Advertisement

ಹೆಣ್ಣಿಗೆ ತಾಯಿ ಸ್ಥಾನ ನೀಡಿದ್ದರಿಂದ ದೇಶದಲ್ಲಿ ಶಾಂತಿ

05:45 PM Apr 09, 2022 | Team Udayavani |

ರಾಣಿಬೆನ್ನೂರ: ಭಾರತದಲ್ಲಿ ಮಾತ್ರ ಹೆಣ್ಣಿಗೆ ತಾಯಿ ಸ್ಥಾನ ನೀಡಿದ್ದರಿಂದ ದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ತಾಲೂಕಿನ ಕುಮಾರಪಟ್ಟಣಂ ಪುಣ್ಯಕೋಟಿ ಮಠದ ತುಂಗಾಭದ್ರಾ ನದಿ ತೀರದಲ್ಲಿ ನಡೆದ ಮೂರನೇ ವರ್ಷದ ಐತಿಹಾಸಿಕ ತುಂಗಾರತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜಕ್ಕೆ ಒಳಿತು ಮಾಡುವವರಿಗೆ ಸಹಾಯ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಸರಕಾರ ಮಠ-ಮಂದಿರಗಳಿಗೆ ಅನುದಾನ ನೀಡುತ್ತದೆ.

ಅಲ್ಲಿ ಯಾವುದೇ ಭ್ರಷ್ಟಾಚಾರ ನಡೆಯಲ್ಲ. ಸರ್ಕಾರ ಮಠ ಮಂದಿರಗಳಿಗೆ ಹಣ ಕೊಡುತ್ತದೆ ಎಂದು ಟೀಕೆ ಮಾಡುತ್ತಾರೆ. ಅದನ್ನು ಯಾವುದೂ ಲೆಕ್ಕಿಸಲ್ಲ ಮುಂದೆಯೂ ಮಠ ಮಂದಿರಗಳಿಗೆ ಅನುದಾನ ನೀಡುತ್ತೇವೆ. ಕುಮಾರಪಟ್ಟಣಂ ಗ್ರಾಮದ ಅಭಿವೃದ್ಧಿಗೆ ಹಾಗೂ ಮಠದ ಅಭಿವೃದ್ಧಿಗೆ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಗಂಗಾರತಿ ಮಾದರಿಯಲ್ಲಿ ತುಂಗಾರತಿ ರಾಜ್ಯದಲ್ಲಿಯೇ ಐತಿಹಾಸಿಕ ಕಾರ್ಯಕ್ರಮವಾಗಿದೆ. ಆದ್ದರಿಂದ, ಜಲಸಂಪನ್ಮೂಲ ಇಲಾಖೆ ನೆರವಿನಿಂದ ಪುಣ್ಯಕೋಟಿ ಮಠದ ಅಭಿವೃದ್ಧಿಗೆ ಸಚಿವ ಕೆ.ಎಸ್‌.ಈಶ್ವರಪ್ಪನವರು ಅನುದಾನ ನೀಡಬೇಕು. ಮಠ ಮಾನ್ಯಗಳಿಗೆ ಸಾಕಷ್ಟು ಅನುದಾನ ನೀಡಿದ್ದೀರಿ. ಅದರಂತೆ ಗ್ರಾಮದ ಅಭಿವೃದ್ಧಿಗೆ 10 ಕೋಟಿ ಅನುದಾನ ( 2 ಕೋಟಿ ಮಠಕ್ಕೆ) ನೀಡಬೇಕು. ರಂಭಾಪುರಿ ಶ್ರೀಗಳಲ್ಲಿ ಅಪಾರ ಶಕ್ತಿಯಿದೆ. ಜಗದೀಶ್ವರ ಶ್ರೀಗಳಿಗೆ ರಂಭಾಪುರಿ ಶ್ರೀ ಆದಷ್ಟು ಶೀಘ್ರವಾಗಿ ಪಟ್ಟಾಭಿಷೇಕ ಮಾಡಬೇಕು. ಪಟ್ಟಾಭಿಷೇಕದ ಸಂಪೂರ್ಣ ವೆಚ್ಚ ನಾನೇ ಭರಿಸುವೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರು ಸ್ವಾಮಿಗಳು ಮಾತನಾಡಿ, ವ್ಯಕ್ತಿ ವ್ಯಕ್ತಿಗಳಲ್ಲಿ ಮತ್ತು ಧರ್ಮ ಧರ್ಮಗಳಲ್ಲಿ ಭಾವನ್ಮಾತಕ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಎಲ್ಲೆಡೆ ಸಾಮರಸ್ಯ, ಸದ್ಭಾವನೆಗಳನ್ನು ಬೆಳೆಸಬೇಕಾಗಿದೆ. ಭಾವೈಕ್ಯತೆ ಬೆಳೆಸುವುದೇ ತುಂಗಾರತಿಯ ಮೂಲ ಉದ್ದೇಶವಾಗಿದೆ.

Advertisement

ಎಲ್ಲ ಧರ್ಮಗಳಲ್ಲಿ ಮಾನವೀಯತೆಯ ಆದರ್ಶ ಚಿಂತನೆಗಳಿವೆ. ಪೂರ್ವದ ಆಚಾರ್ಯರು, ಋಷಿ, ಮುನಿಗಳು ಮತ್ತು ಸಂತರು ಮಾನವ ಕಲ್ಯಾಣಕ್ಕಾಗಿ ವಿಶ್ವ ಬಂಧುತ್ವದ ಸಂದೇಶ ಕೊಟ್ಟಿದ್ದಾರೆ ಎಂದರು.

ಆಧುನಿಕ ಜಗತ್ತಿನಲ್ಲಿ ಮನುಷ್ಯ ಬಹಳಷ್ಟು ವೈಚಾರಿಕ ಮನೋಭಾವನೆ ಹೊಂದಿ ನಾಸ್ತಿಕ ಪ್ರವೃತ್ತಿ ತಾಳುತ್ತಿರುವುದು ನೋವಿನ ಸಂಗತಿ. ಮಾನವ ಧರ್ಮಕ್ಕೆ ಜಯವಾಗಲಿ ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲೆಂಬ ನುಡಿಗಳು ಭಾವೈಕ್ಯತೆಗೆ ಸಾಕ್ಷಿಯಾಗಿವೆ. ಸತ್ಯ ಶುದ್ಧವಾದ ಧರ್ಮಾಚರಣೆಯಿಂದ ಜೀವನ ಉಜ್ಜಲಗೊಳ್ಳುವುದು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಸಕಲ ಜೀವಾತ್ಮರಿಗೆ ಒಳಿತಾಗುವ ಬೋಧನೆ ಮಾಡಿದ್ದನ್ನು ಮರೆಯುವಂತಿಲ್ಲ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಬೆಳೆದು ಬಂದಾಗ ಎಲ್ಲೆಡೆ ಶಾಂತಿ ಸಾಮರಸ್ಯ ಮೂಡಿಬರಲು ಸಾಧ್ಯವಾಗುತ್ತದೆ. ಮೂರು ವರ್ಷ ಗಳಿಂದ ಪುಣ್ಯಕೋಟಿ ಮಠದಲ್ಲಿ ಜಗದೀಶ್ವರ ಸ್ವಾಮಿಗಳು ಭಕ್ತರ ಸಹಕಾರದಿಂದ ತುಂಗಾರತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪನವರಿಗೆ ಆಚಾರ್ಯ ವ ಮಹಾಚಾರ್ಯ ಸೇವಾ ವಿಭೂಷಣ ಪ್ರಶಸ್ತಿ ನೀಡಲಾಯಿತು.

ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು, ನುಗ್ಗೇಹಳ್ಳಿ ಪುರವರ್ಗ ಮಠದ ಮಹೇಶ್ವರ ಶಿವಾಚಾರ್ಯರು, ಹಿಪ್ಪರಗಿ ಹಿರೇಮಠ ಮಾದನ ಶಾಂತವೀರ ಶಿವಾಚಾರ್ಯ ಸ್ವಾಮಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಹರಿಹರ ಶಾಸಕ ಎಸ್‌.ರಾಮಪ್ಪ, ಮಾಜಿ ಸಚಿವರಾದ ಎಚ್‌.ಆಂಜನೇಯ, ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಸೋಮಣ್ಣ ಬೇವಿನಮರದ, ಬಿ.ಪಿ.ಹರೀಶ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕೆಪಿಸಿಸಿ ಸದಸ್ಯ ಪ್ರಕಾಶ ಕೋಳಿವಾಡ, ದಾವಣಗೆರೆ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ, ದೊಡ್ಡಬಾತಿ ತಪೋವನ ಅಧ್ಯಕ್ಷ ಡಾ.ಶಶಿಕುಮಾರ ಮೆಹರವಾಡೆ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಅರುಣಕುಮಾರ ಪೂಜಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾಪಂ ಅಧ್ಯಕ್ಷ ಚೇತನ ಪೂಜಾರ ಮತ್ತಿತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next