Advertisement

ಪಿಡಿಪಿ, ಎನ್‌ಸಿ, ಕಾಂಗ್ರೆಸ್‌ ಉಗ್ರ ಸಂಘಟನೆಗಳು: ಬಿಜೆಪಿ ನಾಯಕ ರೈನಾ

04:07 PM Nov 22, 2018 | udayavani editorial |

ಹೊಸದಿಲ್ಲಿ : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜಮ್ಮು ಕಾಶ್ಮೀರ ವಿಧಾನ ಸಭೆಯನ್ನು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ವಿಸರ್ಜಿಸಿದ ಪರಿಣಾಮವಾಗಿ ರಾಜ್ಯದಲ್ಲಿ ರಾಜಕೀಯ ಕ್ಷೋಭೆ, ಗೊಂದಲ ಏರ್ಪಟ್ಟಿರುವ ನಡುವೆಯೇ ಬಿಜೆಪಿ ರಾಜ್ಯ ಅಧ್ಯಕ್ಷ ರವೀಂದರ್‌ ರೈನಾ ಅವರು ಪಿಡಿಪಿ, ಎನ್‌ ಸಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಅನುಕ್ರಮವಾಗಿ ಲಷ್ಕರ್‌ ಎ ತಯ್ಯಬ, ಜೈಶ್‌ ಎ ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗಳಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ.

Advertisement

ಪಿಡಿಪಿ, ಎನ್‌ಸಿ ಮತ್ತು ಕಾಂಗ್ರೆಸ್‌ ಪರಸ್ಪರ ಬದ್ಧ ರಾಜಕೀಯ ವಿರೋಧಿ ಪಕ್ಷಗಳಾಗಿರುವ ಹೊರತಾಗಿಯೂ ಸಮಯ ಸಾಧಕತೆಯಿಂದ ಸರಕಾರ ರಚಿಸುವ ಸಲುವಾಗಿ “ಉಗ್ರ-ಸ್ನೇಹಿ ಕೂಟ’ವನ್ನು ರಚಿಸಿಕೊಂಡಿವೆ ಎಂದು ರೈನಾ ಟೀಕಿಸಿದ್ದಾರೆ.

ನಿನೆಯ ಅಚ್ಚರಿಯ ಬೆಳವಣಿಗೆಯಲ್ಲಿ ಮೆಹಬೂಬ ಮುಫ್ತಿ ಅವರ ಪಿಡಿಪಿ ತಾನು ಎನ್‌ ಸಿ ಮತ್ತು ಕಾಂಗ್ರೆಸ್‌ ಜತೆ ಸೇರಿ ಸರಕಾರ ರಚಿಸುವುದಾಗಿ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಅದೇ ವೇಳೆ ಪೀಪಲ್ಸ್‌ ಕಾನ್ಫರೆನ್ಸ್‌ನ ಇಬ್ಬರು ಸದಸ್ಯರು ತಾವು ಬಿಜೆಪಿ ಮತ್ತು ಇತರ ಪಕ್ಷಗಳ 18 ಶಾಸಕರ ಬೆಂಬಲದೊಂದಿಗೆ ಸರಕಾರ ರಚಿಸುವುದಾಗಿ ರಾಜ್ಯಪಾಲರಲ್ಲಿ ಹೇಳಿಕೊಂಡಿದ್ದರು.

ಇದರ ಒಟ್ಟು ಪರಿಣಾಮದಲ್ಲಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು, “ರಾಜ್ಯದಲ್ಲಿ ವ್ಯಾಪಕ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ; ಭಾರೀ ಪ್ರಮಾಣದಲ್ಲಿ ಹಣ ಬಳಕೆಯಾಗಲಿದೆ ಮತ್ತು ಒಟ್ಟಂದದಲ್ಲಿ ಅಸಾಧ್ಯ ಸರಕಾರ ರಚಿಸಲ್ಪಡುವ ಸಂಭವವಿದೆ’ ಎಂದು ಹೇಳಿ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ್ದರು.

ಪ್ರಕೃತ ರಾಜ್ಯಪಾಲರ ಆಳ್ವಿಕೆಯಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಈಗಿನ್ನು ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕದಲ್ಲಿ ಮತ್ತೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next