ಬೆಂಗಳೂರು: HP ಯು ಭಾರತದಲ್ಲಿ ನಡೆಸಿದ ಗೇಮಿಂಗ್ ಅಧ್ಯಯನದ ಎರಡನೇ ಆವೃತ್ತಿಯಲ್ಲಿ, ಗೇಮಿಂಗ್‌ಗೆ PC ಯು ಹೆಚ್ಚು ಆದ್ಯತೆಯ ಸಾಧನವಾಗಿ ಮುಂದುವರಿದಿದೆ.
HP ಇಂಡಿಯಾ ಗೇಮಿಂಗ್ ಲ್ಯಾಂಡ್‌ಸ್ಕೇಪ್ ಸ್ಟಡಿ 2022 ನಡೆಸಿದ ಅಧ್ಯಯನದಲ್ಲಿ 14 ಭಾರತೀಯ ನಗರಗಳ 2,000 ಮಂದಿ ಪ್ರತಿಕ್ರಿಯಿಸಿದ್ದು, 68% ಗೇಮರ್ ಗಳು PC ಗೆ ಆದ್ಯತೆ ನೀಡಿದ್ದಾರೆ. ಉತ್ತಮ ಡಿಸ್‌ಪ್ಲೇಗಳೊಂದಿಗೆ ಉತ್ತಮ ಪ್ರೊಸೆಸರ್‌ಗಳು, ವಿನ್ಯಾಸ ಮತ್ತು ಗ್ರಾಫಿಕ್ಸ್ ಲಭ್ಯವಿರುವುದು ಇದಕ್ಕೆ ಕಾರಣ.
ಅಧ್ಯಯನದ ಪ್ರಕಾರ, ಗಂಭೀರ ಗೇಮರ್‌ಗಳ ಪೈಕಿ ಸುಮಾರು ಮೂರನೇ ಎರಡರಷ್ಟು ಜನರು ಗೇಮಿಂಗ್ ಅನ್ನು ಪೂರ್ಣಕಾಲದ ಅಥವಾ ಅರೆಕಾಲಿಕ ವೃತ್ತಿಯಾಗಿ ಅನ್ವೇಷಿಸಲು ಬಯಸುತ್ತಾರೆ. ಹವ್ಯಾಸವೇ ವೃತ್ತಿಯಾಗುವ ಸಾಧ್ಯತೆಯೇ ಗೇಮಿಂಗ್ ನತ್ತ ಗೇಮರ್‌ಗಳನ್ನು ಸೆಳೆಯಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಗೇಮಿಂಗ್ ಅನ್ನು ಮನೋರಂಜನೆ ಮತ್ತು ವಿಶ್ರಾಂತಿ (92%), ಮಾನಸಿಕ ಸಾಮರ್ಥ್ಯ ವೃದ್ಧಿ (58%) ಹಾಗೂ ಸಾಮಾಜಿಕವಾಗಿ ಬೆರೆಯಲು (52%) ಮೂಲವಾಗಿ ಪರಿಗಣಿಸಲಾಗಿದೆ.
2022ರ ಈ ಸಮೀಕ್ಷೆಗೆ ದೇಶದ ಒಟ್ಟು 14 ಶ್ರೇಣಿ-1 ಮತ್ತು ಶ್ರೇಣಿ-2 ನಗರಗಳಲ್ಲಿ ಒಟ್ಟು 2010 ಜನರು ಪ್ರತಿಕ್ರಿಯಿಸಿ ಪೂರ್ಣಗೊಳಿಸಿದ್ದಾರೆ. 18-40 ವರ್ಷ ವಯಸ್ಸಿನ ಪುರುಷ (75%) ಮತ್ತು ಸ್ತ್ರೀ (25%)ಯರನ್ನು ಸಂದರ್ಶಿಸಲಾಯಿತು. ಪ್ರತಿಕ್ರಿಯಿಸಿದವರ ಪೈಕಿ PC ಬಳಕೆದಾರರು (60%) ಮತ್ತು ಮೊಬೈಲ್ ಫೋನ್ ಬಳಕೆದಾರರು (40%) ಸೇರಿದ್ದಾರೆ.