Advertisement

“ಪರಸ್ಪರ ವಿಶ್ವಾಸದಿಂದ ದೇಶದಲ್ಲಿ ಶಾಂತಿ ಸಾಧ್ಯ’

03:45 AM Jan 10, 2017 | Team Udayavani |

ಮಂಗಳೂರು: ಮನುಷ್ಯನ ಮಧ್ಯೆ ಪರಸ್ಪರ ವಿಶ್ವಾಸ ಇದ್ದಾಗ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಲು ಸಾಧ್ಯ. ನಮ್ಮನ್ನು ನಾವು ಧರ್ಮದ ಮೂಲಕ ಗುರುತಿಸಿಕೊಳ್ಳುವುದಕ್ಕಿಂತಲೂ ಭಾರತೀಯರಾಗಿ ಗುರುತಿಸಿಕೊಳ್ಳಬೇಕು. ಪ್ರತಿ ವ್ಯಕ್ತಿಯೊಳಗೂ ದೇವರಿದ್ದು, ನಾವೆಲ್ಲರೂ ದೇವರ ಅಂಶವಾಗಿದ್ದೇವೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಥ್‌ನ ಮಾರ್ಗದರ್ಶಕ ಇಂದ್ರೇಶ್‌ ಕುಮಾರ್‌ ಹೇಳಿದರು. 

Advertisement

ಅವರು ಸೋಮವಾರ ನಗರದ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ರೈಟ್ಸ್‌ ಅವೇರ್‌ನೆಸ್‌ ಆ್ಯಂಡ್‌ ನಾಲೆಡ್ಜ್
ಸೊಸೈಟಿ (ರ್‍ಯಾಂಕ್‌) ವತಿಯಿಂದ ಶಾಂತಿ, ಸೌಹಾರ್ದ ಹಾಗೂ ರಾಷ್ಟ್ರೀಯ ಭಾವೈಕ್ಯಕ್ಕಾಗಿ ನಡೆದ ಅಂತರ್‌ ಧರ್ಮೀಯ ಬೌದ್ಧಿಕ ಸಮಾವೇಶದಲ್ಲಿ ಮಾತನಾಡಿದರು. 

ಕೆಲವೊಂದು ಸಂದರ್ಭ ನಮ್ಮ ಅಸ್ತಿತ್ವ ಬದಲಾಗದಿದ್ದರೂ ನಿಷ್ಠೆ ಬದಲಾಯಿಸಿಕೊಳ್ಳುತ್ತೇವೆ. ಇದು ಶಾಂತಿಗೆ ಭಂಗ ತರುತ್ತದೆ. ಹೀಗಾಗಿ ನಾವು ಜಾತಿ, ಧರ್ಮ ಬದಿಗಿಟ್ಟು ದೇಶಕ್ಕೆ ನಿಷ್ಠರಾಗಿ ಬದುಕಬೇಕು ಎಂದರು. 

ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ನಿಸ್ವಾರ್ಥ ಶಾಂತಿಗೆ ಮೂಲವಾಗಿದ್ದು, ಸ್ವಾರ್ಥ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಶಾಂತಿ ನಮ್ಮ ಜೀವನದ ಪರಮ ಉದ್ದೇಶವಾಗಿರಬೇಕು. ಭಗವದ್ಗೀತೆಯಲ್ಲಿ ಕೃಷ್ಣನೂ ಅದನ್ನೇ ಹೇಳಿದ್ದಾನೆ.

ಭಾರತದಲ್ಲಿ ಹಲವು ಜಾತಿ-ಧರ್ಮಗಳಿದ್ದರೂ ಇಡೀ ಜಗತ್ತಿಗೆ ಶಾಂತಿ ಸಾರಿದ ಏಕೈಕ ರಾಷ್ಟ್ರ ಭಾರತ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದರು. 

Advertisement

ಹೊಸದಿಲ್ಲಿಯ ಮುಖ್ಯ ಇಮಾಮ್‌ ಡಾ| ಇಮಾಮ್‌ ಉಮರ್‌ ಅಹ್ಮದ್‌ ಇಲಿಯಾಸ್‌ ಮಾತನಾಡಿ, ನಮ್ಮ ಜಾತಿ-ಧರ್ಮಗಳು ಕೇವಲ ನಮ್ಮ ಮನೆಗೆ ಸೀಮಿತವಾಗಬೇಕು. ಆದರೆ ಸಮಾಜದಲ್ಲಿ ನಾವು ಭಾರತೀಯರಾಗಿ ಸಹೋದರತೆಯಿಂದ ಬದುಕುವುದನ್ನು ಕಲಿಯಬೇಕು. ಪರಸ್ಪರ ಆತ್ಮೀಯತೆಯಿಂದ ಬದುಕಿದಾಗ ದೇಶಕ್ಕೂ ಅದರಿಂದ ಒಳಿತಾಗುತ್ತದೆ ಎಂದರು. 

ದ.ಕ. ಖಾಝಿ ಶೈಖುನ್ನಾ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಮಾತನಾಡಿ, ಶಾಂತಿಯೇ ಇಸ್ಲಾಂ ಧರ್ಮದ ಮೂಲ ಮಂತ್ರ ಎಂದರು. ಮಿಲಾಗ್ರಿಸ್‌ ಚರ್ಚ್‌ನ ಧರ್ಮಗುರು ರೆ| ಫಾ| ವಲೇರಿಯನ್‌ ಡಿ’ಸೋಜಾ ಮಾತನಾಡಿ, ಧರ್ಮಕ್ಕಿಂತಲೂ ನಾವು ಮೊದಲು ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು ಎಂದರು.
 
ರಮೇಶ್‌ ಗುರೂಜಿ ಕಣ್ಣೂರು, ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್‌ ರಶೀದ್‌ ಉಪಸ್ಥಿತರಿದ್ದರು.ರ್‍ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ಕೃಷ್ಣಮೂರ್ತಿ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next