಣೇಶ್‌ ಕಾರ್ಣಿಕ್‌ ಅಭ್ಯರ್ಥಿಗಳಾದರೆ, ಕಾಂಗ್ರೆಸ್‌ನಿಂದ ಪದವೀಧರ ಕ್ಷೇತ್ರಕ್ಕೆ ಎಸ್‌.ಪಿ.ದಿನೇಶ್‌, ಶಿಕ್ಷಕ ಕ್ಷೇತ್ರಕ್ಕೆ ಕೆ.ಕೆ. ಮಂಜುನಾಥ್‌ ಕುಮಾರ್‌ ಅಭ್ಯರ್ಥಿಯಾಗಿದ್ದಾರೆ. ಜತೆಗೆ ಜೆಡಿಎಸ್‌ನಿಂದ ಪದವೀಧರ ಕ್ಷೇತ್ರಕ್ಕೆ ಅಶ್ವಿ‌ನ್‌ ಜೆ.ಪಿರೇರ ಮೂಡಬಿದಿರೆ, ಶಿಕ್ಷಕ ಕ್ಷೇತ್ರಕ್ಕೆ ಎಸ್‌.ಎಲ್‌. ಭೋಜೇಗೌಡ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾರೆ. 

ಈ ಆರು ಮಂದಿ ಅಭ್ಯರ್ಥಿಗಳಲ್ಲಿ ಬಿಜೆಪಿಯ ಕ್ಯಾ| ಗಣೇಶ್‌ ಕಾರ್ಣಿಕ್‌ ಹಾಗೂ ಜೆಡಿಎಸ್‌ನ ಅಶ್ವಿ‌ನ್‌ ಜೆ. ಪಿರೇರ ಮೂಡಬಿದಿರೆ ಅವರು ದ.ಕ. ಜಿಲ್ಲೆ ಯವರಾಗಿದ್ದಾರೆ. ಕ್ಯಾ| ಗಣೇಶ್‌ ಕಾರ್ಣಿಕ್‌ ಅವರು ಹಾಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಪದವೀಧರ ಕ್ಷೇತ್ರದ ಅಭ್ಯರ್ಥಿಗಳಾದ ಎಸ್‌.ಪಿ. ದಿನೇಶ್‌ ಹಾಗೂ ಆಯನೂರು ಮಂಜುನಾಥ ಅವರು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಕೆ.ಕೆ. ಮಂಜುನಾಥ್‌ ಕುಮಾರ್‌ ಅವರು ಕೊಡಗು ಜಿಲ್ಲೆ ಹಾಗೂ ಭೋಜೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.
 
ಹಬ್ಬದ ಶುಭಾಶಯ
ಮತದಾರರಿಗೆ ಕರಪತ್ರಗಳ ಜತೆಗೆ ಹಬ್ಬಗಳ ಶುಭಾ ಶಯಗಳನ್ನೂ ಕಳುಹಿಸುತ್ತಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಕಳೆದ ಮಾ. 18ರ ಚಾಂದ್ರಮಾನ ಯುಗಾದಿಯಿಂದ ಜೂನ್‌ 16ರ ರಮ್ಜಾನ್‌ ವರೆಗಿನ ಹಬ್ಬಗಳಿಗೆ ಶುಭಾಶಯ ಕೋರಿದ್ದಾರೆ. ಜತೆಗೆ ಕರಪತ್ರದಲ್ಲಿ ತಮ್ಮ ಸಾಧನೆ, ಪಕ್ಷದ ಸಾಧನೆ, ಜತೆಗೆ ಪದವೀಧರರು, ಶಿಕ್ಷಕರ ಸಮಸ್ಯೆಗಳಿಗೆ ತಮ್ಮ ಪಕ್ಷ ಯಾವ ರೀತಿಯ ಸಾಧನೆ ಮಾಡಿದೆ ಎಂಬುದನ್ನು ಕರಪತ್ರದಲ್ಲಿ ವಿವರಿಸಿದ್ದಾರೆ.

ಈ ಚುನಾವಣೆಯಲ್ಲಿ ಪ್ರಾಶಸ್ತÂದ ಮತದಾನದ ಪದ್ಧತಿ ಇರುವುದರಿಂದ ಯಾವ ರೀತಿ ಮತ ಹಾಕಬೇಕು ಎಂಬ ಕುರಿತು ಕೂಡ ಕರಪತ್ರದಲ್ಲಿ ವಿವರಿಸಿದ್ದಾರೆ. 

Advertisement

ಈ ರೀತಿಯಲ್ಲಿ ಎಲ್ಲ ಅಭ್ಯರ್ಥಿಗಳು ಸದ್ದಿಲ್ಲದೆ ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದು, ವಿಧಾನಸಭಾ ಚುನಾವಣೆಯ ಬಳಿಕ ಇವರ ಪ್ರಚಾರ ಹೆಚ್ಚಿನ ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next