ಹೊಸದಿಲ್ಲಿ: ಪುಲ್ವಾಮಾ ದಾಳಿಯ ಅನಂತರ ಭಾರತದ ಪ್ರತಿದಾಳಿ ಹಾಗೂ ರಾಜತಾಂತ್ರಿಕ ಒತ್ತಡದಿಂದಾಗಿ ಪಾಕಿಸ್ಥಾನ ಪಾಠ ಕಲಿತಿದೆ. ಗಡಿಯಲ್ಲಿ ನಿಯೋಜಿಸಿದ್ದ ಹೆಚ್ಚುವರಿ ಸೇನೆಯನ್ನು ಹಿಂಪಡೆಯಲು ಪಾಕಿಸ್ಥಾನ ಸಮ್ಮತಿಸಿದೆ. ಪಾಕ್ ಸೇನೆಯೊಂದಿಗೆ ಭಾರತೀಯ ಸೇನೆ ನಡೆಸಿದ ಮಾತುಕತೆಯಿಂದ ಇದು ಸಾಧ್ಯವಾಗಿದೆ ಎಂದು ರಕ್ಷಣಾ ವಿಭಾಗದ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ. ಉಭಯ ದೇಶಗಳ ಡಿಜಿಎಂಇ ಮಟ್ಟದ ಅಧಿಕಾರಿಗಳ ಮಾತುಕತೆ ವೇಳೆ ಸ್ಪೆಷಲ್ ಸರ್ವೀಸ್ ಗ್ರೂಪ್ ಹಿಂಪಡೆಯಲು ಪಾಕಿಸ್ತಾನ ಸಮ್ಮತಿಸಿದೆ. ಪಡೆಯನ್ನು ಪುಲ್ವಾಮಾ ದಾಳಿಯ ನಂತರ ಪಾಕ್ ನಿಯೋಜಿಸಿತ್ತು. ಈ ಬಗ್ಗೆ ಪ್ರಧಾನಿ ಸಚಿವಾಲಯಕ್ಕೆ ಸೇನೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಭಾರತವು ಪಾಕಿಸ್ಥಾನಕ್ಕೆ ಸೇನೆಯ ಮೂಲಕ ಒತ್ತಡ ಹಾಕಿದ್ದಷ್ಟೇ ಅಲ್ಲ, ರಾಜತಾಂತ್ರಿಕವಾಗಿಯೂ ಒತ್ತಡ ಹಾಕಿದೆ. ಜೈಶ್ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಲ್ಲಿ ಅಮೆರಿಕ, ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳು ಭಾರತದ ಬೆಂಬಲಕ್ಕೆ ನಿಂತಿರುವುದು ಹಾಗೂ ಹಣಕಾಸು ದುರ್ಬಳಕೆ ಮೇಲೆ ವಿಚಕ್ಷಣೆ ಹೊಂದಿರುವ ಎಫ್ಎಟಿಎಫ್ ಮೇಲೆ ಭಾರತ ಒತ್ತಡ ಹಾಕಿರುವುದೂ ಪಾಕಿಸ್ಥಾನಕ್ಕೆ ದುಃಸ್ವಪ್ನವಾಗಿ ಕಾಡಿದೆ.
ಒಳನುಸುಳುವಿಕೆ ಇಲ್ಲ: ಪುಲ್ವಾಮಾಗೆ ಪ್ರತಿ ದಾಳಿ ನಡೆಸಿದ ನಂತರದಲ್ಲಿ ಯಾವುದೇ ಒಳನುಸುಳುವಿಕೆ ಪ್ರಯತ್ನಗಳು ಪಾಕ್ ಕಡೆಯಿಂದ ನಡೆದಿಲ್ಲ. ಗಡಿಯಾಚೆಯಿಂದ ಯಾವುದೇ ದಾಳಿ ನಡೆಸುವ ಪ್ರಯತ್ನಗಳೂ ನಡೆದಿಲ್ಲ.
ಉಗ್ರ ನೆಲೆ ಬಂದ್: ಗಡಿ ನುಸುಳಿ ಭಾರತಕ್ಕೆ ಬರಲು ಉಗ್ರರು ಬಳಸುತ್ತಿದ್ದ ಉಗ್ರ ನೆಲೆಗಳು ಈಗ ಖಾಲಿಯಾಗಿವೆ. ಎಲ್‌ಒಸಿ ಬಳಿ ಇದ್ದಂತಹ ಉಗ್ರ ನೆಲೆಗಳು ತಾತ್ಕಾಲಿಕವಾಗಿ ಮುಚ್ಚಿವೆ. ಇದಕ್ಕೆ ಪಾಕ್ ಮೇಲೆ ಭಾರತದ ಒತ್ತಡವೇ ಕಾರಣ ಎಂದು ವರದಿ ಹೇಳಿದೆ. ಪೂಂಛ… ಹಾಗೂ ರಜೌರಿ ವಲಯದಲ್ಲೂ ಉಗ್ರರ ಸಂಖ್ಯೆ ಕಡಿಮೆಯಾಗಿದೆ. ಇದು ಪಾಕಿಸ್ಥಾನವು ಪಾಠ ಕಲಿಯುತ್ತಿದೆ ಎಂಬುದನ್ನು ಸೂಚಿಸುವ ಸಂಕೇತಗಳು. ಇತ್ತೀಚೆಗಷ್ಟೇ ಮಳೆಗಾಲ ಆರಂಭಕ್ಕೂ ಮುನ್ನ ಸಾಮಾನ್ಯವಾಗಿ ಮಾಡಲಾಗುವಂತೆ ಬಂಕರ್‌ಗಳನ್ನು ರಿಪೇರಿ ಮಾಡುವಾಗ ಪಾಕಿಸ್ಥಾನ ಯಾವ ಆಕ್ಷೇಪವನ್ನೂ ಎತ್ತಿಲ್ಲ. ಅಷ್ಟೇ ಅಲ್ಲ, ಪುಲ್ವಾಮಾಗೆ ಪ್ರತಿ ದಾಳಿ ನಡೆಸಿದ ನಂತರ ಪಾಕಿಸ್ಥಾನ ಗಡಿಯಲ್ಲಿ ನಡೆಸುವ ಗುಂಡಿನ ದಾಳಿಯ ಪ್ರಮಾಣವೂ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.