Advertisement
ಸಮಾಜದಲ್ಲಿ ಇಂದು ಪರಸ್ಪರ ಅಸಹನೆ, ದ್ವೇಷ, ಅಸೂಯೆ ಹೆಚ್ಚುತ್ತಿದೆ. ಅದೆಲ್ಲವನ್ನೂ ತೊಡೆದು ಹಾಕಿ, ಜಾತಿ-ಧರ್ಮಗಳಾ ಚೆಗಿರುವ ಮನುಷ್ಯ ಧರ್ಮದ ಮಂತ್ರ ಪಠಿಸ ಬೇಕು. ಈ ನಿಟ್ಟಿನಲ್ಲಿ ಬಸವಣ್ಣನವರು ಹೇಳಿದಂತೆ ಎಲ್ಲರನ್ನೂ “ಇವ ನಮ್ಮವ ಇವ ನಮ್ಮವ’ ಎಂಬುದಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.
Related Articles
Advertisement
ಶಾಂತಿ, ಅಭಿವೃದ್ಧಿ ಒಟ್ಟೊಟ್ಟಿಗೆ ಸಾಗಲಿ; ಸಿದ್ದಲಿಂಗ ಸ್ವಾಮೀಜಿ: ತುಮಕೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಹುಟ್ಟು-ಸಾವಿಗಿಂತ ಬದುಕಿಗೆ ಒತ್ತುಕೊಟ್ಟವರು ಬಸವಣ್ಣ. ಅಷ್ಟೇ ಅಲ್ಲ, ಮನುಷ್ಯನಾಗಿ ಬಾಳುವುದನ್ನು ಕಲಿಸಿಕೊಟ್ಟರು. 12ನೇ ಶತಮಾನದಲ್ಲಿ ಬಾಳಿ ಬದುಕಿದ ಅವರು ಹಚ್ಚಿದ ಹೊಸ ಬೆಳಕಿನಲ್ಲಿ ನಾವೆಲ್ಲರೂ ಹೆಜ್ಜೆ ಇಡಬೇಕು. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿ ಒಟ್ಟೊಟ್ಟಿಗೆ ಸಾಗಬೇಕೆಂದು ಹೇಳಿದರು.
ಸಂಜೀವಿನಿ ನೀಡುವ ಯತ್ನ; ಮಂತ್ರಾಲಯ ಶ್ರೀ: ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, ಸಂಕುಚಿತ ಭಾವನೆಗಳು ಸಮಾಜದ ಒಡಕಿಗೆ ಕಾರಣವಾಗುತ್ತವೆ. ಮುಖ್ಯವಾಗಿ ಶಾಂತಿ-ಸೌಹಾರ್ದತೆಯನ್ನು ಕದಡುತ್ತವೆ. ಆದ್ದರಿಂತ ಅಂತಹ ಅನಗತ್ಯ ಆಲೋಚನೆಗಳಿಗೆ ಒತ್ತು ಕೊಡದೆ, ಪ್ರಗತಿಪರ ಚಿಂತನೆಗಳು, ಲೋಕಕಲ್ಯಾಣಕ್ಕೆ ಒತ್ತು ಕೊಡಬೇಕು. ಅಶಾಂತಿಯಿಂದ ತತ್ತರಿಸುತ್ತಿರುವ ಸಮಾಜಕ್ಕೆ ಇಂತಹ ಸಮಾವೇಶಗಳು ಸಂಜೀವಿನಿ ನೀಡುವ ಪ್ರಯತ್ನವಾಗಿದೆ ಎಂದು ವಿಶ್ಲೇಷಿಸಿದರು.
ಬಾವಿಯೊಳಗಿನ ನೀರು-ಕಸ; ಸಿದ್ದರಾಮಯ್ಯ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮನುಕುಲದ ಉದ್ಧಾ ರಕ್ಕೆ ಕಾಲಕಾಲಕ್ಕೆ ಶರಣರು, ಸೂಫಿ-ಸಂತರು ಪ್ರಯತ್ನಿಸಿದ್ದಾರೆ. ಆದರೆ, ಅದು ಬಾವಿ ಯ ಲ್ಲಿನ ನೀರಿನಂತಾಗಿದೆ. ಹಗ್ಗ ಹಾಕಿ ಬಿಂದಿಗೆಯಿಂದ ನೀರೆತ್ತು ವಾಗೊಮ್ಮೆ ಕಸ ದೂರ ಹೋಗುತ್ತದೆ. ಮತ್ತೆ ಅಲ್ಲಿಯೇ ಬಂದು ಕೂರುತ್ತದೆ. ಮೌಡ್ಯ, ಕಂದಾಚಾರಗಳು ಶಾಶ್ವತವಾಗಿ ದೂರವಾಗ ಬೇಕು. ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು ಎಂದರು.
ವೀರಶೈವ-ಲಿಂಗಾಯತ ಸಮಾಜ ಕೆಣಕಿದ ಸಿದ್ದು; ಸೋಮಣ್ಣ: ಸಚಿವ ವಿ.ಸೋಮಣ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೀರಶೈವ-ಲಿಂಗಾ ಯತ ಸಮಾಜವನ್ನು ಸ್ವಲ್ಪ ಕೆಣಕಿದ್ದಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮುಖ್ಯ ಮಂತ್ರಿಯಾಗಲು ಸಾಧ್ಯವಾಯಿತು. ರಾಜ್ಯಕ್ಕೆ ಸಿದ್ದರಾಮಯ್ಯನವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಪರ ಯೋಜನೆಗಳನ್ನು ಯಡಿಯೂರಪ್ಪನವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲವನ್ನೂ ಮಾಡಿದರು.
ಆದರೆ, ಸಮಾಜವನ್ನು ಸ್ವಲ್ಪ ಕೆಣಕಿದರು. ಅದು ಯಡಿಯೂರಪ್ಪ ಅವರಿಗೆ ಅಧಿಕಾರ ಸಿಗುವಂತೆ ಮಾಡಿತು ಎಂದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿ ಯುವಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿದರು. ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಮಾಜಿ ಶಾಸಕ ಅಶೋಕ್ ಖೇಣಿ ಮತ್ತಿತರರು ಉಪಸ್ಥಿತರಿದ್ದರು.
ಸಮಾನತೆ ಪಕ್ಷ!: ರಾಜ್ಯದಲ್ಲಿ ಈಗ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷವಿಲ್ಲ. ಸಮಾನತೆ ಪಕ್ಷ ಇದೆ! – ಹೀಗಂತ ತುಮಕೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಿಶ್ಲೇಷಿಸಿದರು. ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತ ಪಕ್ಷ ಇದೆಯೋ ಅಥವಾ ವಿರೋಧ ಪಕ್ಷ ಇದೆಯೋ ಎಂದು ಕೇಳುತ್ತಾರೆ. ಇದು ಸಮಾನತೆಯ ಪಕ್ಷ ಎಂದರೆ ತಪ್ಪಾಗದು ಎಂದರು.
ಆಧ್ಯಾತ್ಮಿಕ ಯಾನ ಆರಂಭ; ಮುರುಘಾಶ್ರೀ: ಬೆಳಗ್ಗೆ 8ಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಧ್ವಜಾರೋಹಣದ ಮೂಲಕ ಗಣಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಎಲ್ಲ ಸ್ವಾಮೀಜಿಗಳು ಸೇರಿಕೊಂಡರೆ ಗಣ. ಈ ಗಣಕ್ಕೆ ಭಕ್ತರು ಕೂಡಿದರೆ ಅಮರಗಣವಾಗಲಿದೆ. 21ನೆ ಶತಮಾನವನ್ನು 12ನೇ ಶತಮಾನವನ್ನಾಗಿ ಪರಿವರ್ತಿಸುವ ಪ್ರಯತ್ನವೇ ಈ ಗಣಮೇಳ. ಆಧುನಿಕ ಜಗತ್ತು ಎದುರಿಸುತ್ತಿರುವ ಆಪತ್ತು, ಅವರಲ್ಲಿರುವ ಬೇಸರ, ಆತಂಕಕ್ಕೆ ಪರಿಹಾರವಾಗಿ ಈ ಆಧ್ಯಾತ್ಮಿಕ ಯಾನ ಆರಂಭಿಸಲಾಗಿದೆ ಎಂದರು.
ಲಕ್ಷ ಜನ ಭೇಟಿ: ಗಣಮೇಳಕ್ಕೆ ಸುಮಾರು ಲಕ್ಷ ಜನ ಭೇಟಿ ನೀಡಿದ್ದಾರೆಂದು ಅಂದಾಜಿಸಲಾಗಿದೆ. ದಾವಣಗೆರೆಯಿಂದ 100, ಚಿತ್ರದುರ್ಗ 100, ತುಮಕೂರು, ಶಿವಮೊಗ್ಗ, ಹಾವೇರಿ, ಬಳ್ಳಾರಿ ಮತ್ತಿತರ ಭಾಗಗಳಿಂದ ಸಾವಿರಕ್ಕೂ ಅಧಿಕ ಬಸ್‌ಗಳಲ್ಲಿ ಭಕ್ತಸಾಗರ ಹರಿದು ಬಂದಿತ್ತು. ಇದಲ್ಲದೆ, ಬಹುದೂರದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು, ನೆರೆಯ ರಾಜ್ಯಗಳ ಜನ ರೈಲಿನಲ್ಲಿ ಆಗಮಿಸಿದ್ದರು. ಅವರೆಲ್ಲರಿಗೂ ರೈಲು ನಿಲ್ದಾಣದಿಂದ ನಂದಿ ಮೈದಾನಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಬಂದ ಭಕ್ತರಿಗೆಲ್ಲ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆಯಿಂದ ಸಂಜೆಯವರೆಗೆ ದಾಸೋಹ: ಬೆಳಗ್ಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಊಟಕ್ಕೆ ಪಲಾವ್, ಮೊಸರುಬಾಜಿ, ಲಾಡು, ಮೈಸೂರು ಪಾಕ್, ತರಕಾರಿ ಪಲ್ಯ, ಜೋಳದ ರೊಟ್ಟಿಯ ವ್ಯವಸ್ಥೆ ಮಾಡಲಾಗಿತ್ತು. ಚಿತ್ರದುರ್ಗದಿಂದ ಸುಮಾರು ಮೂರು ನೂರಕ್ಕೂ ಹೆಚ್ಚು ಬಾಣಸಿಗರು ಪ್ರಸಾದ ತಯಾರಿಯಲ್ಲಿ ತೊಡಗಿದ್ದರು. ಊಟಕ್ಕೆ 50 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಬೆಳಗ್ಗೆ 6ರಿಂದ ಸಂಜೆ 7ರವರೆಗೆ ದಾಸೋಹ ನಡೆಯಿತು ಎಂದು ಗಣಮೇಳ ಕಾರ್ಯದರ್ಶಿ ಶ್ರೀನಿವಾಸ್ ಮಾಹಿತಿ ನೀಡಿದರು.
ಉತ್ತರ ಭಾರತದ ಬುದ್ಧ ಮತ್ತು ದಕ್ಷಿಣ ಭಾರತದ ಬಸವಣ್ಣನ ಮೂಲಕ ಸಂಸ್ಕೃತಿಯನ್ನು ಬೆಸೆಯುವ ಪ್ರಯತ್ನವನ್ನು ಮುರುಘಾ ಶರಣರು “ವಂಡರ್ ವಂಡರ್’ ಕೃತಿ ಮೂಲಕ ಮಾಡಿದ್ದಾರೆ.-ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ