Advertisement

ಶಾಂತಿಯೇ ಬಾಹುಬಲಿ ಸಂದೇಶ

11:58 AM Jan 24, 2018 | |

ಬೆಂಗಳೂರು: ಜಗತ್ತಿನಲ್ಲಿ ಶಾಂತಿ, ತ್ಯಾಗ ಮತ್ತು ಸಹಬಾಳ್ವೆಯೇ ಶಾಶ್ವತ. ವಿಶ್ವ ಶಾಂತಿಯೇ ಬಾಹುಬಲಿಯ ಸಂದೇಶ ಎಂದು ಶಾಸಕ ಅಭಯ್‌ಚಂದ್ರ ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತು ಸಹಯೋಗದಲ್ಲಿ ಮಹಾಮಸ್ತಕಾಭಿಷೇಕ ಅಂಗವಾಗಿ ಮಂಗಳವಾರ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದ್ದ ಶ್ರವಣಬೆಳಗೊಳದ ಭಿತ್ತಿಚಿತ್ರ ಪ್ರದರ್ಶನ ಉದ್ಘಾಟಿಸಿ ಶಾಸಕರು ಮಾತನಾಡಿದರು. ಈ ಪ್ರದರ್ಶನ 31ರವರೆಗೆ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯಲಿದೆ ಎಂದರು.

ಹೊಸದು ಬಂದಾಗ ಹಳೆಯದನ್ನು ನಾವು ಮರೆತು ಬಿಡುತ್ತೇವೆ. ಅದೇ ರೀತಿ ಹೊಸ ಚಿತ್ರಗಳು ಬಂದಾಗ ಹಳೆ ಚಿತ್ರಗಳು ಮೂಲೆ ಸೇರುತ್ತವೆ. ಆದರೆ ಅವುಗಳನ್ನು ಸಂರಕ್ಷಿಸುವ ಮೂಲಕ ಯುವಜನರಿಗೆ ಇತಿಹಾಸದ ಅರಿವು ಮೂಡಿಸುವ ಕಾರ್ಯವಾಗಬೇಕು. ತಂತ್ರಜ್ಞಾನಕ್ಕೆ ಪೂರಕವಾಗಿ ಬೆಳೆಯಬೇಕು ಅನ್ನುವುದು ನಿಜ.

ಆದರೆ, ಈಗಿನ ಯುವಕರು ತಮ್ಮ ಜೀವನದ ಬಹುಪಾಲನ್ನು ಇಂಟರ್ನೆಟ್‌, ಮೊಬೈಲ್‌ಗ‌ಳ ಗೀಳಿಗೆ ಬಿದ್ದು, ಜೀವನೋತ್ಸಾಹವೇ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಭಿತ್ತಚಿತ್ರಗಳ ಮೂಲಕ ಜೈನ ಪರಂಪರೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಇತಿಹಾಸ ಜ್ಞಾಪಿಸುವ ಕೆಲಸ ಶ್ಲಾಘನೀಯ ಎಂದರು.

ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ. ಪದ್ಮಾಶೇಖರ್‌ ಮಾತನಾಡಿ, ನಮ್ಮ ಪೂರ್ವಜರು ಬಿಟ್ಟಿ ಹೋದ ಜ್ಞಾನಸಂಪತ್ತು ಇಡೀ ವಿಶ್ವವನ್ನೇ ಗೆಲ್ಲುವಷ್ಟಿದೆ. ಭಾರತೀಯ ಪರಂಪರೆ ಬಹುಮುಖದ್ದು. ಅದರಲ್ಲೂ ಕರ್ನಾಟಕ ಇತಿಹಾಸವೇ ಜೈನ ಇತಿಹಾಸವೆಂದರೆ ಅತಿಶಯೋಕ್ತಿಯಲ್ಲ.

Advertisement

ಜೈನ ಕವಿಗಳು, ಸಾಹಿತಿಗಳು, ಜೈನ ರಾಜರುಗಳ ಕೊಡುಗೆ ಸಾಕಷ್ಟಿದೆ. ಗತ ವೈಭವವನ್ನು ಯುವಕರು ಅರಿಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಎಂ.ಜೆ.ಕಮಲಾಕ್ಷಿ ಮಾತನಾಡಿ, ಫೆಬ್ರವರಿಯಲ್ಲಿ ಜರುಗಲಿರುವ ಶ್ರವಣಬೆಳಗೊಳ ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಪೂರಕವಾಗಿ ಜೈನ ಧರ್ಮದ ಇತಿಹಾಸವನ್ನು ಕಲಾವಿದರು ತಮ್ಮ ಕಲಾಕುಂಚದಲ್ಲಿ ಅಚ್ಚುಮೂಡಿಸಿದ್ದರು.

ಅವುಗಳು ಲಲಿತಕಲಾ ಅಕಾಡೆಮಿ ಆಸ್ತಿಯಾಗಿದ್ದು, ಅಳಿದುಳಿದ ಕಲಾಕೃತಿಗಳನ್ನು ಸಂರಕ್ಷಿಸಿ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಹೇಳಿದರು. ಅಕಾಡೆಮಿ ರಿಜಿಸ್ಟ್ರಾರ್‌ ಎಚ್‌.ವಿ.ಇಂದ್ರಮ್ಮ, ಚಿತ್ರಕಲಾ ಪರಿಷತ್ತು ಉಪಾಧ್ಯಕ್ಷ ರಾಮಕೃಷ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next