ಲಾಹೋರ್: ಪಾಕಿಸ್ತಾನ ಕ್ರಿಕೆಟ್ ನಲ್ಲಿ ಯಾರು ಯಾವ ಹುದ್ದೆಯಲ್ಲಿದ್ದಾರೆಂದು ಕೇಳಿದರೆ ಪಕ್ಕನೆ ಹೇಳುವುದು ಕಷ್ಟ. ಅಷ್ಟೊಂದು ಬದಲಾವಣೆಗಳು ನಡೆಯುತ್ತಿದೆ. ಇತ್ತೀಚೆಗೆನಷ್ಟೆ ನಾಯಕನ ಬದಲಾವಣೆಯೂ ಆಗಿದೆ. ಇದರ ನಡುವೆ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಕೋಚ್ ಆಗಿ ನೇಮಕವಾಗಿದ್ದ ಗ್ಯಾರಿ ಕರ್ಸ್ಟನ್ (Gary Kirsten) ಅವರು ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರು ಕೋಚಿಂಗ್ ನಲ್ಲಿ ಉತ್ತಮ ಹೆಸರು ಸಂಪಾದಿಸಿದವರು. 2011ರಲ್ಲಿ ವಿಶ್ವಕಪ್ ಗೆದ್ದ ವೇಳೆ ಅವರು ಭಾರತ ತಂಡದ ಕೋಚ್ ಆಗಿದ್ದವರು. ಕಳೆದ ನಾಲ್ಕು ತಿಂಗಳ ಹಿಂದೆ ಅವರು ಪಾಕಿಸ್ತಾನದ ಏಕದಿನ ಮತ್ತು ಟಿ20 ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗಿದ್ದರು.
ಕರ್ಸ್ಟನ್ ಪಾಕಿಸ್ತಾನದ ಸೀಮಿತ ಓವರ್ ಮಾದರಿ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಬಹಳಷ್ಟು ಬದಲಾಗಿದೆ. ಬಾಬರ್ ಅಜಂ ನಾಯಕನಾಗಿ ಹಿಂದಿರುಗಿದ ವೇಗದಲ್ಲಿಯೇ ಮತ್ತೆ ರಾಜೀನಾಮೆ ನೀಡಿದ್ದಾರೆ. ಆಯ್ಕೆ ಸಮಿತಿ ಬದಲಾವಣೆಗಳಾಗಿದೆ. ಎರಡು ದಿನಗಳ ಹಿಂದಷ್ಟೇ ಮೊಹಮ್ಮದ್ ರಿಜ್ವಾನ್ ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಕ್ರಿಕ್‌ಬಝ್ ನಲ್ಲಿನ ವರದಿಯ ಪ್ರಕಾರ, ಕರ್ಸ್ಟನ್ ಮತ್ತು ಆಟಗಾರರ ನಡುವೆ ಕಳೆದ ಕೆಲವು ವಾರಗಳಲ್ಲಿ ಕೆಲವು ಗಂಭೀರವಾದ ಭಿನ್ನಾಭಿಪ್ರಾಯಗಳು ಹೊರಹೊಮ್ಮಿವೆ. ಗ್ಯಾರಿ ಕರ್ಸ್ಟನ್ ಅವರು ಪಾಕ್ ತಂಡದ ಹೈ ಪರ್ಫಾರ್ಮೆನ್ಸ್ ಕೋಚ್ ಆಗಿ ಡೇವಿಡ್ ರೀಡ್ ನೇಮಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಳಿ ವಿನಂತಿಸಿದ್ದರು. ಆದರೆ ಅದನ್ನು ಮಂಡಳಿಯು ತಿರಸ್ಕರಿಸಿತು. ಪಿಸಿಬಿ ಪರ್ಯಾಯವಾಗಿ ಕೆಲವು ಇತರ ಹೆಸರುಗಳನ್ನು ನೀಡಿತ್ತು. ಇದರಿಂದಾಗಿ ಕರ್ಸ್ಟನ್ ನಿರಾಶೆಗೊಂಡರು.
ಕರ್ಸ್ಟನ್ ರಾಜೀನಾಮೆ ತೆರವಾದ ಸ್ಥಾನಕ್ಕೆ ಇದುವರೆಗೆ ಯಾವುದೇ ಹೆಸರನ್ನು ಪಿಸಿಬಿ ಅಂತಿಮಗೊಳಿಸಿಲ್ಲ. ಆದರೆ ಟೆಸ್ಟ್ ಕೋಚ್ ಆಗಿರುವ ಜೇಸನ್ ಗಿಲ್ಲೆಸ್ಪಿ ಅವರೇ ಮೂರು ಮಾದರಿಯ ತಂಡಕ್ಕೆ ಕೋಚ್ ಆಗುವ ಸಾಧ್ಯತೆಯಿದ ಎನ್ನಲಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ಪಾಕಿಸ್ತಾನದಲ್ಲಿಯೇ ಚಾಂಪಿಯನ್ಸ್ ಟ್ರೋಫಿ ಕೂಟ ನಡೆಯಲಿದೆ. ಇದಕ್ಕೂ ಮೊದಲು ಬಹಳಷ್ಟು ಬದಲಾವಣೆಗಳು ತಂಡಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.