ಲಕ್ಷ್ಮೇಶ್ವರ: ಭೌತಿಕ ಬದುಕಿಗೆ ಸಂಪತ್ತಿನೊಂದಿಗೆ ಶಿವಜ್ಞಾನದ ಅರಿವು ಮುಖ್ಯ. ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸಕಲಗಳನ್ನು ಪಡೆಯಬೇಕು. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು.
Advertisement
ಅವರು ರವಿವಾರ ತಾಲೂಕಿನ ಶ್ರೀರಂಭಾಪುರಿ ಶಾಖಾ ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜನ ಸಮುದಾಯದಲ್ಲಿ ತಾಳ್ಮೆ ಮತ್ತುಸಹನೆಯ ಗುಣ ಇಲ್ಲದಿರುವುದೇ ಇಂದಿನ ಅಶಾಂತಿ, ಅತೃಪ್ತಿಗಳಿಗೆ ಮೂಲ ಕಾರಣ.
ನೀರು, ಬೀಸುವ ಗಾಳಿ ಮತ್ತು ನಮ್ಮೆಲ್ಲರನ್ನು ಹೊತ್ತ ನೆಲ ಪರೋಪಕಾರವನ್ನು ಎತ್ತಿ ತೋರಿಸುತ್ತವೆ. ನದಿಯ ನೀರನ್ನು ಎಷ್ಟು ತುಂಬಿದರೂ ಕಡಿಮೆ ಹೇಗೆ ಆಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಪೂರ್ಣವಾಗದು. ಜಾತಿ ಮತ್ತು ಮತೀಯ ಮೌಡ್ಯ ಅಳೆದು ಸ್ನೇಹ, ಸೌಜನ್ಯ ಉಳಿದು ಬೆಳೆಯಬೇಕು. ಹಣ ಮತ್ತು ಅ ಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ದೇಶ, ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಚಿಂತಿಸಲಾರ. ಅಧ್ಯಾತ್ಮ ಸಾಧನೆಗೆ ಮತ್ತು
ಭಗವಂತನ ಸ್ಮರಣೆಗೆ ಮಾತ್ರ ಸಮಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವುದು ನೋವಿನ ಸಂಗತಿ.
Related Articles
Advertisement
ಧರ್ಮಜಾಗೃತಿ ಸಮಾರಂಭ ಉದ್ಘಾಟಿಸಿದ ಹುಬ್ಬಳ್ಳಿಯ ಡಾ| ಎಸ್.ಪಿ. ಬಳಿಗಾರ ಮಾತನಾಡಿ, ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ದೂರದೃಷ್ಟಿ ಮತ್ತು ವಿಶ್ವ ಬಂಧುತ್ವದ ಚಿಂತನೆಗಳು ನಮ್ಮೆಲ್ಲರ ಬಾಳಿಗೆ ದಾರಿದೀಪ. ಸಿದ್ಧಿ ಸಾಧನೆಯ ಮೇರು ಪರ್ವತದಂತಿದ್ದ ಜಗದ್ಗುರುಗಳು ಅಧ್ಯಾತ್ಮ ಜ್ಞಾನದ ಅರಿವು ಮೂಡಿಲು ಸದಾ ಶ್ರಮಿಸಿದ್ದನ್ನು ಮರೆಯಲಾಗದು. ಅವರು ತೋರಿದ ದಾರಿಯಲ್ಲಿ ನಡೆಯುವುದೇ ಅವರಿಗೆ ಅರ್ಪಿಸುವ ನಿಜವಾದ ಕೃತಜ್ಞತೆಯಾಗಿದೆ. ಮಕ್ಕಳಷ್ಟೇ ಅಲ್ಲ ದೊಡ್ಡವರೂ ಮೊಬೈಲ್, ಟಿವಿಗಳ ದುರಭ್ಯಾಸದಿಂದ ಹೊರ ಬರದಿದ್ದರೆ ಬದುಕು ಹಾಳಾಗುತ್ತದೆ. ಮಕ್ಕಳಿಗೆಬಾಲ್ಯದಲ್ಲೇ ದೇವರು, ಧರ್ಮ, ಮಠ-ಮಾನ್ಯಗಳ ಬಗ್ಗೆ ಪೂಜ್ಯನೀಯ ಭಾವನೆ, ನಂಬಿಕೆ, ಶೃದ್ಧೆ, ಭಕ್ತಿ ಮೂಡಿಸಬೇಕು ಎಂದರು. ಶಾಸಕ ಡಾ| ಚಂದ್ರು ಲಮಾಣಿ ಮಾತನಾಡಿ, ಶ್ರೀಕ್ಷೇತ್ರದ ಧಾರ್ಮಿಕ ಸೇವೆಯ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುತ್ತೇನೆ. ರಾಜ್ಯ ಸರ್ಕಾರ ರಸ್ತೆ ಸೇರಿ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಲ್ಪಿಸುತ್ತಿಲ್ಲ. ಅನುದಾನ ಮಂಜೂರಾದ ಕೂಡಲೇ ಧರ್ಮಕ್ಷೇತ್ರ ಸಂಪರ್ಕಿಸುವ ರಸ್ತೆ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡುವ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದರು. ನೇತೃತ್ವ ವಹಿಸಿದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಅಧ್ಯಾತ್ಮ ಲೋಕದಲ್ಲಿ ಧ್ರುವ ನಕ್ಷತ್ರ. ಅವರ ಆದರ್ಶ ಜೀವನ, ಸಂದೇಶ ಭಕ್ತ ಸಂಕುಲಕ್ಕೆ ಆಶಾ ಕಿರಣ. ಅವರು ಸಂಕಲ್ಪಿಸಿದ ತ್ರಿಕೋಟಿ ಶಿವಲಿಂಗ ಪ್ರಾಣ ಪ್ರತಿಷ್ಠಾಪನೆಗೆ ಇದೀಗ ಕಾಲ ಕೂಡಿ ಬಂದಿದೆ. ಈ ಪುಣ್ಯಕಾರ್ಯ ಪೂರ್ಣಗೊಂಡ ಬಳಿಕ ಶ್ರೀಕ್ಷೇತ್ರ ಪ್ರಸಿದ್ಧಿ ಪಡೆಯಲಿದೆ ಎಂದು ಹರುಷ ವ್ಯಕ್ತಪಡಿಸಿದರು. ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ್ದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಕುಸುಮಾವತಿ ಸಿ. ಶಿವಳ್ಳಿ, ಸೋಮಣ್ಣ ಡಾಣಗಲ್ ಮಾತನಾಡಿದರು. ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಕಲಾದಗಿಯ ಗಂಗಾಧರ ಶಿವಾಚಾರ್ಯರು, ಲಕ್ಷ್ಮೇಶ್ವರದ ಮಳೆಮಲ್ಲೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು. ಧರ್ಮಕ್ಷೇತ್ರದ ಸೇವಾಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ನೀಡಲಾಯಿತು. ಡಾ| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪಲ್ಲಕ್ಕಿ ಉತ್ಸವ, ಧರ್ಮ ರಥೋತ್ಸವ ಹಾಗೂ ಕಡುಬಿನ ಕಾಳಗ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.