ಹೊಸದಿಲ್ಲಿ: ‘ಪ್ರಾದೇಶಿಕ ಶಾಂತಿ ಕಾಪಾಡ ಬೇಕೆಂದರೆ ಹಿಂಸೆ ಬಿಡಿ; ನಂಬಿಕೆ ಉಳಿಸಿಕೊಳ್ಳಿ’
-‘ಶಾಂತಿ ಬೇಕು’ ಎಂಬ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮನವಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಖಡಕ್ ಉತ್ತರ ಇದು.
ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರಿಗೆ ರವಿವಾರ ಇಮ್ರಾನ್ ಖಾನ್ ಖುದ್ದು ದೂರವಾಣಿ ಕರೆ ಮಾಡಿ ಮಾತನಾಡಿದರು. ‘ಎರಡೂ ದೇಶಗಳ ಜನರ ಒಳಿತಿಗಾಗಿ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಿಕೊಳ್ಳೋಣ ಹಾಗೂ ಜತೆಯಾಗಿ ಮುಂದೆ ಸಾಗೋಣ’ ಎಂದು ಇಮ್ರಾನ್ ಖಾನ್ ಅವರು ಮೋದಿಯವರನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ‘ಈ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿ ಕಾಪಾಡಿಕೊಳ್ಳಬೇಕೆಂದರೆ ಹಿಂಸಾಚಾರ ಮತ್ತು ಉಗ್ರವಾದ ಮುಕ್ತ ಪರಿಸರವನ್ನು ನಿರ್ಮಿಸಬೇಕು ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳಬೇಕು’ ಎಂದಿದ್ದಾರೆ. ಅಲ್ಲದೆ ನಮ್ಮದು ನೆರೆರಾಷ್ಟ್ರ ಸ್ನೇಹಿ ನೀತಿ ಯಾಗಿದ್ದು, ನಾವು ಜಂಟಿಯಾಗಿ ಬಡತನದ ವಿರುದ್ಧ ಸಮರ ಸಾರಬೇಕು ಎಂಬ ನಮ್ಮ ಹಿಂದಿನ ಮಾತುಗಳನ್ನೇ ಪುನರು ಚ್ಚರಿಸುತ್ತಿದ್ದೇನೆ ಎಂದೂ ಮೋದಿ ಹೇಳಿದ್ದಾರೆ. ದೂರವಾಣಿ ಕರೆ ಮಾಡಿ ಅಭಿನಂದಿಸಿದ ಖಾನ್‌ಗೆ ಧನ್ಯವಾದವನ್ನೂ ಮೋದಿ ಸಲ್ಲಿಸಿದ್ದಾರೆ.
ಕಳೆದ ಫೆ. 14ರಂದು ಪುಲ್ವಾಮಾದಲ್ಲಿ ಪಾಕ್ ಮೂಲದ ಜೈಶ್ ಉಗ್ರರು ಆತ್ಮಾಹುತಿದಾಳಿ ನಡೆಸಿ 40 ಸಿಆರ್‌ಪಿಎಫ್ ಯೋಧ ರನ್ನು ಹತ್ಯೆಗೈದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ಥಾನದ ನಡುವಿನ ಪ್ರಕ್ಷುಬ್ಧತೆ ತೀವ್ರಗೊಂಡಿತ್ತು. ಅನಂತರ ಭಾರತದ ವಾಯು ಪಡೆಯು ಪಾಕ್‌ನ ಬಾಲಾಕೋಟ್ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಅನಂತರ ಎರಡೂ ದೇಶಗಳ ವಾಯುಪಡೆ ಯುದ್ಧ ಸನ್ನಿವೇಶಕ್ಕೆ ತಯಾರಾಗಿತ್ತು.
ಖಾನ್ ಮಾತ್ರವಲ್ಲದೆ, ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ನೇಪಾಲದ ಮಾಜಿ ಪ್ರಧಾನಿ ಮಾಧವ್ ನೇಪಾಲ್ ಸಹಿತ ಹಲವು ವಿಶ್ವ ನಾಯಕರೂ ರವಿವಾರ ಮೋದಿಯವರ ಗೆಲುವಿಗೆ ಅಭಿನಂದಿಸಿದ್ದಾರೆ.