ರಾಮನಗರ: ಇ-ಖಾತೆ ಅಕ್ರಮದ ಆರೋಪದ ಮೇಲೆ ಅಮಾನತುಗೊಂಡಿದ್ದ ಬಿಡದಿ ಹೋಬಳಿ ಬೈರಮಂಗಲ ಗ್ರಾಮ ಪಂಚಾಯ್ತಿ ಪಿಡಿಒ ರವಿ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿಲ್ಲೆಯ ಕನಕಪುರ ತಾಲೂಕಿನ ಕೊಳ್ಳಿಗ ನಹಳ್ಳಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪಿಡಿಒ ರವಿ ಕುಮಾರ್ ಶವ ಪತ್ತೆಯಾಗಿದೆ.
ಚನ್ನಹಳ್ಳಿ ಗ್ರಾಪಂನಲ್ಲಿ ಅಕ್ರಮ ಪತ್ತೆ!: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ದೇವನಹಳ್ಳಿ ತಾಲೂಕು ಚನ್ನ ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2021ರ ಸೆಪ್ಟಂಬರ್‌ನಲ್ಲಿ ಅಪರಿಚಿತ ವ್ಯಕ್ತಿಯ ಡಾಂಗಲ್ ಉಪಯೋಗಿಸಿ, ಇ-ಸ್ವತ್ತು ಲಾಗಿನ್‌ನಲ್ಲಿ ಅಲ್ಲಿನ ಪಂಚಾಯ್ತಿ ಅಭಿವೃದ್ಧಿ ಅಧಿ ಕಾರಿಯ ಡಿಜಿಟಲ್ ಸಹಿ ಇಲ್ಲದೆ 36 ಖಾತೆಗಳನ್ನು ಅಕ್ರಮವಾಗಿ ಅನುಮೋದನೆಯಾಗಿದೆ ಎಂದು ದೇವ ನಹಳ್ಳಿ ತಾಲೂಕು ಪಂಚಾಯ್ತಿ ಇಒ ವಸಂತ ಕುಮಾರ್ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ (ಎಫ್.ಐ. ಆರ್ ಮಾಹಿತಿ- ಅಪರಾಧ ಸಂಖ್ಯೆ 0727/2021, ದಿನಾಂಕ 4ನೇ ಡಿಸೆಂಬರ್ 2021) ತನಿಖೆ ಕೈಗೆತ್ತಿ ಕೊಂಡಿದ್ದರು.
ದೇವನಹಳ್ಳಿ ತಾಲೂಕು ಪಂಚಾಯ್ತಿ ಇಒ ವಸಂತ ಕುಮಾರ್ ಅವರು ಸೈಬರ್ ಕ್ರೈಂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗುರುಪ್ರಸಾದ್.ಎಚ್.ಎನ್ ಎಂಬ ಅಪರಿಚಿತ ವ್ಯಕ್ತಿಯ ಹೆಸರಿನ ಡಾಂಗಲ್ ಅಸೈನ್ ಮಾಡಿ, ಚನ್ನಹಳ್ಳಿ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿ ಕಾರಿಯವರ ಇ-ಸ್ವತ್ತು ಲಾಗಿನ್ ದುರ್ಬಳಕೆ ಮಾಡಿಕೊಂಡು ಶ್ರೀ ತಿರುಪತಿ ರೆಡ್ಡಿ ಬಿನ್ ಬಾಬ್ ರೆಡ್ಡಿ ಮತ್ತು ಅಜಯ್ ಎಂಬುವರ ಹೆಸರಿಗೆ 36 ಇ-ಸ್ವತ್ತು ಖಾತೆಗಳು ಅಕ್ರಮವಾಗಿ ಅನುಮೋದನೆಯಾಗಿದೆ ಎಂದು ದೂರಿದ್ದರು. ಕಾನೂನು ಬಾಹೀರವಾಗಿ ತಮ್ಮ ಇ-ಸ್ವತ್ತು ಲಾಗಿನ್ ಅನ್ನು ದುರ್ಬಳಕೆ ಮಾಡಿಕೊಂಡು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅವರ ಇ-ಸ್ವತ್ತು ಖಾತೆಗಳನ್ನು ಅಕ್ರಮವಾಗಿ ಅನುಮೋದಿಸಿರುವ ಸದರಿ ಆಸಾಮಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿದ್ದರು.
ಗ್ರಾಪಂ ಗಣಕಯಂತ್ರ ವಶ: ಅಕ್ರಮದಲ್ಲಿ ಪತ್ತೆಯಾದ ಡಾಂಗಲ್ ಗುರುಪ್ರಸಾದ್ ಎಚ್.ಎನ್ ಅವರ ಹೆಸರಿನಲ್ಲಿದ್ದು, ಇವರು ಹಾರೋಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರಾಗಿದ್ದರು. ಹೀಗಾಗಿ ಸೈಬರ್ ಕ್ರೈಂ ಪೊಲೀಸರು 2022ರ ಮಾರ್ಚ್‌ನಲ್ಲಿ ಕನಕಪುರ ತಾಲೂಕು ಹಾರೋಹಳ್ಳಿ ಪಟ್ಟಣ ಪಂಚಾಯ್ತಿ ಮತ್ತು ರಾಮನಗರದ ಬಿಡದಿ ಹೋಬಳಿ ಬೈರಮಂಗಲ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ಕೊಟ್ಟು ಗಣಕಯಂತ್ರಗಳನ್ನು ವಶಕ್ಕೆ ತೆಗೆದುಕೊಂಡು ಹೋಗಿದ್ದರು.
ನಂತರ ಹಾರೋಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಭರತ್ ಎಂಬುವನನ್ನು ಪೊಲೀಸರು ಬಂಧಿಸಿದ್ದರು. ಈತ ತನ್ನ ಸ್ವ -ಇಚ್ಚಾ ಹೇಳಿಕೆಯಲ್ಲಿ ಬೈರಮಂಗಲ ಗ್ರಾಮ ಪಂಚಾಯ್ತಿ ಪಿಡಿಒ ರವಿಕುಮಾರ್ ಜೆ.ಡಿ ಎಂಬುವರು ತಮಗೆ ಖಾಯಂ ಕೆಲಸದ ಆಮೀಷವೊಡ್ಡಿ ಹಾರೋಹಳ್ಳಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರ (ಗುರುಪ್ರಸಾದ್) ಡಾಂಗಲ್ ಬಳಸಿ, ಎನಿ ಡೆಸ್ಕ್ ತಂತ್ರಾಂಶದ ಮೂಲಕ 36 ಇ-ಖಾತೆಗಳನ್ನು ಅಕ್ರಮವಾಗಿ ಅನುಮೋದಿಸಿರುವುದಾಗಿ ಹೇಳಿದ್ದ. ಸದರಿ ರವಿಕುಮಾರ್ ವಿರುದ್ಧ ವಿದ್ಯುನ್ಮಾನ ಸಾಕ್ಷ್ಯಗಳು ಲಭ್ಯವಾಗಿದ್ದವು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಪಿಡಿಒ ಆಗಿದ್ದ ರವಿ ಕುಮಾರ್ ನಾಪತ್ತೆಯಾಗಿದ್ದ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಅವರು ಏಪ್ರಿಲ್ 6ರಂದು ಆದೇಶ ಹೊರೆಡಿಸಿ, ಬೈರಮಂಗಲ ಗ್ರಾಮ ಪಂಚಾಯ್ತಿ ಪಿಡಿಒ ರವಿಕುಮಾರ್.ಜೆ.ಡಿ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶಿಸಿದ್ದರು.
ಅಕ್ರಮದ ತನಿಖೆ ಪೂರ್ಣಗೊಂಡಿಲ್ಲ: ಇ-ಖಾತೆ ಅಕ್ರಮದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಪಿಡಿಒ ರವಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿಡಿಒ ರವಿ ಕುಮಾರ್ ಡೆತ್‌ನೋಟ್ ಬರೆದಿದ್ದಾನೆಯೇ? ಬರೆದಿದ್ದರೆ ಅದರಲ್ಲಿ ಯಾರ್ಯಾರ ಹೆಸರಿದೆ? ಆತ್ಮಹತ್ಯೆಗೆ ಪ್ರಚೋದನೆ ಏನಾಗಿತ್ತು? ಹೀಗೆ ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿರುವ ಇಡೀ ಪ್ರಕರಣವ ಪಿಡಿಒ ರವಿ ಕುಮಾರ್ ಸಾವಿ ನಿಂದಾಗಿ ತನಿಖೆ ಹಳ್ಳಹಿಡಿಯದಿರಲಿ. ಪ್ರಕರಣದ ತನಿಖೆ ಮುಂದುವರಿಸಿ, ತಾರ್ಕಿಕ ಹಂತಕ್ಕೆ ತೆಗೆದುಕೊಂಡ ಹೋಗುವಂತೆ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.