Advertisement

ಸರ್ಕಾರಿ ಜಾಗವನ್ನೇ ಮಾರಿದ ಪಿಡಿಒ?

02:57 PM Dec 10, 2019 | Suhan S |

ಬಾಗಲಕೋಟೆ: ಗ್ರಾಮೀಣ ಪ್ರದೇಶವಾದರೂ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಇಲ್ಲಿನ ಶಿಗಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ, ಭೂಮಿಗೆ ಈಗ ಬಂಗಾರದ ಬೆಲೆ. ಇದನ್ನೇ ದುರುಪಯೋಗಪಡಿಸಿಕೊಂಡ ಗ್ರಾಪಂ. ಪಿಡಿಒ ಹಾಗೂ ಆಡಳಿತ ಮಂಡಳಿಯವರು, ಸರ್ಕಾರಿ ಜಾಗವನ್ನೇ ಮಾರಾಟ ಮಾಡಿದ್ದಾರೆ ಎಂಬ ಪ್ರಬಲ ಆರೋಪ ಕೇಳಿ ಬಂದಿದೆ.

Advertisement

ಜಿಲ್ಲೆಯ ಲೋಕಾಪುರ, ಸಾವಳಗಿ, ಸಿಮೀಕೇರಿ ಹೀಗೆ ಹಲವು ಗ್ರಾಪಂಗಳಲ್ಲಿ ನಿವೇಶನ ಬೆಲೆ ದುಬಾರಿಯಾಗಿವೆ. ಶೀಗಿಕೇರಿ ಸುತ್ತ, ನವನಗರ ಯೂನಿಟ್‌-3ರೂಪುಗೊಳ್ಳುವುದು ಖಾತ್ರಿಯಾದ ಬಳಿಕ ಹಾಗೂ ವಿವಿಧ ಪುನರ್‌ವಸತಿ ಕೇಂದ್ರಗಳಲ್ಲಿ ಶಿಗಿಕೇರಿ ಕ್ರಾಸ್‌ಗೆ ಸ್ಥಳಾಂತರಿಸಿದ ಬಳಿಕ, ಇಲ್ಲಿನ ಭೂಮಿಗೆ ಭಾರಿ ಬೆಲೆ ಬಂದಿದೆ. ಹಲವರು ಈ ಭಾಗದಲ್ಲಿ ನಿವೇಶನ ಖರೀದಿಗೆ ಮುಂದಾದರೆ, ಇನ್ನೂ ಕೆಲವರು ಪಂಚಾಯತನೊಂದಿಗೆ ಶಾಮೀಲಾಗಿ ಸರ್ಕಾರದ ಆಸ್ತಿಯನ್ನೇ ಕಬಳಿಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಬೇಡಿಕೆ: ಶಿಗಿಕೇರಿ ಗ್ರಾಮ ಈ ಮೊದಲು ನೀರಲಕೇರಿ ಗ್ರಾಪಂ. ವ್ಯಾಪ್ತಿಯಲ್ಲಿತ್ತು. 2015-16ರಲ್ಲಿ ನಡೆದ ಗ್ರಾಪಂ ಪುನರ್‌ವಿಂಗಡಣೆ ವೇಳೆ ಶಿಗಿಕೇರಿ ಪ್ರತ್ಯೇಕ ಪಂಚಾಯಿತಿಯಾಗಿ ರೂಪುಗೊಂಡಿದೆ. ಅಲ್ಲದೇ ಶಿಗಿಕೇರಿ ಗ್ರಾಮದ ಮೂಲಕ ರಾಯಚೂರುಬಾಚಿ ಹೆದ್ದಾರಿಯ ಕೂಡು ರಸ್ತೆ ಹಾದು ಹೋಗಿದ್ದು, ಇದರ ಪಕ್ಕದಲ್ಲೇ ಪೊಲೀಸರು ಖಾಸಗಿಯಾಗಿ ರೂಪಿಸಿದ ಪದ್ಮನಯನ ಕಾಲೋನಿ, ಕೆಎಚ್‌ಬಿ ಕಾಲೋನಿ ಇವೆ. ಅಲ್ಲದೇ ಸಂಗೋಂದಿ, ಶಿರಗುಪ್ಪಿ ತಾಂಡಾ, ಅಂಡಮುರನಾಳ ಹಾಗೂ ಕದಾಂಪುರ ಪುರನ್‌ವಸತಿ ಕೇಂದ್ರಗಳನ್ನು ಇಲ್ಲಿಯೇ ನಿರ್ಮಿಸಲಾಗಿದೆ.

ನಗರದಿಂದ 3 ಕಿ.ಮೀ ಹಾಗೂ ನವನಗರದಿಂದ 2 ಕಿ.ಮೀ ದೂರದಲ್ಲಿ ಇರುವ ಶಿಗಿಕೇರಿಯಲ್ಲಿ ಬಾಡಿಗೆದಾರರೂ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಲ್ಲಿ ನಿವೇಶನ ಪಡೆದವರು, ಮನೆಗಳನ್ನು ನಿರ್ಮಿಸಿ, ಬಾಡಿಗೆ ಕೊಟ್ಟಿದ್ದಾರೆ. ಹೀಗಾಗಿ ಶಿಗಿಕೇರಿ ಕ್ರಾಸ್‌ನಲ್ಲಿ ವಾಸಿಸಿದರೆ ಗ್ರಾಮೀಣ ಪ್ರಮಾಣ ಪತ್ರಗಳು ದೊರೆಯುತ್ತವೆ ಎಂಬುದೂ ಕೆಲವರ ಆಶಯ. ಹೀಗಾಗಿ ಬಹುತೇಕರು ಇಲ್ಲಿ ಮನೆ, ನಿವೇಶನ, ಬಾಡಿಗೆ ಮನೆ ಮಾಡುತ್ತಾರೆ. ಇದರಿಂದ ಇಲ್ಲಿನ ನಿವೇಶನ, ಮನೆ, ಬಾಡಿಗೆ ಮನೆಗಳಿಗೂ ಹೆಚ್ಚಿನ ಬೇಡಿಕೆ ಇದೆ.

ನಿವೇಶನಗಳಿಗೆ ಲೆಕ್ಕವಿಲ್ಲ: ನಾಲ್ಕು ಪುನರ್‌ವಸತಿ ಕೇಂದ್ರಗಳು ಇಲ್ಲಿದ್ದು, ಅವು 1998ರಿಂದ 2002ರ ಅವಧಿಯಲ್ಲಿ ನಿರ್ಮಾಣಗೊಂಡಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್‌ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆಯಿಂದ ಸಂತ್ರಸ್ತರಿಗೆ ನಿವೇಶನ ಕೊಟ್ಟಿದ್ದು, ಬಹುತೇಕ ಸಂತ್ರಸ್ತರು ತಮ್ಮ ಹಳೆಯ ಊರು, ಇಲ್ಲವೇ ಸಂಬಂಧಿಕರ ಊರುಗಳಿಗೆ ಹೋಗಿದ್ದಾರೆ. ಇಲ್ಲಿ ಸಂತ್ರಸ್ತರಿಗೆ ನೀಡಿದ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಸಂತ್ರಸ್ತರು ನಿವೇಶನ ಮಾರಾಟ ಮಾಡುತ್ತಿದ್ದಂತೆ, ಇಲ್ಲಿ ನಗರದ ಜನ, ಸರ್ಕಾರಿ ನೌಕರರು, ಖಾಸಗಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ಖರೀದಿ ಮಾಡುವ ಸಂಪ್ರದಾಯ ಆರಂಭಗೊಂಡಿತ್ತು. ಇದನ್ನೇ ನೆಪವಾಗಿಟ್ಟುಕೊಂಡು, ಸರ್ಕಾರಿ ಗೋಮಾಳ, ಸರ್ಕಾರಿ ಜಾಗವನ್ನೂ ಮಾರಾಟ ಮಾಡಿದ ಆರೋಪ ಇದೀಗ ಕೇಳಿ ಬರುತ್ತಿದೆ.

Advertisement

ಎಲ್ಲಿಂದಲೋ ಬಂದವರು: ಶಿಗಿಕೇರಿ ಕ್ರಾಸ್‌ನಲ್ಲಿ ಒಂದು ನಿವೇಶನವಿದೆ ಅಂದರೆ ಸಾಕು, ಅದನ್ನು ಖರೀದಿ ಮಾಡುವವರಸಂಖ್ಯೆ ಹೆಚ್ಚುತ್ತದೆ. ಕಾರಣ, ಮುಂದೆ ನವನಗರ ಯೂನಿಟ್‌ -3 ಶಿಗಿಕೇರಿ ಸುತ್ತಲೂ ನಿರ್ಮಾಣಗೊಳ್ಳಲಿದ್ದು, ಆಗ ಇಡೀ ಶಿಗಿಕೇರಿ ಕ್ರಾಸ್‌, ನಗರ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲೊಂದು ನಿವೇಶನ ಖರೀದಿಸಿ, ಮುಂದೆ ಮಾರಾಟ ಇಲ್ಲವೇ ಮನೆ ಕಟ್ಟಿಸಿದರಾಯ್ತು ಎಂದು ಚಿಂತನೆ ಮಾಡುವವರೇ ಹೆಚ್ಚು. ಹೀಗಾಗಿ ಎಲ್ಲಿಂದಲೋ ಬಂದವರು, ಇಲ್ಲಿ ನಿವೇಶನ ಖರೀದಿ ಮಾಡಿದವರ ಪಾಲು ಒಂದಷ್ಟು ಇದ್ದರೆ, ಸ್ಥಳೀಯ ವ್ಯಕ್ತಿಗಳು, ಗ್ರಾಪಂ ಆಡಳಿತ ಮಂಡಳಿಯೊಂದಿಗೆ ಕೂಡಿಕೊಂಡು, ಖಾಲಿ ನಿವೇಶನಗಳನ್ನೂ ಮಾರಿದ್ದಾರೆ. ಸಂತ್ರಸ್ತರಿಗೆ ನೀಡಿದ ಒಂದೇ ನಿವೇಶನ, ಇಬ್ಬರುಮೂವರಿಗೆ ಹಕ್ಕು ಪತ್ರ ನೀಡಿದ ಪ್ರಕರಣಗಳೂ ಇಲ್ಲಿವೆ. ಇದರಲ್ಲಿ ಯುಕೆಪಿ ಕಚೇರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ.

ಸರ್ಕಾರಿ ಗೋಮಾಳ ಬಯಲಿಗೆ: ಶಿಗಿಕೇರಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಗೋಮಾಳದಲ್ಲಿ ಸುಮಾರು 14 ಜನರಿಗೆ ಪ್ರತ್ಯೇಕ ಖಾತೆ ತಯಾರಿಸಿ, ಕಂಪ್ಯೂಟರ್‌ ಉತಾರ ನೀಡಲಾಗಿದೆ. ಇದು ಕಳೆದ ಒಂದು ತಿಂಗಳಲ್ಲಿ ಬೆಳಕಿಗೆ ಬಂದಿದ್ದು, ಇಲ್ಲಿನ ಮಹಿಳೆಯರು ಹೋರಾಟದ ಹಾದಿ ಹಿಡಿದ್ದಾರೆ. ಸರ್ಕಾರಿ ಗೋಮಾಳ, ಮರಳಿ ಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ಇದಕ್ಕೆ ಪ್ರಬಲ ಧ್ವನಿ ಸಿಗುತ್ತಿಲ್ಲ. ಭ್ರಷ್ಟಾಚಾರ ಮಾಡಿದವರು, ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next