ಬೆಂಗಳೂರು: ಸಕ್ಕರೆ ಕಾರ್ಖಾನೆಗಳಲ್ಲಿರುವ ಸಕ್ಕರೆ ಮಾರಾಟ ಮಾಡಿಯಾದರೂ ಜೂನ್ ಅಂತ್ಯದೊಳಗೆ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಹಣ ಕೊಡಿಸುವಂತೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರ ಬಾಕಿ ಹಣ ಪಾವತಿಸದಿದ್ದರೆ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳುವಂತೆ ತಾಕೀತು ಮಾಡಿದರು.
ರೈತರ ಕಬ್ಬಿನ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು ಜೂ.30ರೊಳಗೆ ರೈತರಿಗೆ ಬಾಕಿ ಹಣ ಸಂದಾಯ ಮಾಡಬೇಕು. ಒಂದು ವೇಳೆ ಹಣ ಪಾವತಿ ಮಾಡದಿದ್ದರೆ ಆ ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿ ಆ ಹಣವನ್ನು ರೈತರಿಗೆ ನೀಡುವಂತೆ ತಿಳಿಸಿದರು.
ರಾಜ್ಯದ ಎಲ್ಲ ಕಾರ್ಖಾನೆಗಳಿಂದ ಶೇ. 91.09 ರಷ್ಟು ಹಣವನ್ನು ಪಾವತಿ ಮಾಡಲಾಗಿದೆ. ಇನ್ನೂ ಶೇ. 8.01 ರಷ್ಟು ಹಣ ಪಾವತಿಸಬೇಕು. 11,948.39 ಕೋಟಿ ರೂ. ಸಂದಾಯ ವಾಗಿದ್ದು 1101.19 ಕೋಟಿ ರೂ. ಬಾಕಿಯಿದೆ ಎಂದು ಅಧಿಕಾರಿ ಗಳು ಮಾಹಿತಿ ನೀಡಿದರು. ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಉಪಸ್ಥಿತರಿದ್ದರು.